ADVERTISEMENT

ಬರದ ಛಾಯೆ: ಬಿತ್ತನೆಗೆ ಮಂದಾಗದ ರೈತರು

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 5:06 IST
Last Updated 2 ಜುಲೈ 2017, 5:06 IST
ನರಗುಂದದಲ್ಲಿ ಮಳೆ ಬಾರದ ಪರಿಣಾಮ ಬಿತ್ತನೆಯಾಗದೇ ಬಣಗುಡುತ್ತಿರುವ ಭೂಮಿ
ನರಗುಂದದಲ್ಲಿ ಮಳೆ ಬಾರದ ಪರಿಣಾಮ ಬಿತ್ತನೆಯಾಗದೇ ಬಣಗುಡುತ್ತಿರುವ ಭೂಮಿ   

ನರಗುಂದ: ‘ಕಳೆದ ವರ್ಷ ಜೂನ್ ಅಂತ್ಯದ ಹೊತ್ತಿಗೆ  ಹೆಸರು ಬೆಳೆ ಒಂದಿಷ್ಟು ಬೆಳೆದು ಆಶಾಭಾವನೆ ಮೂಡಿಸಿತ್ತು, ಈ ವರ್ಷವಂತೂ ನೀರು ಚಿಮಕಿಸಿದಂಗ್  ಮಾಡಿ ಅಲ್ಲೊಮ್ಮೆ, ಇಲ್ಲೊಮ್ಮೆ ತುಂತುರು ಹನಿ ಬಿದ್ದು ಬಿತ್ತಾಕ ಹಚ್ಚಿ, ಈಗ ಮೊಳಕೆ ಒಡೆದ ಬೆಳೆ ಕಮರಾಕತ್ತೇತೀ... ಹಿಂಗಾದ್ರ ರೈತ ಬದೂಕದರ ಹೆಂಗ.. ’ಎಂದು ತಾಲ್ಲೂ ಕಿನ  ಭೈರನಹಟ್ಟಿ ರೈತ ಗುರುಶಾಂತಪ್ಪನ ಮಾತ ಕೇಳಿದರೆ  ಮನ ಕಲುಕಿ  ರೈತರ ಸಂಕಷ್ಟ ತಿಳಿಯುತ್ತದೆ.

ಕಳೆದ ಮೂರು ವರ್ಷಗಳಿಂದ ಮಳೆ ಬೀಳದೇ ಸಂಪೂರ್ಣ ಸಂಕಷ್ಟದಲ್ಲಿದ್ದಾರೆ. ಈ ಸಲವಾದರೂ ಮುಂಗಾರಿಗೆ ಮಳೆರಾಯ  ಕೃಪೆ ತೋರಬಹುದೆಂದು  ಸ್ವಲ್ಪ ಹನಿ ಉದುರುತ್ತಲೇ  ರೈತರು ಸಹಸ್ರಾರು ರೂಪಾಯಿಗಳ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದಾರೆ. ಈಗ ಮಳೆ ಬಾರದೇ ಹಾಗೂ ನಿರಂತರ ಗಾಳಿ ಬೀಸು ವಿಕೆಯಿಂದ ಅದು ಸಂಪೂರ್ಣ ಕಮರುತ್ತಿದ್ದು,  ಜೊತೆಗೆ ಈ ಭಾಗದ ಮುಖ್ಯ ಬೆಳೆಗಳಾದ ಗೋವಿನಜೋಳ ಹಾಗೂ ಹತ್ತಿ ಬಿತ್ತನೆಗೆ ರೈತರು ಮುಂದಾಗದೇ ಮುಗಿಲಿನತ್ತ ಮುಖ ಮಾಡುತ್ತಿದ್ದಾರೆ. 

ಮಳೆಗಾಗಿ ಗುರ್ಜಿ ನೃತ್ಯ, ಭಜನೆ: ವರುಣ ದೇವ ಕೃಪೆ ತೋರದ ಕಾರಣ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಅಲ್ಲಲ್ಲಿ ಗುರ್ಜಿ ನೃತ್ಯ, ಅಹೋರಾತ್ರಿ ಭಜನೆ ನಡೆಯು ತ್ತಿವೆ. ಜತೆಗೆ ಕತ್ತೆಗಳ ಮದುವೆಗೂ ಸಿದ್ದತೆ ಆರಂಭವಾಗಿದೆ.

ADVERTISEMENT

ನಿತ್ಯ ಮೋಡ,  ಮಳೆ ಬರೋಲ್ಲ: ನಿತ್ಯ ಮೋಡ ಕವಿದ ವಾತಾವರಣ ಇರುತ್ತದೆ. ಸಂಜೆಯಾದರೂ ಮಳೆ ಬಂದೀತೂ ಎಂಬ ಆಸೆ ಇರುತ್ತದೆ. ಆದರೆ ಆ ಮೋಡ ಮರೆಯಾಗಿ ಮಳೇ ಬಾರದೆ ಇರುವುದು ರೈತರನ್ನು ತೀವ್ರ ನಿರಾಸೆಗೊಳಿಸಿದೆ.

ಮಾರಾಟವಾಗದ ಬೀಜ, ಗೊಬ್ಬರ: ಜೂನ್‌– ಜುಲೈ ಹೊತ್ತಿಗೆ ಕೃಷಿ ರೈತ ಸಂಪರ್ಕ ಕೇಂದ್ರಗಳಲ್ಲಿ, ಕೃಷಿ ಮಾರಾಟ ಕೇಂದ್ರಗಳಲ್ಲಿ ಬೀಜ, ಗೊಬ್ಬರಕ್ಕಾಗಿ ನೂಕು ನುಗ್ಗಲು ಉಂಟಾಗುತ್ತಿತ್ತು. ಆದರೆ ಈಗ ಅದರತ್ತ ಯಾರೂ ಸುಳಿಯುತ್ತಿಲ್ಲ.

ಜಲಾಶಯವೂ ಖಾಲಿ:  ಮಲಪ್ರಭೆ ಅಚ್ಚುಕಟ್ಟು ಪ್ರದೇಶದಲ್ಲಿ ಸ್ವಲ್ಪ ನೀರಾವರಿ ಪ್ರದೇಶವಿದ್ದು, ಸವದತ್ತಿ ಬಳಿಯ ನವಿಲು ತೀರ್ಥ ಜಲಾಶಯ ಭರ್ತಿಯಾದರೆ ಒಂದಿಷ್ಟಾದರೂ ಅನುಕೂಲವಾಗುತ್ತದೆ.  ಅದು ಸಹಿತ ಸಂಪೂರ್ಣ ಖಾಲಿಯಾಗಿದ್ದು, ಯಾವುದರ ಭರವಸೆ ಮೇಲೆ  ರೈತರು ಜೀವನ ನಡೆಸಬೇಕೆಂದು ಆತಂಕಗೊಂಡಿದ್ದಾರೆ.

ಮುಂಗಾರು ಹಂಗಾಮಿ ನಲ್ಲಿ 6500 ಹೆಕ್ಟೇರ್‌ ಹೆಸರು,  8500 ಹೆಕ್ಟೇರ್‌ ಗೋವಿನಜೋಳ,  7000 ಸಾವಿರ ಹೆಕ್ಟೇರ್‌್ ಹತ್ತಿ, 200 ಹೆಕ್ಟೇರ್‌ ತೊಗರಿ, 500 ಹೆಕ್ಟೇರ್‌ ಶೆಂಗಾ, 500 ಹೆಕ್ಟೇರ್‌ ಹೈಬ್ರೀಡ್‌ ಜೋಳ ಸೇರಿದಂತೆ ಒಟ್ಟು 24,600 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

’ಆದರೆ ಬಿತ್ತನೆ ಅವಧಿ ಮುಗಿಯುತ್ತಿದೆ ಬೀಜದ ದಾಸ್ತಾನು ಹಾಗೆ  ಇದೆ. ಜೀವನಕ್ಕೆ ಆಧಾರ ಮುಂಗಾರು ಬೆಳೆಗಳು ಅವುಗಳೇ ಕೈ ಕೊಟ್ಟಾಗೆ ಮತ್ತೇ ಜೀವನಕ್ಕಾಗಿ ವಲಸೆ ಹೋಗುವ ದು:ಸ್ಥಿತಿ ನಿರ್ಮಾಣವಾಗುತ್ತದೆ ಎಂದು ರೈತ ಶಿವಾ ನಂದ ಗೋಲಪ್ಪನವರ ಹೇಳುತ್ತಾರೆ. ರೈತರ ಸಂಕಷ್ಟ ನೋಡಿದಾಗ  ವರುಣದೇವ ಕೃಪೆ ತೋರಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.