ADVERTISEMENT

ಬರದಲ್ಲೂ ಭರವಸೆ ಮೂಡಿಸಿದ ರೈತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 8:33 IST
Last Updated 11 ಸೆಪ್ಟೆಂಬರ್ 2013, 8:33 IST

ಗಜೇಂದ್ರಗಡ: ಇವರು ಎಲ್ಲ ಕೃಷಿಕರಂಥಲ್ಲ. ನಿರಂತರ ಬರದ ಮಧ್ಯೆಯೂ ವಿನೂತನ ಬೆಳೆ ಬೆಳೆಯುವ ಮೂಲಕ ಅಸಾಧ್ಯವಾದದನ್ನು ಸಾಧಿಸಿ ತೋರಿಸಿದ್ದಾರೆ. ಅಲ್ಪ ಪ್ರಮಾಣದ ಮಳೆಯಲ್ಲಿ ಸಮೃದ್ಧ ಫಸಲು ಬೆಳೆದು ಕೃಷಿ ಕ್ಷೇತ್ರದ ಬಗೆಗಿನ ನಕಾರಾತ್ಮಕ ಯೋಚನೆಗಳನ್ನು ದೂರ ಮಾಡಿ ಸಕಾರಾತ್ಮಕ ಯೋಚನೆಗಳತ್ತ ಕೃಷಿಕರು ಚಿತ್ತ ಹರಿಸುವಂತೆ ಮಾಡಿದ್ದಾರೆ. ಆ ಮೂಲಕ ‘ಕೃಷಿ ಪಂಡಿತ’ ಬಿರುದನ್ನು ತಮ್ಮ ಹೆಸರಿನ ಹಿಂದಿಟ್ಟುಕೊಂಡಿದ್ದಾರೆ.

ಅವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕಾಲಕಾಲೇಶ್ವರ ಗ್ರಾಮದ ಪ್ರಗತಿಪರ ಯುವ ಕೃಷಿಕ ಕಳಕಪ್ಪ ಶರಣಪ್ಪ ಹೂಗಾರ.
ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿದ ಇವರು, ಬಾಲ್ಯದಿಂದಲ್ಲೂ ಕೃಷಿ ಬಗೆಗೆ ವಿಶೇಷ ಆಸಕ್ತಿ. ಶಾಲಾ-ಕಾಲೇಜು ದಿನಗಳಲ್ಲಿಯೇ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ­ಕೊಂಡು ಬಿ.ಎ ಪದವಿ ಪೂರ್ಣಗೊಳಿಸಿದರು. ಹದಿನೈದನೇ ವಯಸ್ಸಿನಲ್ಲಿಯೇ ಕೃಷಿಯಲ್ಲಿ ತೊಡಗಿದ ಅವರು ಹದಿನೈದು ಎಕರೆ ಮಸಾರಿ (ಜವಗು ಮಿಶ್ರಿತ ಕೆಂಪು ಪ್ರದೇಶ) ಜಮೀನಿನಲ್ಲಿ  ವಿನೂತನ ಬೆಳೆ ಬೆಳೆದಿದ್ದಾರೆ.

2002ರಲ್ಲಿ ಐದು ಎಕರೆ ದಾಳಿಂಬೆ ಬೆಳೆದು ಕೈ ಸುಟ್ಟು­ಕೊಂಡರು. ಆದರೆ ಹೂಗಾರ ಕೃಷಿಯ ಮೇಲೆ ನಂಬಿಕೆ ಕಳೆದುಕೊಳ್ಳಲಿಲ್ಲ.
ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಎಂಟು ಎಕರೆಗೂ ಭೂಮಿಯಲಿ್ಲ  150 ರಿಂದ 200 ಕ್ವಿಂಟಲ್ ಮೆಕ್ಕೆಜೋಳ, ಬೇಸಿಗೆಯಲ್ಲಿ ಹತ್ತು ಎಕರೆ ಜಮೀನಿನಲ್ಲಿ 300ಕ್ಕೂ ಅಧಿಕ ಚೀಲ ಶೇಂಗಾ ಇಳುವರಿ ಪಡೆದುಕೊಳ್ಳುತ್ತಾರೆ. ಹತ್ತಿ ಬೀಜೋತ್ಪಾದನೆಯಲ್ಲಿಯೂ ತಮ್ಮ  ಕೈಚಳಕ ತೋರಿದ್ದಾರೆ.

ಬರದಲ್ಲೂ ಸಮೃದ್ಧ!: ಕಳೆದ ಮೂರು ವರ್ಷ­ಗಳಿಂದ ರೋಣ ತಾಲ್ಲೂಕಿನಾದ್ಯಂತ ಬರ ಆವರಿಸಿದೆ. ಆದರೆ, ಕಳಕಪ್ಪ ಹೂಗಾರ ಅವರ  ಮೂರು ಕೊಳವೆ ಬಾವಿಗಳು ಬರಡಾಗಿವೆ. ಬೆಳೆಗಳಿಗೆ ಅಗತ್ಯವಿರುವ ಜಲ ದೊರೆಯುತ್ತಿಲ್ಲ­ವೆಂದು ಬೇಸರದಿಂದ ಕೃಷಿಯಿಂದ ವಿಮೂಖ­ರಾಗದೆ, ಕಡಿಮೆ ತೇವಾಂಶದ ಮೂಲಕ ಬೆಳೆಯಬಹುದಾದ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಪರಿಣಾಮ ಸದ್ಯ ಇವರ ಜಮೀನಲ್ಲಿ ಮೆಕ್ಕೆಜೋಳ, ಬೀಜೋತ್ಪಾದನೆ ಹತ್ತಿ ಬೆಳೆ, ವಿವಿಧ ಬಗೆಯ ತರಕಾರಿ, ತೆಂಗು, ನಿಂಬೆ ಬೆಳೆಗಳು ಹಸಿರಿನಿಂದ ಹೂಂಕರಿಸುತ್ತಿವೆ.

ಭರವಸೆ ಹೆಚ್ಚಿಸಿದ `ಸೋಯಾಬಿನ್': ‘ಬಯಲು ಸೀಮೆ ಹಾಗೂ ಮಸಾರಿ ಪ್ರದೇಶದಲ್ಲಿ `ಸೋಯಾಬಿನ್' ಬೆಳೆ ಬೆಳೆಯಲು ಸಾಧ್ಯವಿಲ್ಲ' ಎಂದು ವಾದಿಸಿದ ಕೃಷಿ ವಿವಿ ತಜ್ಞರೊಬ್ಬರ ವಾದವನ್ನು ಸವಾಲಾಗಿ ಸ್ವೀಕರಿಸಿದ ಕೃಷಿಕ ಕಳಕಪ್ಪ ಹೂಗಾರ ಅತ್ಯಂತ ಕಡಿಮೆ ತೇವಾಂಶದಲ್ಲಿ ಬೆಳೆಯಬಹುದಾದ `ಸೋಯಾಬಿನ್' ಬೆಳೆ ಬೆಳೆದು ಯಶಸ್ಸು ಸಾಧಿಸಬೇಕು ಎಂಬ ಛಲವನ್ನು ಇದೀಗ ಸಾಕಾರ­ಗೊಳಿಸಿದ್ದಾರೆ. ಎಕರೆಗೆ 5,500 ರೂಪಾಯಿ­ಯಂತೆ ಏಳು ಎಕರೆಗೆ 38,500 ರೂಪಾಯಿ ಖರ್ಚು ಮಾಡಿ ಸೋಯಾಬಿನ್ ಬೆಳೆದಿದ್ದಾರೆ.
ಬೆಳೆ ನಿರೀಕ್ಷೆಗೂ ಮೀರಿ ಬೆಳೆದಿದೆ. ಎಕರೆಗೆ 10 ರಿಂದ 12 ಕ್ವಿಂಟಲ್ ಫಲಸು ದೊರಕುತ್ತದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.


‘ಕೃಷಿ ಕ್ಷೇತ್ರದಲ್ಲಿ ಮಳೆ ಹಂಚಿಕೆ ಆಧಾರದ ಮೇಲೆ ಬೆಳೆಗಳನ್ನು ಬೆಳೆದರೆ ಖಂಡಿತ ಲಾಭ ಗಳಿಸ­ಬಹುದು. ನಕಾರಾತ್ಮಕ ಯೋಚನೆಗಳಿಂದ ಕೃಷಿಕರು ಹೊರ ಬಂದು ಸಕಾರಾತ್ಮಕ ಯೋಚನೆ­ಗಳಿಗೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ಪ್ರಗತಿಪರ ರೈತ ಕಳಕಪ್ಪ ಹೂಗಾರ.

‘ರೈತ ಕಳಕಪ್ಪ ಅವರು ಬರದ ಮಧ್ಯೆಯೂ ಸಮೃದ್ಧ ಬೆಳೆಗಳನ್ನು ಬೆಳೆದಿರುವುದು ಕೃಷಿ ಸಮೂಹಕ್ಕೆ ಮಾದರಿ’ ಎಂದು ತಾಲೂ್ಲಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.