ನರಗುಂದ: ಇಲ್ಲಿಯ ಅಗ್ರೋ ಕೇಂದ್ರಗಳಲ್ಲಿ ನಕಲಿ ಬೀಜ, ಗೊಬ್ಬರ ಹಾಗೂ ಔಷಧಗಳು ಕಂಡು ಬರುತ್ತಿರುವ ಬಗ್ಗೆ ರೈತರಿಂದ ದೂರು ಬಂದಿದ್ದು. ಆದ್ದರಿಂದ ಅವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಒಂದು ವೇಳೆ ನಕಲಿ ಬೀಜ, ಗೊಬ್ಬರ ಕಂಡು ಬಂದಲ್ಲಿ ಅಂಥ ಅಗ್ರೋ ಕೇಂದ್ರಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ತಿಳಿಸಿದರು.
ಅಗ್ರೋ ಕೇಂದ್ರಗಳಿಗೆ ಈಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಈಗಾಗಲೇ ಕೆಲವು ಗ್ರಾಮಗಳಲ್ಲಿ ನಕಲಿ ಬೀಜದ ಗೊಬ್ಬರದ ಬಗ್ಗೆ ರೈತರಿಂದ ಮೌಖಿಕ ದೂರುಗಳು ಬಂದಿವೆ. ಆದ್ದರಿಂದ ಅಗ್ರೋ ಕೇಂದ್ರಗಳಿಗೆ ಭೇಟಿ ನೀಡಲಾಗುತ್ತಿದ್ದು, ಸ್ಟಾಕ್‌ಬುಕ್ ಹಾಗೂ ದಾಸ್ತಾನನ್ನು ಪರಿಶೀಲಿಸಲಾಗುತ್ತಿದೆ.
ಜೊತೆಗೆ ಬೀಜ ಗೊಬ್ಬರ, ಔಷಧಿಗಳನ್ನು ಪರೀಕ್ಷಿಸಲು ಲ್ಯಾಬ್‌ಗೆ ಕಳಿಸುತ್ತಿರುವುದಾಗಿ ಹೇಳಿದರು.
ಯೂರಿಯಾ ಗೊಬ್ಬರದ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗಿದೆ. ಕೂಡಲೇ ಹಿಂಗಾರಿ ಬೆಳೆಗಳಿಗೆ ಬೇಕಾದ ಗೊಬ್ಬರ, ಬೀಜಗಳನ್ನು ಪೂರೈಸಲಾಗುವುದೆಂದು ಮಂಜುನಾಥ `ಪ್ರಜಾವಾಣಿ~ಗೆ ತಿಳಿಸಿದರು.
ಗೊಬ್ಬರ ಪೂರೈಕೆಗೆ ಆಗ್ರಹ
ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರ ಕೊರತೆ ಕಂಡು ಬಂದಿದ್ದು ಆದ್ದರಿಂದ ಅದನ್ನು ಬೇಗನೇ ಪೂರೈಸುವಂತೆ ರೈತರು ಆಗ್ರಹಿಸಿದ್ದಾರೆ. ಹಿಂಗಾರಿ ಬೆಳೆಗಳಿಗೆ ಯೂರಿಯಾ ಹಾಗೂ ಕಾಂಪ್ಲೆಕ್ಸ್ ಗೊಬ್ಬರ ಅಗತ್ಯವಾಗಿದೆ.
ಆದರೆ ಗೊಬ್ಬರ ಪಟ್ಟಣದಲ್ಲಿ ಸಿಗುತ್ತಿಲ್ಲ. ಇದರ ಬಗ್ಗೆ ಕೃಷಿ ಇಲಾಖಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈ ಗೊಬ್ಬರ ಕೊರತೆಯಿಂದ ಬೆಳೆಗಳು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೂಡಲೇ ಕೃಷಿ ಇಲಾಖೆ ಯೂರಿಯಾ ಗೊಬ್ಬರ ಪೂರೈಸುವಂತೆ ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.