ADVERTISEMENT

ಕಾರ್ಯಕರ್ತರ ನಿಯಂತ್ರಣಕ್ಕೆ ಹರಸಾಹಸ

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 10:27 IST
Last Updated 16 ಏಪ್ರಿಲ್ 2013, 10:27 IST
ನರಗುಂದದಲ್ಲಿ ಸೋಮವಾರ ನಾಮಪತ್ರ ಸಲ್ಲಿಸುವ ಮಿನಿ ವಿಧಾನಸೌಧಕ್ಕೆ ಬಿಜೆಪಿ ಕಾರ್ಯಕರ್ತರು ತೆರಳುವ ಸಂದರ್ಭದಲ್ಲಿ  ಪೋಲಿಸರು ವಾಹನಗಳನ್ನು ತಡೆದ ಪರಿಣಾಮ ಕಾರ್ಯಕರ್ತರು ಮತ್ತು ಪೋಲಿಸರ ನಡುವೆ ವಾಗ್ವಾದ ನಡೆಯಿತು.
ನರಗುಂದದಲ್ಲಿ ಸೋಮವಾರ ನಾಮಪತ್ರ ಸಲ್ಲಿಸುವ ಮಿನಿ ವಿಧಾನಸೌಧಕ್ಕೆ ಬಿಜೆಪಿ ಕಾರ್ಯಕರ್ತರು ತೆರಳುವ ಸಂದರ್ಭದಲ್ಲಿ ಪೋಲಿಸರು ವಾಹನಗಳನ್ನು ತಡೆದ ಪರಿಣಾಮ ಕಾರ್ಯಕರ್ತರು ಮತ್ತು ಪೋಲಿಸರ ನಡುವೆ ವಾಗ್ವಾದ ನಡೆಯಿತು.   

ನರಗುಂದ: ಈ ಸಲದ ವಿಧಾನಸಭೆ  ಚುನಾವಣೆಗೆ ಸಂಬಂಧಪಟ್ಟಂತೆ  ಚುನಾವಣಾ ಆಯೋಗವು  ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳನ್ನು ಜಾರಿಗೊಳಿಸುವಲ್ಲಿ ಅಧಿಕಾರಿ ಗಳು, ಪೊಲೀಸರು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಕಾರ್ಯಕರ್ತರ ವಾಹನ ಗಳನ್ನು ತಡೆದ ಹಿನ್ನೆಲೆಯಲ್ಲಿ ಮಿನಿ ವಿಧಾನಸೌಧದ ಎದುರು ಪೋಲಿಸರು ಮತ್ತು ಬಿಜೆಪಿ ಕಾರ್ಯ ಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. 

ಮೊದಲು ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್‌ರು ನಾಮಪತ್ರ ಸಲ್ಲಿಸಲು   ಮಿನಿ ವಿಧಾನಸೌಧಕ್ಕೆ ತೆರಳಲು ಆವರಣವನ್ನು ಪ್ರವೇಶಿಸಲು ಅವರ ಎಡು  ವಾಹನಕ್ಕೆ ಅವಕಾಶ  ಕಲ್ಪಿಸಲಾಗಿತ್ತು. ಅದರಂತೆ ಯಾವಗಲ್‌ರವರು ಮಿನಿವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿ ವಾಪಸ್ಸಾಗುತ್ತಿದ್ದರು.

ಇದೇ  ಹೊತ್ತಿಗೆ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲರ ಅನುಪಸ್ಥಿತಿಯಲ್ಲಿ ಸಂಸದ ಪಿ.ಸಿ.ಗದ್ದಿಗೌಡ್ರ ಹಾಗೂ ಶಾಸಕರ ಪತ್ನಿ ಶೋಭಾ ಪಾಟೀಲರು ನಾಮಪತ್ರ ಸಲ್ಲಿಸಲು ತೆರಳುತ್ತಿದ್ದರು. ಆದರೆ, ಅವರ ವಾಹನ ಮಿನಿ ವಿಧಾನಸೌಧ ಪ್ರವೇಶಿಸಲು ಗೇಟ್‌ನಲ್ಲಿದ್ದ ಪೊಲೀಸರು ಅವಕಾಶ ನೀಡದೇ ಇರುವುದಕ್ಕೆ ತೀವ್ರ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು  ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದದ್ದು ಕಂಡು ಬಂತು.

ಒಬ್ಬರಿಗೊಂದು ನೀತಿ,  ಮತ್ತೊಬ್ಬರಿಗೊಂದು ಇನ್ನೊಂದು ನೀತಿಯ ತಾರತಮ್ಯ ನೀತಿ ಏಕೆ?  ಎಂದು ಪ್ರಶ್ನಿಸಿದ ಕಾರ್ಯಕರ್ತರು  ಪೊಲೀಸರು ಕ್ರಮವನ್ನು ತೀವ್ರವಾಗಿ  ಖಂಡಿಸಿದರು.  ಕಾಂಗ್ರೆಸ್ ಅಭ್ಯರ್ಥಿ ವಾಹನಕ್ಕೆ ಪ್ರವೇಶ ನೀಡಿ, ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 

ಮಾಧ್ಯಮಗಳ ವಾಹನಕ್ಕೂ  ನಿರ್ಬಂಧ:  ವಾಹನಗಳನ್ನು ಮಿನಿವಿಧಾನಸೌಧದಿಂದ ನೂರು  ಮೀಟರ್  ದೂರದಲ್ಲಿಯೇ ನಿಲ್ಲಿಸುತ್ತಿರುವ
ಪೋಲಿಸರು  ಮಾಧ್ಯಮದವರ ವಾಹನಕ್ಕೂ ನಿರ್ಬಂಧ ಹೇರಿದ್ದು ಮತ್ತಷ್ಟು ಆಕ್ರೋಶಕ್ಕೆ ಗುರಿ ಯಾಗಿದ್ದು ಕಂಡು ಬಂತು. ಉಳಿದೆಡೆ ನಾಮಪತ್ರ ಸಲ್ಲಿಕೆಯ ಭಾವಚಿತ್ರ ತೆಗೆಯಲು ಅವಕಾಶ ನೀಡುತ್ತಿದ್ದು ಆದರೆ ಇಲ್ಲಿಯ ಚುನಾವಣಾಧಿಕಾರಿ ಇದಕ್ಕೆ ಅವಕಾಶ ನೀಡದೇ ಇರುವುದು ಮತ್ತಷ್ಟು  ಸಾರ್ವಜನಿಕರ ಹಾಗೂ ಅಭ್ಯರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.