ADVERTISEMENT

ಬಂಪರ್ ಬೆಳೆ ನಿರೀಕ್ಷೆಯಲ್ಲಿ ರೈತರು...?

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 5:10 IST
Last Updated 2 ಮಾರ್ಚ್ 2012, 5:10 IST

ಮುಂಡರಗಿ: ತಾಲ್ಲೂಕಿನ ನದಿಯಾಶ್ರಿತ ನೀರಾವರಿ ಜಮೀನಿನಲ್ಲಿ ರೈತರು ಬಿತ್ತಿರುವ ಗೆಜ್ಜೆಶೇಂಗಾ (ಬೇಸಿಗೆ ಶೇಂಗಾ) ಪ್ರಸ್ತುತ ವರ್ಷ ಸಮೃದ್ಧವಾಗಿ ಬೆಳೆದಿದ್ದು, ರೈತರು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ. 

  ಶೇಂಗಾ ಬೆಳೆಗೆ ಈವರೆಗೂ ತೀವ್ರ ಹಾನಿ ಮಾಡುವಂತಹ ಯಾವುದೆ ರೋಗ ರುಜಿನಗಳು, ಕೀಟಭಾದೆಗಳು ಕಾಣಿಸಿ ಕೊಳ್ಳದೆ ಇರುವುದರಿಂದ ರೈತರೆಲ್ಲ ಸದ್ಯ ನಿರಾತಂಕವಾಗಿದ್ದು, ಇನ್ನು 15-20 ದಿನಗಳಲ್ಲಿ ಕೆಲವು ರೈತರು ಶೇಂಗಾ ಕೀಳಲು ಪ್ರಾರಂಭಿಸಲಿದ್ದಾರೆ.

 ತಾಲ್ಲೂಕಿನ ನದಿ ದಂಡೆ ಮೇಲಿರುವ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಶಿಂಗ ಟಾಲೂರ, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ ಮೊದಲಾದ ಗ್ರಾಮಗಳಲ್ಲಿ ಬಹುತೇಕ ರೈತರು ಗೆಜ್ಜೆಶೇಂಗಾ ಬಿತ್ತಿದ್ದಾರೆ.

 ಭತ್ತ ಮತ್ತು ಕಬ್ಬು ನಾಟಿ ಮಾಡುವುದು, ವಿದ್ಯುತ್ ಕಣ್ಣಾ ಮುಚ್ಚಾಲೆ, ಬೆಳೆ ಕಟಾವು, ಅನಿಶ್ಚಿತ ಬೆಲೆ, ಕೂಲಿ ಕಾರ್ಮಿಕರ ಸಮಸ್ಯೆ ಮೊದಲಾದವುಗಳಿಂದ ಬೇಸರ ಗೊಂಡಿದ್ದ ಭಾಗಶಃ ರೈತರು ಈ ವರ್ಷ ಕಬ್ಬು ಮತ್ತು ಭತ್ತದ ಬದಲಾಗಿ ಶೇಂಗಾ ಬಿತ್ತನೆ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಈ ವರ್ಷ ಬೋರ್‌ವೆಲ್ ಮತ್ತು ನದಿಯಾಶ್ರಿತ ನೀರಾವರಿ ಜಮೀನಿನಲ್ಲಿ ರೈತರು ಒಟ್ಟು 2300ಹೆಕ್ಟೇರ್ (ಡಂಬಳ ಹೊಬಳಿ 931ಹೆಕ್ಟೇರ್ ಮತ್ತು ಮುಂಡರಗಿ ಹೊಬಳಿ 1369ಹೆಕ್ಟೇರ್) ಪ್ರದೇಶದಲ್ಲಿ ಗೆಜ್ಜೆಶೇಂಗಾ ಬೆಳೆದಿದ್ದಾರೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ ಈ ವರ್ಷ ಹೆಚ್ಚು ಶೇಂಗಾ ಆವಕವಾಗುವ ನಿರೀಕ್ಷೆ ಇದೆ.

 ಇಡೀ ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತುಂಗಭದ್ರಾ ನದಿಗೆ ಕಾಲಕಾಲಕ್ಕೆ ಭದ್ರಾ ಜಲಾ ಶಯದಿಂದ ಸಾಕಷ್ಟು ಪ್ರಮಾಣದ ನೀರು ಬಿಡುಗಡೆಗೊಳಿಸಿದ್ದು, ನದಿ ಯಾಶ್ರಿತ ನೀರಾವರಿ ಜಮೀನುಳ್ಳ ರೈತರಿಗೆ ವರದಾನವಾಗಿ ಪರಿಣಮಿಸಿದೆ.

ವಿದ್ಯುತ್ ಕಣ್ಣಾಮುಚ್ಚಾಲೆ ಯೊಂದನ್ನು ಹೊರತು ಪಡಿಸಿದರೆ ಈ ವರ್ಷ ನದಿಯಾಶ್ರಿತ ನೀರಾವರಿ ಜಮೀನುಳ್ಳ ರೈತರಿಗೆ ಅಷ್ಟೇನೂ ತೊಂದರೆಯಾಗಿಲ್ಲ ಎಂದು ಹೇಳ ಲಾಗುತ್ತಿದೆ.

 ಮಾರುಕಟ್ಟೆಯಲ್ಲಿ ಈ ವರ್ಷ ಒಂದು ಕ್ವಿಂಟಾಲ್ ಶೇಂಗಾಕ್ಕೆ 4800 ರೂಪಾಯಿ ಬೆಲೆ ಇದ್ದು, ಬರಲಿರುವ ದಿನಗಳಲ್ಲಿ ಕ್ವಿಂಟಾಲ್‌ಗೆ 5000 ರೂಪಾಯಿ ಗಡಿದಾಟುವ ಸಾಧ್ಯತೆ ಇದೆ ಎಂದು ಎಪಿಎಂಸಿ ಖರೀದಿದಾರ ಈಶ್ವರಪ್ಪ ಬೆಟಗೇರಿ ಹಾಗೂ ಮತ್ತಿತರರು ಭವಿಷ್ಯ ನುಡಿಯುತ್ತಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. 

  ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಶೇಂಗಾ ಒಕ್ಕಲು ಬರದಿಂದ ಸಾಗಲಿದ್ದು, ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ. `ಸದ್ಯಕ್ಕಂತೂ ಶೇಂಗಾ ಬೆಳೆ ಭಾಳ ಚಲೋಐತ್ರಿ, ಯುಗಾದಿ ಹಬ್ಬದಾಗ ಅಕಾಲಿಕ ಮಳೆ ಬರದಿದ್ರ ಬೆಳೆ ಹಾನಿ ಆಗೋದಿಲ್ರಿ. ಆದ್ರ ಎಪಿಎಂಸಿಗೆ ಭಾಳ ಶೇಂಗಾ ಒಟ್ಟಿಗೆ ಬಂದ್ವಂದ್ರ ರೇಟ್ ಏಕದಮ್ ಕಡಿಮಿಯಾಕೈತ್ರಿ.

ಹಂಗಾದ್ರ ಮತ್ತ ರೈತಗ ಲಾಸ್ ಆಕೈತ್ರಿ~ ಎನ್ನುತ್ತಾರೆ ಪಟ್ಟಣದ ಯುವ ರೈತ ಶಿವಾನಂದ ಇಟಗಿ. ಹೆಚ್ಚು ಬೆಳೆ ಮಾರುಕಟ್ಟೆಗೆ ಆವಕವಾದಲ್ಲಿ ಬೆಲೆ ಖಂಡಿತ ಕಡಿಮೆಯಾಗುತ್ತದೆ ಎನ್ನುವುದನ್ನೂ ಯಾರೂ ಅಲ್ಲಗಳೆಯುತ್ತಿಲ್ಲವಾದರೂ ರೈತರು ಮಾತ್ರ ಹಾಗಾಗುವುದಿಲ್ಲ ಎನ್ನುವ ಆಶಾ ಭಾವನೆ ಹೊಂದಿದ್ದಾರೆ.                                                                         

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.