ADVERTISEMENT

‘ಮಾನವೀಯತೆ ಬೆಳೆಸಿ; ಉಗ್ರವಾದ ಅಳಿಸಿ’

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:37 IST
Last Updated 22 ಮೇ 2022, 2:37 IST
ಹುಬ್ಬಳ್ಳಿಯ ಜಯಚಾಮರಾಜನಗರದ ಕಲಾ ಹಾಗೂ ವಾಣಿಜ್ಯ ಮಹಿಳಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಭಯೋತ್ಪಾದನಾ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಕೆ.ಎಸ್‌. ಕೌಜಲಗಿ ಮಾತನಾಡಿದರು
ಹುಬ್ಬಳ್ಳಿಯ ಜಯಚಾಮರಾಜನಗರದ ಕಲಾ ಹಾಗೂ ವಾಣಿಜ್ಯ ಮಹಿಳಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಭಯೋತ್ಪಾದನಾ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಕೆ.ಎಸ್‌. ಕೌಜಲಗಿ ಮಾತನಾಡಿದರು   

ಹುಬ್ಬಳ್ಳಿ: ‘ಕಾನೂನಿನ ತಿಳಿವಳಿಕೆ ನೀಡುವುದರ ಜತೆಗೆ ಯುವಕರಲ್ಲಿ ಮಾನವೀಯತೆ ಬೆಳೆಸಿದರೆ ಭಯೋತ್ಪಾದನೆ ಕೊನೆಯಾಗಲಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಕೆ.ಎಸ್‌. ಕೌಜಲಗಿ ಹೇಳಿದರು.

ಇಲ್ಲಿನ ಜಯಚಾಮರಾಜನಗರದ ಕಲಾ ಹಾಗೂ ವಾಣಿಜ್ಯ ಮಹಿಳಾ ವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಭಯೋತ್ಪಾದನಾ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಯೋತ್ಪಾದನೆ ಜಾಗತಿಕ ಮಟ್ಟದ ಜ್ವಲಂತ ಸಮಸ್ಯೆಯಾಗಿದೆ. ಉಗ್ರವಾದಿಗಳು, ನಕ್ಸಲರು ಸಮಾಜದಲ್ಲಿ ಭೀತಿ ಉಂಟುಮಾಡಿ, ವ್ಯವಸ್ಥೆ ಹದಗೆಡಿಸುತ್ತಿದ್ದಾರೆ. ಕೊಲೆ, ಸುಲಿಗೆ, ಅಪಹರಣ, ಭ್ರಷ್ಟಾಚಾರವೂ ಭಯೋತ್ಪಾದನೆಯ ಮುಖಗಳಾಗಿವೆ. ಧರ್ಮದ ಹೆಸರಿನ ಉಗ್ರವಾದ ಹೆಚ್ಚುತ್ತಿದ್ದು, ದೇಶಕ್ಕಿಂತ ಧರ್ಮ ಮೊದಲು ಎಂಬ ಭಾವನೆಯೇ ಇದಕ್ಕೆ ಕಾರಣ. ಕೆಲವು ಸರ್ಕಾರಗಳು, ವಿವಿಧ ಸಂಘಟನೆಗಳು ಭಯೋತ್ಪಾದನೆಯನ್ನು ಪೋಷಿಸುತ್ತಿವೆ’ ಎಂದು ವಿವರಿಸಿದರು.

ADVERTISEMENT

‘ಅಸಮಾನತೆ, ನಿರುದ್ಯೋಗ, ಬಡತನ, ಶೋಷಣೆಯಿಂದ ನೊಂದ ಯುವಕರನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. ವಿದ್ಯಾವಂತರೇ ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಹಾಗಾಗಿ, ಯುವಜನತೆಯಲ್ಲಿ ಮಾನವೀಯ ಮೌಲ್ಯಗಳನ್ನು, ಧರ್ಮಕ್ಕಿಂತ ದೇಶ ದೊಡ್ಡದು ಎಂಬ ಭಾವನೆಯನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ವಿದ್ಯಾರ್ಥಿನಿಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಜ್ಯೋತಿಲಕ್ಷ್ಮಿ ಡಿ.ಪಿ., ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ. ಶಿವಲೀಲಾ ವೈಜಿನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.