ADVERTISEMENT

ಅಲ್ಪಸಂಖ್ಯಾತ ವರ್ಗಕ್ಕೆ ಲಿಂಗಾಯತರ ಸೇರ್ಪಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 11:20 IST
Last Updated 9 ಫೆಬ್ರುವರಿ 2011, 11:20 IST


ಮುಂಡರಗಿ: ವೀರಶೈವ ಅಥವಾ ಲಿಂಗಾಯತರು ದೇಶದ ಜನಸಂಖ್ಯೆಯಲ್ಲಿ ಬೌದ್ಧರಿಗಿಂತ ಕಡಿಮೆ ಇದ್ದು ಕೇಂದ್ರ ಸರಕಾರ ಅವರನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಎಸ್. ಪಾಟೀಲ ಒತ್ತಾಯಿಸಿದರು.ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 9ರಿಂದ ಜರುಗಲಿರುವ ರಾಷ್ಟ್ರೀಯ ಜನಗಣತಿಯ ಸಂದರ್ಭದಲ್ಲಿ ಲಿಂಗಾಯತರೆಲ್ಲ ವೀರಶೈವ ಅಥವಾ ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಎಂದು ಬರೆಯಿಸಬೇಕೆಂದು ತಿಳಿಸಿದರು.

‘ಸರಕಾರ ಪ್ರಸ್ತುತ ವರ್ಷ ನಡೆಸುತ್ತಿರುವ ಜನಗಣತಿಗೆ ಹಾಗೂ ಸರಕಾರ ನೀಡುವ ವಿವಿಧ ಸೌಲಭ್ಯಗಳಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪಂಚಮಸಾಲಿ, ರಡ್ಡಿ, ಬಣಜಿಗ, ಮಡಿವಾಳ, ಹಡಪದ, ಕುಂಬಾರ, ನೇಕಾರ ಮೊದಲಾದ ವೀರಶೈವ ಧರ್ಮದ ಉಪಜಾತಿಗಳ ಜನರು ಜಾತಿ ಕಾಲಂನಲ್ಲಿ ಕೇವಲ ವೀರಶೈವ ಲಿಂಗಾಯತರೆಂದು ಬರೆಯಿಸಬೇಕು’ ಎಂದು ಅವರು ಮನವಿ ಮಾಡಿಕೊಂಡರು.

‘ಈ ಕುರಿತಂತೆ ರಾಜ್ಯದ ಎಲ್ಲ ಮಠಾಧೀಶರ ಜೊತೆ ಚರ್ಚಿಸಲಾಗಿದ್ದು, ಲಿಂಗಾಯತ ಜನರು ಜನಗಣತಿ ಸಂದರ್ಭದಲ್ಲಿ ಲಿಂಗಾಯತರೆಂದು ಬರೆಯಿಸಲು ಅವರೆಲ್ಲ ಸಮ್ಮತಿಸಿದ್ದಾರೆ. 1931ರಲ್ಲಿ ಜರುಗಿದ ಜನಗಣತಿಯಲ್ಲಿ ಜಾತಿ ಸೂಚಿಸುವ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂಬ ಕಾಲಂ ಇತ್ತು. ಯಾವ ಕಾರಣಕ್ಕೆ ಅದನ್ನು ರದ್ದುಗೊಳಿಸಲಾಯಿತೆಂದು ತಿಳಿಯದಾಗಿದ್ದು ಈಗ ಲಿಂಗಾಯತರು ನಿಸ್ಸಂಕೋಚವಾಗಿ ವೀರಶೈವರೆಂದು ಬರೆಯಿಸಿ’ ಎಂದು ಅವರು ತಿಳಿಸಿದ್ದಾರೆ.

‘ಹಿಂದೂ ಧರ್ಮಕ್ಕೂ ವೀರಶೈವ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ಲಿಂಗಾಯತರಿದ್ದು, 2001ರಲ್ಲಿ ಜರುಗಿದ ಜನಗಣತಿಯಲ್ಲಿ ರಾಜ್ಯದಲ್ಲಿ ವೀರಶೈವರು ಕೇವಲ 49,69,619 ಜನರಿದ್ದಾರೆಂದು ದಾಖಲಾಗಿದೆ’ ಎಂದು ತಿಳಿಸಿದರು.‘ಅಖಿಲ ಭಾರತ ವೀರಶೈವ ಮಹಾಸಭಾದ ಸ್ಥಳೀಯ ಕಾರ್ಯಕರ್ತರು ತಾಲ್ಲೂಕಿನ ಲಿಂಗಾಯತರ ಮನೆಮನೆಗಳಿಗೆ ತೆರಳಿ ಈ ಕುರಿತಂತೆ ಸೂಕ್ತ ತಿಳಿವಳಿಕೆ ನೀಡುವಂತೆ ಸೂಚಿಸಲಾಗಿದೆ. ಗಣತಿದಾರರು ಮಹಿಳೆಯರಲ್ಲಿ ವಿನಾಕಾರಣ ಗೊಂದಲ ಸೃಷ್ಠಿಸದೆ ಜಾತಿ ಕಾಲಂನಲ್ಲಿ ಅವರು ಸೂಚಿಸುವ ಜಾತಿಯನ್ನು ದಾಖಲಿಸಿಕೊಳ್ಳಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಸಿ.ಪಾಟೀಲ ತಿಳಿಸಿದರು.ಕೊಟ್ರೇಶ ಅಂಗಡಿ, ಶಿವಲಿಂಗಪ್ಪ ಡಂಬಳ, ಗುಂಡಪ್ಪ ತಿಗರಿ, ಎಸ್.ಎಸ್. ಪದಕಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.