ADVERTISEMENT

ಕಗ್ಗಂಟಾದ ಅಭ್ಯರ್ಥಿಗಳ ಆಯ್ಕೆ

ಅಧಿಕಾರದ ಗುಂಗು, ಅಖಾಡದಲ್ಲಿ ರಂಗು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 5:43 IST
Last Updated 5 ಏಪ್ರಿಲ್ 2013, 5:43 IST

ಗದಗ:  ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದರೂ ವಿವಿಧ ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾತ್ರ ಕಗ್ಗಂಟಾಗಿಯೇ ಉಳಿದಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ತೀವ್ರಗೊಂಡಿದೆ. ಬಂಡಾಯದ ಭೀತಿ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ಮುಂದೂಡುತ್ತಿವೆ.

ಟಿಕೆಟ್ ಖಚಿತವಾಗಿರುವ ಅಭ್ಯರ್ಥಿಗಳು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಹೊರತುಪಡಿಸಿ ಇತರೆ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸದೆ ಇರುವುದು ಕುತೂಹಲ ಉಂಟು ಮಾಡಿದೆ. ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಎಸ್‌ಆರ್ ಕಾಂಗ್ರೆಸ್ ಮುಂದಾದ ಕಾರಣ ಇತರೆ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ವಿಳಂಬವಾಗಿದೆ.

ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಗದಗದಿಂದ ಎಚ್.ಕೆ.ಪಾಟೀಲ, ರೋಣದಿಂದ ಜಿ.ಎಸ್.ಪಾಟೀಲ, ನರಗುಂದದಿಂದ ಬಿ.ಆರ್.ಯಾವಗಲ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಶಿರಹಟ್ಟಿ ಕ್ಷೇತ್ರದ ಟಿಕೆಟ್ ಗೊಂದಲ ತಾರಕ್ಕೇರಿದೆ. 17 ಮಂದಿ ಆಕಾಂಕ್ಷಿಗಳು ಇರುವುದರಿಂದ ಬಂಡಾಯ ಭುಗಿಲೇಳುವ ಸಾಧ್ಯತೆ ಇದೆ.

ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲ ಟಿಕೆಟ್ ಸಿಗುವುದು ಖಚಿತವಾಗುತ್ತಿದ್ದಂತೆ ಮುಖಂಡರನ್ನು ಭೇಟಿ ಮಾಡುವುದು ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಕೆಜೆಪಿ ಅಭ್ಯರ್ಥಿ ಎಸ್‌ಬಿ.ಸಂಕ್ಣಣ್ಣ ವರಿಗೆ ಟಿಕೆಟ್ ಘೋಷಣೆ ಆಗಿರುವುದರಿಂದ ಪಕ್ಷದ ಕಾರ್ಯಾಲಯ ತೆರೆದು ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೇ ಸೇರ್ಪಡೆ ಮಾಡುತ್ತಿದ್ದಾರೆ.

ಈ ನಡುವೆ ಬಿಜೆಪಿಯ ಹಾಲಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರಿಗೆ ಟಿಕೆಟ್ ನೀಡದಂತೆ ಪಕ್ಷದ ಒಂದು ಗುಂಪು ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದೆ. ಪಕ್ಷದಲ್ಲಿಯೇ ಅಪಸ್ವರ ಕೇಳಿ ಬಂದಿರುವುದು ಬಿದೂರರ ಅವರಿಗೆ ತೊಡಕಾಗಿದೆ.
ಕೆಜೆಪಿಯಲ್ಲಿ ಗುರುತಿಸಿಕೊಂಡು ಮರಳಿ ಬಿಜೆಪಿಗೆ ಬಂದಿರುವುದು ಇತರೆ ಟಿಕೆಟ್ ಆಕಾಂಕ್ಷಿಗಳಿಗೆ ಹಿನ್ನಡೆಯಾಗಿದೆ.
ಬಿಎಸ್‌ಆರ್ ಕಾಂಗ್ರೆಸ್‌ನಿಂದ ಗದಗದಲ್ಲಿ ಅನಿಲ ಮೆಣಸಿನಕಾಯಿ ಸ್ಪರ್ಧಿಸುವುದು ಖಚಿತ. 

ಜೆಡಿಎಸ್‌ನಿಂದ ಅಂದಾನಯ್ಯ ಕುರ್ತಕೋಟಿ ಮಠ ಮತ್ತು ವಿರೂಪಾಕ್ಷಪ್ಪ ಜೋಗೆರ ಅವರ ನಡುವೆ ಪೈಪೋಟಿ ಇದೆ.
ರೋಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಚಿವ ಕಳಕಪ್ಪ ಬಂಡಿ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್‌ನಿಂದ ಹೇಮಗಿರೀಶ ಹಾವಿನಾಳಗೆ ಟಿಕೆಟ್ ಖಾತ್ರಿ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಒಂದು ತಿಂಗಳಿನಿಂದಲೇ ಪಕ್ಷ ಸಂಘಟನೆ ಮತ್ತು ಪ್ರಚಾರ ಆರಂಭಿಸಿದ್ದಾರೆ.

ಬಿಎಸ್‌ಆರ್ ಕಾಂಗ್ರೆಸ್‌ನಿಂದ ವೈ.ಎನ್.ಗೌಡರ ಹೆಸರು ಆರಂಭದಲ್ಲಿ ಕೇಳಿ ಬಂದಿತ್ತು. ಈಗ ಹೊಸದಾಗಿ ಸುಭಾಸಚಂದ್ರ ದಾನರಡ್ಡಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಜೆಪಿಯಿಂದ ಅಮರೇಶ ಬೂದಿಹಾಳ, ಅಶೋಕ ಬೇವಿನಕಟ್ಟಿ ಆಕಾಂಕ್ಷಿಗಳಾಗಿದ್ದಾರೆ.

ನರಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಸಿ.ಪಾಟೀಲ ಸ್ಪರ್ಧಿಸ ಲಿದ್ದಾರೆ ಎಂದು ಅವರ ಸಹೋದರ ಹೇಳಿಕೆ ನೀಡಿದ್ದಾರೆ. ಆದರೆ ಅವರು ಕೆಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಉಹಾಪೋಹ ಸುಳಿದಾಡುತ್ತಿವೆ. ಇದೇ ಕಾರಣಕ್ಕೆ ಕೆಜೆಪಿ ಅಭ್ಯರ್ಥಿ ಅಂತಿಮಗೊಂಡಿಲ್ಲ. ಕಾಂಗ್ರೆಸ್‌ನಿಂದ ಬಿ.ಆರ್. ಯಾವಗಲ್‌ಗೆ ಟಿಕೆಟ್ ಖಾತ್ರಿ ಎನ್ನಲಾಗಿದೆ. ಇವರೊಂದಿಗೆ ಕಾತರಕಿ, ದಶರಥ ಗಾಣಿಗೆರ ಪೈಪೋಟಿ ನಡೆಸುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರೊ. ಹನಮಂತಗೌಡ ಕಲ್ಮನಿ ಹೆಸರಿನ ಜೊತೆ ಹೊಸದಾಗಿ ಬೆಟಗೇರಿಯ ಪ್ರಕಾಶ ಕರಿ ಹೆಸರು ಕೇಳಿ ಬಂದಿದೆ. ಪ್ರಕಾಶ ಕರಿ ಟಿಕೆಟ್‌ಗಾಗಿ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಶ್ರೀರಾಮುಲು ಆಪ್ತ ಸಹಾಯಕ ಶಿವನಗೌಡರ ಮತ್ತು ದೇಸಾಯಿಗೌಡ ಆಕಾಂಕ್ಷಿಗಳು.

ಸಚಿವ ವರ್ತೂರು ಪ್ರಕಾಶ ಸಹೋದರ ರಮಾನಂದ ವರ್ತೂರು ಅವರು ನರಗುಂದ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ನರಗುಂದದಲ್ಲಿ ಕಚೇರಿ ಆರಂಭಿಸಿದ್ದಾರೆ.

ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ರಾಮಣ್ಣಲಮಾಣಿ ಸ್ಪರ್ಧಿಸುವುದು ಖಚಿತವಾಗಿದೆ. ಜೆಡಿಎಸ್‌ನಿಂದ ಬಿ.ಎಸ್.ವಡ್ಡರ, ರಾಜಶ್ರೀ ಇನಾಮದಾರ, ಶಿವು ಲಮಾಣಿ, ಎನ್.ಕೆ.ಲಮಾಣಿ ಸೇರಿದಂತೆ 9 ಆಕಾಂಕ್ಷಿಗಳು ಇದ್ದಾರೆ. ಉಪನ್ಯಾಸಕಿ ರಾಜಶ್ರೀ ಅವರಿಗೆ ಕುಮಾರಸ್ವಾಮಿ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಬಿಎಸ್‌ಆರ್ ಕಾಂಗ್ರೆಸ್‌ನಿಂಧ ಜಯಶ್ರೀ ಹಳ್ಳೆಪ್ಪನವರ ಸ್ಪರ್ಧಿಸುವುದು ಖಚಿತವಾಗಿದ್ದು, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಕೆಜೆಪಿಯಿಂದ ನಿವೃತ್ತ ಅಧಿಕಾರಿ ಪಿ. ಗಿರಿಧರ ಮತ್ತು ಶೋಭಾ ಲಮಾಣಿ ಹೆಸರು ಕೇಳಿ ಬರುತ್ತಿದೆ. ಮಾಜಿ ಸಚಿವ ಸಿ.ಎಂ.ಉದಾಸಿ ಕೈಗೊಳ್ಳುವ ನಿರ್ಣಯದ ಮೇಲೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.