ADVERTISEMENT

ಅನುದಾನಿತ ಶಿಕ್ಷಕರಿಗೂ ನಿವೃತ್ತಿ ವೇತನ: ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:53 IST
Last Updated 23 ಸೆಪ್ಟೆಂಬರ್ 2013, 9:53 IST

ಗದಗ:  2006ರ  ಏಪ್ರಿಲ್‌ 1ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ನೀಡಿದ ಸೌಲಭ್ಯವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರ ರಿಗೂ ವಿಸ್ತರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, 2006ರ ಏಪ್ರಿಲ್‌ 1ರ ನಂತರ  ನೇಮಕಗೊಂಡ ಸರಕಾರಿ ನೌಕರರು ನೂತನ ವಂತಿಗೆ ಆಧಾರಿತ ನಿವೃತ್ತಿ ವೇತನ ಯೋಜನೆಗೆ ತಮ್ಮ ಮೂಲವೇತನ ಹಾಗೂ ತುಟ್ಟಿ ಭತ್ಯೆಯ ಶೇಕಡಾ 10ರಷ್ಟು ಹಣವನ್ನು ಜಮಾ ಮಾಡಬೇಕು. ಸರ್ಕಾರ ಮೂಲ ವೇತನ ಹಾಗೂ ತುಟ್ಟಿಭತ್ಯೆ ಶೇಕಡಾ 10ರಷ್ಟು ಹಣವನ್ನು ಜಮಾ ಮಾಡುತ್ತದೆ.

ಆದರೆ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಬೇರೆ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದರೆ ಅನುದಾನಿತ ನೌಕರರು ತಮ್ಮ ಮೂಲವೇತನ ಹಾಗೂ ತುಟ್ಟಿಭತ್ಯೆಯ ಶೇಕಡಾ 10ರಷ್ಟು ಹಣವನ್ನು ಈ ಯೋಜನೆ ಯಡಿ ತೊಡಗಿಸಬೇಕು. ಉಳಿದ ಶೇಕಡಾ 10ರಷ್ಟು ಹಣವನ್ನು ಆಡಳಿತ ಮಂಡಳಿಗಳಿಗಳು ಭರಿಸ ಬೇಕೆಂಬ ಅವೈಜ್ಞಾನಿಕ ಹಾಗೂ ಕಾರ್ಯ ಸಾಧುವಲ್ಲದ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ನಿವೃತ್ತಿ ವೇತನ ವನ್ನು ಸಂಪೂರ್ಣವಾಗಿ ಸರ್ಕಾರದ ಖಜಾನೆಯಿಂದಲೇ ಪಾವತಿಸುವ ವ್ಯವಸ್ಥೆ ಇದೆ. ಸದ್ಯ ವಂತಿಗೆ ಆಧಾರಿತ ನೂತನ ನಿವೃತ್ತಿ ವೇತನದ  ಸೌಲಭ್ಯವನ್ನು ಸರ್ಕಾರಿ ನೌಕರರು ಮಾತ್ರ ಪಡೆಯುತ್ತಿದ್ದು, ಹಲವಾರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಯಾವುದೇ ನಿವೃತ್ತಿ ವೇತನದ ಸೌಲಭ್ಯವಿಲ್ಲದೇ ನಿವೃತ್ತರಾಗಿದ್ದಾರೆ. ಈ ಯೋಜನೆ ಯಡಿ ಆಡಳಿತ ಮಂಡಳಿಗಳು ಈವರೆಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ  ನೌಕರರ ವಂತಿಗೆಯನ್ನು ತುಂಬದ್ದರಿಂದ ಸರ್ಕಾರದ ಆದೇಶದ ಉದ್ದೇಶ ನಿರರ್ಥಕವಾಗಿದೆ. 

ಅನುದಾನಕ್ಕೊಳಪಟ್ಟ ಸುಮಾರು 20 ಸಾವಿರ ಹಾಗೂ ಹೊಸದಾಗಿ ನೇಮಕವಾದ 5 ಸಾವಿರ ಸಿಬ್ಬಂದಿ ಈ ಆದೇಶದಿಂದಾಗಿ ನಿವೃತ್ತಿ ವೇತನ ಪ್ರಯೋಜನ ಪಡೆಯದಾಗಿದ್ದಾರೆ. ಈ ಆದೇಶ ಹೊರಡಿಸಿದ ಸರ್ಕಾರ  ಅನುಷ್ಠಾನವಾಗುತ್ತದೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ಆದೇಶಕ್ಕೆ ತಿದ್ದುಪಡಿ ತರಬೇಕಾಗಿತ್ತು. ಇಲ್ಲವೇ ಆಡಳಿತ ಮಂಡಳಿಗಳಿಂದ ಶೇಕಡಾ 10ರಷ್ಟು ವಂತಿಗೆ ತುಂಬಿಸಲು ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು ಎಂದು ಸಲಹೆ ನೀಡಿದಾ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.