ADVERTISEMENT

ಇದು ಗದಗ ಹೈಟೆಕ್ಬಸ್ ನಿಲ್ದಾಣ...!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 9:05 IST
Last Updated 21 ಫೆಬ್ರುವರಿ 2011, 9:05 IST

ಗದಗ: ರಾಜ್ಯದಲ್ಲಿಯೇ ಅತ್ಯುನ್ನತವಾದ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಯೊಂದಿಗೆ ನಿರ್ಮಾಣಗೊಂಡ ಗದಗ ಬಸ್ ಟರ್ಮಿನಲ್ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಕಳೆದ ಐದು ವರ್ಷದ ಹಿಂದೆ ಸಾರ್ವಜನಿಕರ ಸೇವೆಗೆ ತೆರೆದುಕೊಂಡ ಈ ಬಸ್ ಟರ್ಮಿನಲ್ ಈಗಿನ ಸ್ಥಿತಿಯಲ್ಲಿಯೇ ಮುಂದುವರಿದಿದ್ದೇ ಆದರೆ ಇತಿಹಾಸದ ಪಳಿಯುಳಿಕೆಯಾಗುವುದರಲ್ಲಿ ಸಂದೇಹವೇ ಇಲ್ಲ.

ನಿಲ್ದಾಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಅವ್ಯವಸ್ಥೆಯ ಆಗರವಾಗಿದೆ. ನಿಲ್ದಾಣದಲ್ಲಿನ ಸ್ಟೇಶನ್ ಮ್ಯಾನೇಜರ್ ಕೊಠಡಿಯಲ್ಲಿ ಅಧಿಕಾರಿಯೂ ಇಲ್ಲ, ಅಧಿಕಾರಿಯ ಕುರ್ಚಿ, ಟೇಬಲ್ ಇಲ್ಲವೇ ಇಲ್ಲ. ಸಂಪೂರ್ಣ ದೂಳಿನಿಂದ ತುಂಬಿದ್ದು, ಕೊಠಡಿಗೆ ಯಾವಾಗಲೂ ಬೀಗ ಹಾಕಲಾಗಿರುತ್ತದೆ.

ಬಯಲೇ ಮೂತ್ರಾಲಯ: ಬಸ್ ನಿಲ್ದಾಣದಲ್ಲಿನ ಸಾರ್ವಜನಿಕರ ಶೌಚಾಲಯಗಳು ಸ್ವಚ್ಛತೆ ಇಲ್ಲದೆ, ಗಬ್ಬುನಾಥದಿಂದ ಕೂಡಿವೆ. ಬಸ್ ನಿಲ್ದಾಣದ ಕಾಂಪೌಂಡ್ ಒಳಗೆ ಸುತ್ತಲೂ ಜಾಲಿಗಿಡಗಳು ಬೆಳೆದಿದ್ದು, ಹಂದಿಗಳು ಅಲ್ಲಿಯೇ ಬೀಡು ಬಿಟ್ಟಿವೆ. ಬಸ್ ಚಾಲಕ, ಕಂಡೆಕ್ಟರ್ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಅಲ್ಲದೆ ಬಯಲಿನಲ್ಲಿಯೇ ಮಹಿಳೆಯರು ಮೂತ್ರ ವಿಸರ್ಜನೆಗೆ ಹೋಗಬೇಕಾಗಿದೆ. 

ದೂಳು ತುಂಬಿದ ನಿಲ್ದಾಣ: ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳು, ಮಳಿಗೆಗಳು, ನಿಲ್ದಾಣಾಧಿಕಾರಿ, ವಿಚಾರಣೆ ಕೊಠಡಿಗಳು ಸೇರಿದಂತೆ ನಿಲ್ದಾಣ ಸಂಪೂರ್ಣ ದೂಳಿನಿಂದ ಕೂಡಿದೆ. ನಿಲ್ದಾಣ ತುಂಬ ಗೋಡೆಗಳಿಗೆ ಅಲ್ಲಲ್ಲಿ ನೇತು ಹಾಕಿರುವ ಧೂಮಪಾನ ಮಾಡಬೇಡಿ, ಸ್ವಚ್ಛತೆ ಕಾಪಾಡಿ ಹಾಗೂ  ಗೌತಮ ಬುದ್ಧ, ದ.ರಾ. ಬೇಂದ್ರೆ, ಕಾರ್ಲ್‌ಮಾರ್ಕ್ಸ್, ಥ್ಯಾಕರ್, ಮಹಾವೀರ, ಡಾ. ರಾಧಾಕೃಷ್ಣನ್, ಸ್ವಾಮಿ ವಿವೇಕಾನಂದ ಸೇರಿದಂತೆ ಇತರ ಮಹನೀಯರ, ದಾರ್ಶನಿಕರ ತತ್ವಗಳು, ಹಿತನುಡಿಗಳ ಬೋರ್ಡ್‌ಗಳು ಸಂಪೂರ್ಣ ದೂಳಿನಿಂದ ಕೂಡಿದ್ದು, ಅಲ್ಲಿನ ಅಕ್ಷರಗಳೇ ಕಾಣದಂತಾಗಿವೆ.

ಸ್ವಚ್ಛತೆ ನಿರ್ವಹಣೆ ಕೊರತೆ: ಬಸ್ ನಿಲ್ದಾಣದಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ಹಾಳೆಗಳು ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದಿವೆ. ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದೆಯಾದರೂ ಅವುಗಳನ್ನು ಸರಿಯಾಗಿ ಉಪಯೋಗಿಸಲಾಗುತ್ತಿಲ್ಲ. ಕೆಲವೆಡೆ ತೊಟ್ಟಿಗಳು ಇಲ್ಲ. ಕಸ ಗೂಡಿಸುವುದೇ ವಿರಳ. ಕುಡಿಯುವ ನೀರಿನ ಎರಡು ಟ್ಯಾಂಕ್‌ಗಳಿದ್ದು, ಒಂದು ಸಂಪೂರ್ಣ ಬಂದ್ ಆಗಿದೆ, ಇನ್ನೊಂದರಲ್ಲಿ ಮೂರು ನಲ್ಲಿಗಳಿದ್ದು, ಒಂದೇ ನಲ್ಲಿ ಮಾತ್ರ ಶುರು ಇದೆ. 

ಕಿತ್ತುಹೋದ ಡಾಂಬರು: ಪ್ಲಾಟ್ ಫಾರ್ಮ್ ರಸ್ತೆಯಲ್ಲಿನ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ಸಣ್ಣ ಸಣ್ಣ ಕಲ್ಲುಗಳು (ಕಡಿ) ನಿಲ್ದಾಣವನ್ನು ಆವರಿಸಿವೆ. ಅಲ್ಲಲ್ಲಿ ತಗ್ಗುಗಳು ಬಿದ್ದಿವೆ. ಬಸ್‌ಗಳು ಫ್ಲಾಟ್‌ಪಾರಂನಲ್ಲಿ ನಿಲ್ಲುವ ಸಂದರ್ಭ ಬಸ್ ಗಾಲಿಗೆ ಸಿಕ್ಕ ಸಣ್ಣ ಕಲ್ಲುಗಳು ಪ್ರಯಾಣಿಕರಿಗೆ ಸಿಡಿದ ಪ್ರಸಂಗಗಳು ನಡೆದಿವೆ.

ಸಂಬಂಧಿಸಿದ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾಗಿ  ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಧೂಳು ತುಂಬಿರುವ ಬೋರ್ಡ್‌ಗಳಿಗೆ ಸ್ವಚ್ಛತೆ ಹೊಸ ಮಾರ್ಪಾಡು ಮಾಡಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ಬಸ್ ನಿಲ್ದಾಣದ ಡಾಂಬರೀಕರಣವಾಗಬೇಕು. ನಿಲ್ದಾಣದಲ್ಲಿನ ಜಾಲಿಗಿಡಗಳನ್ನು ತೆಗೆಯಿಸಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಿ ಸುಸಜ್ಜಿತ, ಅತ್ಯುನ್ನತವಾದ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಬೇಕು ಎಂಬುದು ಪ್ರಯಾಣಿಕರ ಒಕ್ಕೊರಲಿನ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.