ADVERTISEMENT

`ಪೋಸ್ಕೊ: ನಿರ್ಧಾರ ಪುನರ್ ಪರಿಶೀಲಿಸಲಿ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:33 IST
Last Updated 5 ಸೆಪ್ಟೆಂಬರ್ 2013, 6:33 IST

ಗದಗ: ಪೋಸ್ಕೊ ಕಂಪೆನಿಗೆ ಕೈಗಾರಿಕೆ ಸ್ಥಾಪಿಸಲು ಭೂಮಿ ನೀಡದಿರುವುದರಿಂದ ಕೈಗಾರಿಕಾ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಆರ್. ಶಿವಕುಮಾರ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಉದ್ದಿಮೆ ಸ್ಥಾಪನೆಗೆ ಭೂಮಿ, ನೀರು, ರಸ್ತೆ, ವಾಹನ ಸಂಚಾರ ಸೇರಿದಂತೆ  ಮೂಲಸೌಲಭ್ಯ ಅಗತ್ಯ ಇದೆ. ರಾಜ್ಯದಲ್ಲಿ ಪೋಸ್ಕೊ ಕಂಪೆನಿಗೆ ಭೂಮಿ ಸಿಗದ ಕಾರಣ ಹೊರ ನಡೆದಿದೆ. ನಾವೇ ಕಂಪೆನಿಯನ್ನು ಆಹ್ವಾನಿಸಿ ಈಗ ಹೊರಗೆ ಕಳುಹಿಸಿರುವುದು ಸರಿಯಲ್ಲ. ಇತರೆ ಕಂಪೆನಿಗಳಿಗೆ ತಪ್ಪು ಸಂದೇಶ ರವಾನಿಸದಂತೆ ಆಗುತ್ತದೆ. ಕೆಲ ರೈತರು ಭೂಮಿ ನೀಡುವುದಾಗಿ ಮುಂದೆ ಬಂದಿದ್ದರು, ಮತ್ತೆ ಕೆಲವರು ನೀಡುವುದಿಲ್ಲ ಎಂದರು.

ಈ ಬಗ್ಗೆ ಸರ್ಕಾರದ ಜತೆ ಎಫ್‌ಕೆಸಿಸಿಐ ಮಾತುಕತೆ ನಡೆಸಿತ್ತು. ಈಗ ಸರ್ಕಾರವೇ ಲ್ಯಾಂಡ್ ಬ್ಯಾಂಕ್ ಸ್ಥಾಪನೆ ಮಾಡಿ ಕೈಗಾರಿಕೆಗೆ ಬೇಕಾದ ಭೂಮಿ ವಶಪಡಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ವಾತಾವರಣಕ್ಕೆ ತಕ್ಕಂತೆ ಉಕ್ಕಿನ ಕಾರ್ಖಾನೆ, ಎಲೆಕ್ಟ್ರಾನಿಕ್ಸ್‌ಇಂಡಸ್ಟ್ರಿ, ಹೆಸರು, ಗೋವಿನ ಜೋಳ ಸಂಸ್ಕೃರಣೆ ಉದ್ದಿಮೆಗಳನ್ನು ಆರಂಭಿಸಬಹುದು. ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಸಮಾವೇಶ ಏರ್ಪಡಿಸಲು ಜನಪ್ರತಿನಿಧಿಗಳು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಪ್ರವಾಸೋದ್ಯಮ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಗದುಗಿನಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ಸ್ಥಾಪಿಸಿ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಛಾಯಾಚಿತ್ರ, ನಕಾಶೆ, ಮಾಹಿತಿಗಳನ್ನು ಒಳಗೊಂಡ ಕೈಪಿಡಿ ಒದಗಿಸಬೇಕು ಎಂದರು.

ರೋಗಗ್ರಸ್ಥ ಉದ್ದಿಮೆಗಳನ್ನು ಪುನಶ್ಚೇತನಗೊಳಿಸಲು ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ನೀಡಲು ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಲಾಗುವುದು. ಜಿಲ್ಲೆಯಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆಗೆ ನಿವೇಶನ ದೊರಕಿಸಿಕೊಡಲು ಒತ್ತಡ ಹೇರಲಾಗುವುದು. ಗದಗ ನಗರದಲ್ಲಿ ಕೈಗಾರಿಕಾ ಉದ್ದಿಮೆಗಳ ಬೆಳವಣಿಗೆಗೆ ಹಾಗೂ ಪ್ರೋತ್ಸಾಹ ದೊರೆಯಲು ಆಮದು ಮತ್ತು ರಫ್ತುದಾರರ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು

ಸೆ.15ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಸರ್ ಎಂ. ವಿಶೇಶ್ವರಯ್ಯ ಪಾರಿತೋಷಕವನ್ನು ಚಿತ್ರನಟ ದಿ.ಡಾ.ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ. ಕೇಂದ್ರ ಸಚಿವ ಚಿರಂಜಿವಿ ಅವರು ಪಾರ್ವತಮ್ಮ ರಾಜಕುಮಾರ್ ಅವರಿಗೆ ಪಾರಿತೋಷಕ ಪ್ರದಾನ ಮಾಡಲಿದ್ದಾರೆ  ಎಂದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಾಜಶೇಖರ ಶಿರೂರ, ಸಂಗಮೇಶ ದುಂದೂರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.