ADVERTISEMENT

ಬಿಜೆಪಿ ಜಯಭೇರಿ; ಕಾಂಗ್ರೆಸ್‌ಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 9:45 IST
Last Updated 5 ಜನವರಿ 2011, 9:45 IST

ಗದಗ: ಜಿಲ್ಲೆಯಲ್ಲಿ ಪ್ರಪ್ರಥಮ ಭಾರಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಕಮಲ ಅರಳಿದೆ. ಜಿಲ್ಲೆಯ ಒಟ್ಟು 18 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ 11 ಸ್ಥಾನವನ್ನು ಬಿಜೆಪಿ ಪಡೆದುಕೊಂಡರೆ, ಕಾಂಗ್ರೆಸ್ ಪಕ್ಷ ಕೇವಲ 7 ಸ್ಥಾನಗಳನ್ನು ಪಡೆದುಕೊಂಡಿದೆ.  ಅದೇ ರೀತಿ ಜಿಲ್ಲೆಯ ನರಗುಂದ, ಶಿರಹಟ್ಟಿ, ರೋಣ ತಾಲ್ಲೂಕು ಪಂಚಾಯಿತಿಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಗದಗ ತಾಲ್ಲೂಕು ಪಂಚಾಯಿತಿಯನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಮುಂಡರಗಿ ತಾಲ್ಲೂಕು ಪಂಚಾಯ್ತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ ಪಕ್ಷದ ‘ಭದ್ರಕೋಟೆ’ಯಾಗಿದ್ದ ಗದಗ ಜಿಲ್ಲೆಯಲ್ಲಿ ಬಿಜೆಪಿ ಈ ಚುನಾವಣೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಸ್ವಕ್ಷೇತ್ರವಾದ ನರಗುಂದ ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 11 ಸ್ಥಾನಗಳಿದ್ದು, ಅದರಲ್ಲಿ ಬಿಜೆಪಿ 10 ಸ್ಥಾನಗಳನ್ನು ಪಡೆದುಕೊಂಡರೆ ಕಾಂಗ್ರೆಸ್ 1 ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ. ಶಿರಹಟ್ಟಿ ತಾಲ್ಲೂಕು ಪಂಚಾಯಿತಿ ಯಲ್ಲಿ ಒಟ್ಟು 14 ಸ್ಥಾನಗಳಿದ್ದು, ಬಿಜೆಪಿ 9 ಸ್ಥಾನ ಪಡೆದರೆ, ಕಾಂಗ್ರೆಸ್ 5 ಸ್ಥಾನ ಪಡೆದಿದೆ. ರೋಣ ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 19 ಕ್ಷೇತ್ರಗಳಿದ್ದು, ಬಿಜೆಪಿ 13 ಸ್ಥಾನಗಳನ್ನು ಪಡೆದುಕೊಂಡರೆ ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದುಕೊಂಡಿದೆ.

ಗದಗ ತಾಲ್ಲೂಕು ಪಂಚಾಯಿತಿಯಲ್ಲಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಒಟ್ಟು 16  ಕ್ಷೇತ್ರಗಳಿದ್ದು, ಕಾಂಗ್ರೆಸ್ 9 ಸ್ಥಾನ ಪಡೆದುಕೊಂಡರೆ, ಬಿಜೆಪಿ 7 ಸ್ಥಾನ ಪಡೆದುಕೊಂಡಿದೆ. ಮುಂಡರಗಿ ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 11 ಕ್ಷೇತ್ರಗಳಿದ್ದು, ಬಿಜೆಪಿ 5 ಸ್ಥಾನ ಪಡೆದರೆ, ಕಾಂಗ್ರೆಸ್ 4 ಸ್ಥಾನ ಹಾಗೂ ಜೆಡಿಎಸ್ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ಬಿಜೆಪಿ ಗದಗ ಜಿಲ್ಲೆಯಲ್ಲಿ ಜಯಭೇರಿ ಬಾರಿಸಿದೆ.

ಅಭಿವೃದ್ಧಿ ಕಾರ್ಯಕ್ಕೆ ಮನ್ನಣೆ
ಜಿಲ್ಲಾ ಪಂಚಾಯಿತಿಯ ಅಧಿಕಾರ ಸಿಕ್ಕ ಖುಷಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ರಾಜ್ಯದ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳ ಜೊತೆಗೆ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿರುವ ಮತದಾರರು ಬಿಜೆಪಿಗೆ ಮನ್ನಣೆ ನೀಡಿದ್ದಾರೆ. ಮತದಾರರು ನೀಡಿದ ತೀರ್ಪಿಗೆ ಚ್ಯುತಿ ಬಾರದ ರೀತಿಯಲ್ಲಿ ತಾವು ಆಡಳಿತ ನಡೆಸುವುದಾಗಿ ಹೇಳಿದರು. ಜಿಲ್ಲೆಯ ತಾಲ್ಲೂಕು ಪಂಚಾಯಿತಿಯಲ್ಲೂ ಅಧಿಕಾರ ಹಿಡಿದಿರುವ ಬಿಜೆಪಿಯೂ ಮುಂಡರಗಿಯಲ್ಲೂ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತದೆ. ಬಿಜೆಪಿಯ ಗೆಳತನ ಬಯಸುವವರು ಯಾರಾದರೂ ಬೆಂಬಲ ನೀಡುತ್ತಾರೆ ಎಂದರು.

ತೀರ್ಪಿಗೆ ತಲೆಬಾಗಬೇಕು: ಎಚ್.ಕೆ.ಪಾಟೀಲ
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಎಚ್.ಕೆ. ಪಾಟೀಲ, ‘ಮತದಾರರು ನೀಡಿದ ತೀರ್ಪಿಗೆ ತಲೆಬಾಗಿದ್ದು, ಬಿಜೆಪಿ ಪಕ್ಷ ತನ್ನ ಪ್ರಭಾವ ಬೀರಿ ಜಯಸಾಧಿಸಿದೆ. ಈ ಸಮಯದಲ್ಲಿ ಬೇರೆ ಏನನ್ನು ಹೇಳಿದರೂ ಅದು ಬೇರೆಯ ಅರ್ಥವನ್ನು ಪಡೆದುಕೊಳ್ಳುತ್ತದೆ. ಆದರೂ ಜನರ ಆದೇಶವನ್ನು ಒಪ್ಪಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.