ADVERTISEMENT

ಧರಣಿಗೆ ಜಿನ ಹಾರ, ರೋಣದ ಅಗ್ರಹಾರ!

ಡಾ.ಮಲಿಕ್ಲಾರ್ಜುನ ಕುಂಬಾರ
Published 3 ಮಾರ್ಚ್ 2014, 6:24 IST
Last Updated 3 ಮಾರ್ಚ್ 2014, 6:24 IST

ಕನ್ನಡ ನಾಡು ಜಿನಧರ್ಮದ ಬೀಡು. ಇಲ್ಲಿ ಜೀವ ದಯಾಪರವಾದ ನಾಡಿ ಮಿಡಿತವು ಸುಮಾರು ಎರಡು ಸಾವಿರ ವರ್ಷಗಳಿಂದಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಅಂದಿನಿಂದಲೂ ಇಲ್ಲಿ ಹತ್ತಾರು ಜೈನ ಕೇಂದ್ರಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವೆಂಬುದು ಶಾಸನಾ­ಧಾರ­ಗಳು ಮತ್ತು ಕಾವ್ಯಾಧಾರಗಳು ನಮ್ಮ ನೆರವಿಗೆ ಬರುತ್ತವೆ.

ಗದಗ ಜಿಲ್ಲೆಯು ಪುರಾತನ ಕಾಲದಲ್ಲಿ ಜೈನ ಧರ್ಮದ ತವರುಮನೆಯೆನಿಸಿತ್ತು.  ರೋಣ, ಅಬ್ಬಿಗೇರಿ, ಜಕ್ಕಲಿ, ಸೂಡಿ, ನಿಡಗುಂದಿ, ಸವಡಿ, ನರೇಗಲ್ಲ, ಕೋಟುಮಚಗಿ ಎಂಬ ಗ್ರಾಮಗಳು  ಜೈನ ಧರ್ಮದ ನೆಲೆವೀಡು­ಗಳಾಗಿದ್ದವು. ರೋಣ ನಗರದ ಪೂರ್ವಕ್ಕಿರುವ ಸೂಡಿಯಲ್ಲಿ ಗಂಗರ ಮಾಂಡಲೀಕ ಇಮ್ಮಡಿ ಬೂತುಗನ   ನಾಲ್ಕು ಜನ ಹೆಂಡರಲ್ಲಿ ಒಬ್ಬಳಾದ ದೀವಳಾಂಬಾ ಎಂಬಾಕೆ­ಯು ಕ್ರಿ.ಶ. 938 ರಲ್ಲಿ ಒಂದು ಜೈನ ಬಸದಿ­ಯನ್ನು ಕಟ್ಟಿಸಿದಳೆಂದು ಶಾಸನಗಳು ಹೇಳುತ್ತವೆ.

ರೋಣ ನಗರ ಸಾವಿರಾರು ವರ್ಷಗಳ ಜೈನ ಇತಿಹಾಸವನ್ನು ಹೊಂದಿದ್ದರೂ, ಸರ್ವ ಧರ್ಮೀಯರ ತವರು ಮನೆಯಾಗಿತ್ತೆಂಬುದಕ್ಕೆ ಇಲ್ಲಿರುವ ಎಲ್ಲ ಧರ್ಮಗಳ ಗುಡಿಗಳೇ  ಸಾಕ್ಷಿ­ಯಾಗಿವೆ. ಇಲ್ಲಿರುವ ಜೈನ ಧರ್ಮದ 16ನೇ ತೀರ್ಥಂಕರರಾದ ಪಾರ್ಶ್ವನಾಥನ ಬಸದಿಯು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿದ್ದಾದರೂ, ಅದು ಬೆಳಕಿಗೆ ಬರುವುದು ಕ್ರಿ.ಶ. 1000 ರಲ್ಲಿ ಕಲ್ಯಾಣ ಚಾಲುಕ್ಯರ ಎರಡನೆಯ ಚಕ್ರವರ್ತಿ ಸತ್ಯಾಶ್ರಯ ಇರಿವಬೆಡಂಗನ ಕಾಲದಲ್ಲಿ. ಈ ಬಸದಿಯು ಐಹೊಳೆ ಮತ್ತು ಶ್ರವಣಬೆಳಗೊಳದ ಚಂದ್ರ­ಗುಪ್ತ ಬಸದಿಯಂತಿರುವುದು ವಿಶೇಷವಾಗಿದೆ.

ರೋಣದಲ್ಲಿ ದ್ರೋಣಾಚಾರ್ಯರದು ಎಂದು ಹೇಳುವ ಗುಡಿಯಲ್ಲಿ ಕ್ರಿ.ಶ.1111ರ ಶಾಸನ­ವೊಂದಿದೆ. ಅದರಲ್ಲಿ ಕೆಲವು ವಿಷಯಗಳು ಜೈನ ಧರ್ಮದ ಬಗ್ಗೆ ಬೆಳಕು ಚಲ್ಲುತ್ತವೆ. ಈ ಶಾಸನವು ಆರನೇ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದೆ. ಹೈಂಗಕುಲದ ನಾಗವಿಷ್ಣುಮಯ್ಯ ಎಂಬವನು ಕಪ್ಪೆಯಗೇರಿಯ 51 ಮಹಾಜನರಿಂದ ಅನುಮತಿ ಪಡೆದು ಅದೇ ಕಪ್ಪೆಯಗೇರಿಯಲ್ಲಿ ಸಭಾ ಮಂಟಪ ಸತ್ರಗಳನ್ನು ನಿರ್ಮಿಸಿ ಹಲವು ಭಟ್ಟಿ ವೃತ್ತಿಗಳನ್ನು ದಾನವಾಗಿ ನೀಡುತ್ತಾನೆಂದು ವಿವರ ನೀಡುತ್ತದೆ. ಪ್ರೌಢ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಉಪಾಧ್ಯಾಯರಿಗೆ ಈ ರೀತಿಯಲ್ಲಿ ಭಟ್ಟಿ ವೃತ್ತಿಗಳನ್ನು ನೀಡುವ ಬಗ್ಗೆ  ಶಾಸನಗಳು ವರ್ಣಿಸುತ್ತವೆ. 

ವಿದ್ವಾಂಸರು ತರ್ಕದ ಪಾಂಡಿತ್ಯ ಪಡೆಯಲು ತರ್ಕದ ಅಭ್ಯಾಸಕ್ಕೆ ಮತ್ತು ಅಧ್ಯಾ­ಪನ­ಕ್ಕಾಗಿ ಒಂದು ವ್ಯಾಖ್ಯಾನ  ಶಾಲೆಯನ್ನು ರೋಣ­­ದಲ್ಲಿ ಕಟ್ಟಿಸುತ್ತಾನೆ ಎಂಬ ವಿವರ ನೀಡುತ್ತದೆ. ಇಂದ್ರನ ಸಲುವಾಗಿ ಮಾರ್ಗಶಿರ ಮತ್ತು ಪುಷ್ಯ ಮಾಸಗಳ ಕೃಷ್ಣ ಪಕ್ಷದ ಅಷ್ಟಮಿಯಂದು ನಡೆಯುವ ಉತ್ಸವಕ್ಕೆ ಐಂದ್ರೋತ್ಸವ ಎನ್ನುತ್ತಾರೆ. ರೋಣದಲ್ಲಿ ಈ ಉತ್ಸವಕ್ಕಾಗಿ ದತ್ತಿ ಬಿಟ್ಟಾಗ  ದಾನವನ್ನು ಸ್ವೀಕರಿಸಿದ ದೇಚಿಮ­ಯ್ಯನು ಈ ದೇವಾಲಯಗಳ ಉಸ್ತುವಾರಿಯನ್ನು ಮಾಡುತ್ತಿರಬಹುದು. ಸಭಾ ಮಂಟಪವನ್ನು ನಿರ್ಮಿಸಿದ ಈ ಕಪ್ಪೆಯಗೇರಿ ಎಂದರೆ ಯಾವುದೆಂಬುದನ್ನು ಈಗ ಶೋಧಿಸಬೇಕಾಗಿದೆ.

ರೋಣ ನಗರದಲ್ಲಿರುವ ಭಗವಾನ್ ಪಾರ್ಶ್ವನಾಥ ತೀರ್ಥಂಕರ ಜಿನ ಚೈತ್ಯಾಲಯವು ಈಗಾಗಲೇ ತನ್ನ ಸಹಸ್ರಮಾನೋತ್ಸವನ್ನು ಬಹು ಸಡಗರದಿಂದ ಆಚರಿಸಿಕೊಂಡಿದೆ. ಉತ್ತರ ಕರ್ನಾಟಕದ ದೇವಾಲಯ ನಿರ್ಮಾಣದಲ್ಲಿ ಪ್ರಚಲಿತವಿದ್ದ ಮದ್ಯಕಾಲೀನ ವಾಸ್ತು ಶೈಲಿಯ ಮಾದರಿಯಲ್ಲಿ ನಿರ್ಮಿತಿಗೊಂಡ ಈ ಬಸದಿಯಲ್ಲಿ ಚತುರಸ್ರಾಕಾರದ ಅಧಿಷ್ಠಾನವಿದೆ. ಗರ್ಭ­ಗೃಹದಲ್ಲಿರುವ ಪಾರ್ಶ್ವನಾಥ ತೀರ್ಥಂಕರ ಮೂರ್ತಿಯು ವಿರಾಜಮಾನವಾಗಿ ಹೊಳೆ­ಯುತ್ತದೆ.

ಗರ್ಭಗೃಹದ ಲಲಾಟದಲ್ಲಿ ಪದ್ಮಾಸನ­ದಲ್ಲಿ ಕುಳಿತ ಜಿನ ಶಿಲ್ಪವಿದೆ.  ಶ್ರೀ 1008 ಪಾರ್ಶ್ವ­ನಾಥ ತೀರ್ಥಂಕರರ ಹಾಗೂ 24 ತೀರ್ಥಂಕರರ 12ನೇ ವರ್ಷದ ವಾರ್ಷಿಕ ಪೂಜಾ ಸಮಾರಂಭ  ಹೊಂಬುಜ ಕ್ಷೇತ್ರದ ಶ್ರೀಮದ್ ಅಭಿನವ ದೇವೇಂ­ದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳ ನೇತೃತ್ವದಲ್ಲಿ ಇದೇ 2014 ಮಾರ್ಚ್‌ 3ರಂದು  ಜರುಗಲಿದೆ.

ಇಲ್ಲಿನ ಭೂಗರ್ಭವು ವಜ್ರದುಂಡೆಯ­(ಅಗ್ನಿಶಿಲೆ) ಕಲ್ಲನ್ನು ಹೊಂದಿದೆ. ಇದಕ್ಕೆ ದ್ರೋ(ರೋ)ಣಗಲ್ಲು ಎನ್ನುತ್ತಾರೆ. ರೋಣ ಎನ್ನುವ ಹೆಸರು ಬರಲು ಅದೇ ಕಾರಣವೆಂದು ಇತಿ­ಹಾಸಕಾರರು ಹೇಳುತ್ತಾರೆ. ಇದು ಗಟ್ಟಿ ಶಿಲೆ­ಯನ್ನಷ್ಟೇ ಹೊಂದಿಲ್ಲ. ಜೀವ ದಯಾಪರವಾಗಿ ಮತ್ತು ನೊಂದವರಿಗಾಗಿ ಕಂಬನಿಯನ್ನು ಮಿಡಿದು, ಅವರ ಕಣ್ಣಿರಿಗೆ ಸ್ಪಂದಿಸಿ, ಸರ್ವರನ್ನು ತನ್ನ ತೆಕ್ಕೆಯಲ್ಲಿ ಕಲ್ಲಿನಂತೆ ಅಚಲವಾಗಿ ಗಟ್ಟಿ­ಯಾಗಿ ಹಿಡಿದುಕೊಂಡಿದೆ. ಇದೇ ರೋಣದ ವೈಶಿಷ್ಟ್ಯತೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.