ADVERTISEMENT

ಅನಿಷ್ಟ ಪದ್ಧತಿ ಜೀವಂತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:40 IST
Last Updated 8 ಫೆಬ್ರುವರಿ 2012, 8:40 IST
ಅನಿಷ್ಟ ಪದ್ಧತಿ ಜೀವಂತ
ಅನಿಷ್ಟ ಪದ್ಧತಿ ಜೀವಂತ   

ಮುಂಡರಗಿ: `ಸದಾ ಪರೋಪಕಾರ, ಪರಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರಿಗೆ ಪೂಜೆ ಪುನಸ್ಕಾರಗಳ ಹಂಗಿರುವುದಿಲ್ಲ. ಅಂತಹ ಮಹನು ಭಾವರು ಮಾತ್ರ ತಮ್ಮ  ನಿಸ್ವಾರ್ಥ ಸೇವೆಯಿಂದ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನಕ್ಕಿಂತಲೂ ಹೆಚ್ಚು ಪುಣ್ಯ ಗಳಿಸಬಲ್ಲರು~ ಎಂದು ಹಾವೇರಿ ಕುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ ವದ ಅಂಗವಾಗಿ ಸೋಮವಾರ ರಾತ್ರಿ ಶ್ರಿಮಠದಲ್ಲಿ ಏರ್ಪಡಿಸಿದ್ದ `ಭಕ್ತ ಹಿತಚಿಂತನ ಗೋಷ್ಠಿ~ಯಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.    

`ದೇವರ ಹೆಸರಿನಲ್ಲಿ ಸಮಾಜದಲ್ಲಿ ಈಗಲೂ ಮನೆಮಾಡಿರುವ ತಲೆ ಬೋಳಿಸಿಕೊಳ್ಳುವಿಕೆ, ದೇವದಾಸಿ ಪದ್ಧತಿಯಂತಹ ಅನಿಷ್ಟ ಆಚರಣೆಗಳನ್ನು ಯಾವ ದೇವರೂ ಅಪೇಕ್ಷಿಸಲಾರ. ನೀಚ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅವೆಲ್ಲವುಗಳನ್ನು ಹುಟ್ಟು ಹಾಕಿದ್ದು, ಪ್ರಜ್ಞಾವಂತ ಜನರು ಅವುಗಳ ವಿರುದ್ಧ ಹೋರಾಡಿ, ಅವುಗಳನ್ನು ಬೇರು ಸಹಿತ ಕಿತ್ತೊಗೆಯಬೇಕು~ ಎಂದು ಅವರು ಸಲಹೆ ನೀಡಿದರು.

ಚಿಂತನೆ ಕೊರತೆಯಿಂದ ನಮ್ಮಲ್ಲಿ ಚಿಂತೆಗಳು ಹೆಚ್ಚಾಗಿ ಮಾನಸಿಕ ಕ್ಷೋಭೆ ಉಂಟಾಗ ತೊಡಗಿದೆ. ಕಲುಷಿತ ಗೊಂಡಿರುವ ಮನಸ್ಸನ್ನು ಶುದ್ಧಗೊಳಿಸಬೇಕಾಗಿದೆ~ ಎಂದು ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ ಸಲಹೆ ನೀಡಿದರು.
 
ಡಾ.ಅನ್ನದಾನೀಶ್ವರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಕೊಂಡಿದ್ದರು. ಕಲಕೇರಿ- ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಶಾಂತವೀರ ಸ್ವಾಮೀಜಿ, ಶಿವಶಾಂತವೀರ ಶರಣರು, ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಸಂಗಟಿ, ಶಂಶುದ್ದೀನ ಹಾರೋಗೆರಿ, ಮಲ್ಲಪ್ಪ ಸಂಗಟಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ವಚನ ಗೀತಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.