ADVERTISEMENT

ನದಿಯಾಶ್ರಿತ ರೈತರ ಆಸೆಗೆ ನೀರೆರಚಿದ ತುಂಗಭದ್ರೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 6:00 IST
Last Updated 20 ಜೂನ್ 2012, 6:00 IST

ಮುಂಡರಗಿ: ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆಯು ಇದುವರೆಗೂ ಸಮರ್ಪಕವಾಗಿ ಸುರಿಯದೆ ಇರುವುದರಿಂದ ತುಂಗಭದ್ರೆಯ ಒಡಲು ಸಂಪೂರ್ಣವಾಗಿ ಬರಿದಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಇದೆ.

 ಗದಗ-ಬೆಟಗೇರಿ ನಗರಗಳನ್ನು ಒಳಗೊಂಡಂತೆ ಜಿಲ್ಲೆಯ ಶಿರಹಟ್ಟಿ, ಮುಂಡರಗಿ ಹಾಗೂ ಗದಗ ತಾಲ್ಲೂಕುಗಳ ಹಲವಾರು ಪಟ್ಟಣ, ನಗರ ಮತ್ತು ಗ್ರಾಮಗಳಿಗೆ ವರ್ಷ ದುದ್ದಕ್ಕೂ ಕುಡಿಯುವ ನೀರು ಪೂರೈಸುವ ತುಂಗಭದ್ರಾ ನದಿಯು ಮಳೆಗಾಲದ ಈ ವೇಳೆಗಾಗಲೇ ತುಂಬಿ ಭೋರ್ಗರೆ ಯಬೇಕಿತ್ತು. ಆದರೆ, ತುಂಗಭದ್ರಾ ನದಿಗೆ ನೀರೊದಗಿಸುವ ಶಿವಮೊಗ್ಗ ಹಾಗೂ ಮತ್ತಿತರ ಮಲೆನಾಡ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯದೆ ಇರುವುದರಿಂದ ತುಂಗಭದ್ರೆಯ ಒಡಲು ಇನ್ನೂ ಬರಿದಾಗಿಯೆ ಇದೆ.

 ಈ ಭಾಗದಲ್ಲಿ ಸಮೃದ್ಧವಾಗಿ ಮಳೆಯಾಗಲಿ ಬಿಡಲಿ ಆದರೆ ಪ್ರತೀ ವರ್ಷ ಮೇ ಅಥವಾ ಜೂನ್ ತಿಂಗಳಲ್ಲಿ ಮಲೆನಾಡಿನ ಭಾಗಗಳಲ್ಲಿ ಸುರಿಯುವ ವಿವಿಧ ಮಳೆಗಳಿಂದ ತುಂಗಭದ್ರಾ ನದಿಯಂತು ತುಂಬಿ ತುಳುಕುತ್ತಿರುತ್ತಿತ್ತು. ಆದರೆ ಮಲೆನಾಡಿನಲ್ಲಿಯೂ ಈ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಸುರಿಯದೆ ಇರುವುದರಿಂದ `ಉತ್ತರ ಕರ್ನಾಟಕಕ್ಕೆ ಮಳೆಯಾಗಲಿ ಬಿಡಲಿ ಮಲೆನಾಡಿನಲ್ಲಿ ಸುರಿಯುವ ಭಾರಿ ಮಳೆಯಿಂದ ತುಂಗಭದ್ರಾ ನದಿಗೆ ಭಾರಿ ಪ್ರವಾಹವಂತೂ ಬಂದೆ ಬರುತ್ತದೆ~ ಎನ್ನುವ ಜನರ ನಿರೀಕ್ಷೆ ಈ ವರ್ಷ ಸಂಪೂರ್ಣವಾಗಿ ಹುಸಿಯಾಗಿದೆ. 

 ತುಂಗಭದ್ರಾ ನದಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ನದಿಗಳಿಗೆ ನೀರು ಪೂರೈಸುವ ಅಶ್ವಿನಿ, ಭರಣಿ, ರೋಹಿಣಿ, ಕೃತಿಕಾ, ಮೃಗಶಿರಾ ಮೊದಲಾದ ದೊಡ್ಡ ದೊಡ್ಡ ಮಳೆಗಳೆಲ್ಲ ಕೈಕೊಟ್ಟಿದ್ದು, ಚಳಿಗಾಲ ಮತ್ತು ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗುವ ನಿರೀಕ್ಷೆ ಇದೆ. ಕಳೆದ ಎರಡು ಮೂರು ದಿನಗಳಿಂದ ಮಲೆನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಮಳೆಯ ನೀರು ಘಟ್ಟ ಪ್ರದೇಶದ ಹಳ್ಳ ಕೊಳ್ಳ, ಝರಿ ತೊರೆಗಳನ್ನು ದಾಟಿ ನದಿಯ ಉದ್ದಕ್ಕೂ ಇರುವ ಗುಂಡಿಗಳನ್ನು ತುಂಬಿ ತುಂಗಭದ್ರಾ ನದಿಯನ್ನು ಸೇರುವುದರೊಳಗಾಗಿ ನೀರಿನ ಪ್ರಮಾಣ ಮತ್ತು ರಭಸ ತೀರಾ ಕ್ಷೀಣಿಸಿರುತ್ತದೆ ಎಂದು ಹಿರಿಯ ತಲೆಮಾರಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. 

 ತಾಲ್ಲೂಕಿನ ನದಿ ದಂಡೆಯ ಮೇಲಿನ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಸಿಂಗಾಟಾಲೂರ, ಹಮ್ಮಿಗಿ, ಬಿದರಳ್ಳಿ ಮೊದಲಾದ ನದಿ ದಂಡೆಯ ಮೇಲಿನ ನದಿಯಾಶ್ರಿತ ನೀರಾವರಿ ಜಮೀನುಳ್ಳ ರೈತರು ಅತ್ತ ಮಳೆಯು ಇಲ್ಲದೆ ಇತ್ತ ಹೊಳೆಯು ತುಂಬದೆ ಇರುವುದರಿಂದ ತುಂಬಾ ಕಂಗಾಲಾಗಿದ್ದಾರೆ. 

 ನದಿ ದಂಡೆಯ ಮೇಲಿನ ಗ್ರಾಮಗಳ ರೈತರು ಮುಂಗಾರು ಮಳೆ ಬಾರದಿದ್ದರೂ ನದಿಯ ನೀರನ್ನು ಬಳಸಿಕೊಂಡು ಜೋಳ, ಶೇಂಗಾ, ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ ಬಿತ್ತುತ್ತಿದ್ದರು. ಮಳೆ ಬಾರದಿದ್ದರೂ ಹೊಳೆಯ ನೀರನ್ನಾದರೂ ಬಳಸಿಕೊಂಡು ಅಲ್ಪ ಸ್ವಲ್ಪ ನೀರಾವರಿ ಬೆಳೆಯನ್ನಾದರೂ ಬೆಳೆಯಬಹುದು ಎನ್ನುವ ಅವರ ಆಸೆಗೆ ಈ ವರ್ಷ ನದಿಯೂ ನೀರೆರಚಿದೆ.

ತುಂಗಭದ್ರಾ ನದಿಯನ್ನು ನಂಬಿ ಮೀನುಗಾರಿಕೆಯನ್ನು ಮಾಡುತ್ತಿದ್ದ ತಾಲ್ಲೂಕಿನ ಕೊರ್ಲಹಳ್ಳಿ ಹಾಗೂ ಮತ್ತಿತರ ನದಿ ದಂಡೆಯ ಮೇಲಿನ ಮೀನುಗಾರ ಕುಟುಂಬಗಳು ಕಳೆದ ನಾಲ್ಕೈದು ತಿಂಗಳಿನಿಂದ ನದಿಯಲ್ಲಿ ನೀರಿಲ್ಲದೇ ಇರುವುದರಿಂದ ಉದ್ಯೋಗವಿಲ್ಲದೆ ತಲೆಯ ಮೇಲೆ ಕೈಹೊತ್ತು ಕುಳಿತು ಕೊಂಡಿದ್ದಾರೆ. ಮೀನುಗಳು ಮೊಟ್ಟೆ ಇಡಲು ಇದು ಸಕಾಲವಾಗಿದ್ದು, ನದಿಯಲ್ಲಿ ನೀರಿಲ್ಲದ್ದರಿಂದ ಮುಂಬರುವ ದಿನಗಳಲ್ಲಿ ಮೀನುಗಾರಿಕೆಗೂ ಹೊಡೆತ ಬೀಳಲಿದೆ ಎಂದು ಮೀನುಗಾರರು ಚಿಂತಾಕ್ರಾಂತರಾಗಿದ್ದಾರೆ.

ಒಟ್ಟಿನಲ್ಲಿ ಪ್ರಸ್ತುತ ವರ್ಷ ನದಿ ದಂಡೆಯ ಮೇಲಿನ ರೈತರಿಗೆ ಹೊಳೆಯೂ ಇಲ್ಲ ಮಳೆಯೂ ಇಲ್ಲ ಎನ್ನುವಂತಹ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.                                                                                    
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.