ADVERTISEMENT

‘ಕನ್ನಡ ಕಟ್ಟುವ ಕೆಲಸ ಎಲ್ಲರದ್ದೂ’

ಇ ಬುಕ್ಸ್‌ (ಡಿಜಿಟಲೀಕರಣ) ಬಿಡುಗಡೆ ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 15:41 IST
Last Updated 21 ಜೂನ್ 2019, 15:41 IST
ಮೈಸೂರಿನಲ್ಲಿ ಶುಕ್ರವಾರ ಸಂಜೆ ಡಿ.ವಿ.ಕೆ.ಮೂರ್ತಿ ಪ್ರಕಾಶನದ ವತಿಯಿಂದ ನಡೆದ ಇ ಬುಕ್ಸ್‌ (ಡಿಜಿಟಲೀಕರಣ) ಬಿಡುಗಡೆ ಸಮಾರಂಭದಲ್ಲಿ ಡಾ.ಸಿ.ಎಸ್.ಯೋಗಾನಂದ, ಡಾ.ಪ್ರಧಾನ ಗುರುದತ್ತ, ಡಾ.ಮನು ಬಳಿಗಾರ್, ಅನಿರುದ್ಧ ಇದ್ದಾರೆ
ಮೈಸೂರಿನಲ್ಲಿ ಶುಕ್ರವಾರ ಸಂಜೆ ಡಿ.ವಿ.ಕೆ.ಮೂರ್ತಿ ಪ್ರಕಾಶನದ ವತಿಯಿಂದ ನಡೆದ ಇ ಬುಕ್ಸ್‌ (ಡಿಜಿಟಲೀಕರಣ) ಬಿಡುಗಡೆ ಸಮಾರಂಭದಲ್ಲಿ ಡಾ.ಸಿ.ಎಸ್.ಯೋಗಾನಂದ, ಡಾ.ಪ್ರಧಾನ ಗುರುದತ್ತ, ಡಾ.ಮನು ಬಳಿಗಾರ್, ಅನಿರುದ್ಧ ಇದ್ದಾರೆ   

ಮೈಸೂರು: ‘ಕನ್ನಡ ಕಟ್ಟುವ ಕೆಲಸ ಎಲ್ಲರದ್ದೂ ಆಗಿದೆ. ಇದು ಎಲ್ಲರಿಗೂ ಅನ್ವಯವಾದಾಗ ಮಾತ್ರ ಕನ್ನಡ ಭಾಷೆ ಉಳಿಯಲಿದೆ. ಬೆಳೆಯಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.

‘ಪ್ರಸ್ತುತದಲ್ಲಿ ಕನ್ನಡ ಉಳಿಯಬೇಕು–ಬೆಳೆಯಬೇಕು ಎಂದರೇ ಡಿಜಿಟಲೀಕರಣದ ಅಗತ್ಯವಿದೆ. ಕನ್ನಡದ ಉಳಿವಿಗಾಗಿ ಡಿಜಿಟಲೀಕರಣ ನಡೆಯಲೇಬೇಕಿದೆ’ ಎಂದು ನಗರದಲ್ಲಿ ಶುಕ್ರವಾರ ಸಂಜೆ ಡಿ.ವಿ.ಕೆ.ಮೂರ್ತಿ ಪ್ರಕಾಶನದ ವತಿಯಿಂದ ನಡೆದ ಇ ಬುಕ್ಸ್‌ (ಡಿಜಿಟಲೀಕರಣ) ಬಿಡುಗಡೆ ಸಮಾರಂಭದಲ್ಲಿ ಪ್ರತಿಪಾದಿಸಿದರು.

‘ಮುದ್ರಣ ಮಾಧ್ಯಮ ಮೂಲೆಗುಂಪಾಗುತ್ತಿದೆ. ಇದನ್ನು ಉಳಿಸಿಕೊಳ್ಳುವ ಜತೆಯಲ್ಲೇ ಅಂಗೈಯಲ್ಲೇ ಬ್ರಹ್ಮಾಂಡವನ್ನೇ ಹೊಂದಿರುವ ಡಿಜಿಟಲೀಕರಣವೂ ನಡೆಯಬೇಕಾದ ಅಗತ್ಯವಿದೆ’ ಎಂದರು.

ADVERTISEMENT

‘ಶ್ರೀಗಂಧ, ಕಾಫಿ, ಅಲ್ಫೋನ್ಸ್‌ ಮಾವಿನ ಹಣ್ಣು ನಮ್ಮವೇ ಶ್ರೇಷ್ಠ. ಆದರೆ ಇವು ಅಮೆರಿಕದಲ್ಲಿ ಹೆಚ್ಚು ಸಿಗುತ್ತಿವೆ. ಇದಕ್ಕೆ ಕಾರಣ ಗುಣಮಟ್ಟ. ಇದೇ ರೀತಿ ಗುಣಮಟ್ಟ ಉಳಿದರೆ ಮಾತ್ರ ಕನ್ನಡ ಉಳಿಯಲು, ಬೆಳೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಗಣಕೀಕರಣವಾದರೆ ಮಾತ್ರ ಭಾಷೆಯ ವಿಕಾಸ ಸಾಧ್ಯ ಎಂದು ಮೂರು ದಶಕದ ಹಿಂದೆಯೇ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ ಪ್ರತಿಪಾದಿಸಿದ್ದರು. ಭಾಷೆಯ ಬೆಳವಣಿಗೆಗೆ ಇದು ಇಂದು ಅತ್ಯಗತ್ಯವಾಗಿದೆ’ ಎಂದು ಮನು ಬಳಿಗಾರ ಹೇಳಿದರು.

‘ತಂತ್ರಜ್ಞಾನದ ಆವಿಷ್ಕಾರಗಳನ್ನು ಭಾಷೆಯ ಬೆಳವಣಿಗೆಗೆ ಬಳಸಿಕೊಳ್ಳಬೇಕು. ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆಯಲ್ಲಿ ನಾವು ಇಂದಿಗೂ ಸಾಕಷ್ಟು ಹಿಂದಿದ್ದೇವೆ. ಡಿಜಿಟಲೀಕರಣಕ್ಕಿರುವ ಅಡೆ–ತಡೆಯನ್ನು ನಿವಾರಿಸಿಕೊಂಡು ಮಲಯಾಳಿ, ತಮಿಳು ಭಾಷೆಗಳಂತೆ ನಾವೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ’ ಎಂದು ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಸಿ.ಎಸ್.ಯೋಗಾನಂದ ಅಭಿಪ್ರಾಯಪಟ್ಟರು.

‘ಗೂಗಲ್‌ ಗಮನ ಕನ್ನಡದತ್ತ ಹರಿಯಬೇಕು ಎಂದರೇ ಪ್ರತಿಯೊಬ್ಬರು ತಮ್ಮ ಸ್ಮಾರ್ಟ್‌ ಫೋನ್‌ಗಳಲ್ಲೂ ಕನ್ನಡ ಬಳಕೆ ಹೆಚ್ಚಿಸಿಕೊಳ್ಳಬೇಕು. ಲಭ್ಯವಿರುವ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಹೆಚ್ಚೆಚ್ಚು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಕನ್ನಡ ಭಾಷೆಯ ಉಳಿಸುವಲ್ಲಿ ಇದು ನಮ್ಮ ಕರ್ತವ್ಯವೂ ಆಗಿದೆ’ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಪ್ರಧಾನ ಗುರುದತ್ತ, ಡಿ.ವಿ.ಕೆ.ಮೂರ್ತಿ ಪ್ರಕಾಶನದ ಅನಿರುದ್ಧ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.