ADVERTISEMENT

ಗೊರವರ, ಕುಲಕರ್ಣಿ ನಿಧನ: ಶ್ರದ್ಧಾಂಜಲಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 10:55 IST
Last Updated 25 ಜನವರಿ 2012, 10:55 IST

ಲಕ್ಷ್ಮೇಶ್ವರ: ಪಟ್ಟಣದ ಸಾಹಿತಿ ಬಳಗದ ಸದಸ್ಯರು ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಭೆ ಸೇರಿ ಈಚೆಗೆ ವಾಹನ ಅಪಘಾತದಲ್ಲಿ ನಿಧನರಾದ ನಿವೃತ್ತ ಪ್ರಾಧ್ಯಾಪಕ ಬಿ.ಎಸ್. ಗೊರವರ ಹಾಗೂ ಅನಾರೋಗ್ಯದಿಂದ ನಿಧನರಾದ ಲಕ್ಷ್ಮೇಶ್ವರದ ಹಿರಿಯ ಪತ್ರಕರ್ತ ಡಿ.ಸಿ. ಕುಲಕರ್ಣಿ ಇವರಿಗೆ ಶೃದ್ಧಾಂಜಲಿ ಸಲ್ಲಿಸಿದರು.

 ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಪ್ರೊ.ಸಿ.ವಿ. ಕೆರಮನಿ ಬಿ.ಎಸ್. ಗೊರವರ ಅವರ ಕುರಿತು ಮತನಾಡಿ,  `ಗೊರವರು ಅವರು ಒಬ್ಬ ಉತ್ತಮ ಪ್ರಾಧ್ಯಾಪಕರಾಗಿ ಜಿಲ್ಲೆಯಲ್ಲಿಯೇ ಒಳ್ಳೆಯ ಹೆಸರು ಗಳಿಸಿದ್ದರು. ಶಿಕ್ಷಕ ವೃತ್ತಿಗೆ ಜೊತೆ ಜೊತೆಗೆ ಎನ್‌ಸಿಸಿ, ಎನ್‌ಎಸ್‌ಎಸ್ ಅಧಿಕಾರಿಗಳಾಗಿ ಉತ್ತಮ ಸೇವೆ ಸಲ್ಲಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಎಂದರು. 

 ಅವರಿಂದ ವಿದ್ಯೆ ಕಲಿತ ಯಾರೊಬ್ಬರೂ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರ ಸವಿನೆನಪಿಗಾಗಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಅಗತ್ಯ ಇದ್ದು ಈ ನಿಟ್ಟಿನಲ್ಲಿ ಅವರ ಕುಟುಂಬ ವರ್ಗ ಹಾಗೂ ಅವರ ಶಿಷ್ಯ ಈಗಾಗಲೇ ಕಾರ್ಯಪ್ರವೃತ್ತವಾಗಿದೆ~ ಎಂದು ತಿಳಿಸಿ ಅವರ ಕನ್ನಡ ಪ್ರೀತಿಯನ್ನು ಕೊಂಡಾಡಿದರು.

ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ ಹಾಗೂ ವಕೀಲ ಬಿ.ಎಸ್. ಬಾಳೇಶ್ವರಮಠ ಡಿ.ಸಿ. ಕುಲಕರ್ಣಿಯವರ ಕುರಿತು `ಈ ಭಾಗದಲ್ಲಿ ಡಿ.ಸಿ. ಕುಲಕರ್ಣಿ ಎಂದೇ ಖ್ಯಾತರಾಗಿದ್ದ ದತ್ತಣ್ಣ ಕುಲಕರ್ಣಿಯವರು ಕಳೆದ 25 ವರ್ಷಗಳಿಂದ ಚಪ್ಪಲಿ ಧರಿಸದೇ ಪತ್ರಿಕಾ ವರದಿಗಾರರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ.

ಅವರ ಸೇವೆ ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದು ಅವರ ಸಹನೆ, ಸಹಕಾರ ಮನೋಭಾವನೆಯನ್ನು ಎಲ್ಲ ಯುವ ಪತ್ರಕರ್ತರು ತಮ್ಮ ಜೀವನದಲ್ಲಿ ಅಳವಡಿಸಿಕಳ್ಳುವ ಅಗತ್ಯ ಇದೆ~ ಎಂದರು.

ಹಿರಿಯ ಸಾಹಿತಿ ಕೊತ್ತಲ ಮಹಾದೇವಪ್ಪ, ಎಸ್.ವಿ. ಕಮ್ಮಾರ, ಎಸ್.ಎಸ್. ನಾಗಲೋಟಿ, ಬಿ.ಎಂ.ಕಾಳಗಿ, ಎಂ.ಕೆ. ಕಳ್ಳಿಮಠ, ವಿರುಪಾಕ್ಷಪ್ಪ ಅರಳಿ, ಬಿ.ಸ್. ಆಕಳವಾಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.