ADVERTISEMENT

ಬಿಸಿಲ ಬೇಗೆ ನೀಗಿಸಿದ ಕೆರೆ

ಪೇಠಾಲೂರ ಗ್ರಾಮದ ಸಮಸ್ಯೆಗೆ ಪರಿಹಾರ ನೀಡಿದ ಹಿಂಗಾರು ಮಳೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 10:46 IST
Last Updated 29 ಏಪ್ರಿಲ್ 2018, 10:46 IST
ಡಂಬಳ ಹೋಬಳಿಯ ಪೇಠಾಲೂರ ಗ್ರಾಮದ ಕೆರೆಯ ನೀರನ್ನು ಸಾರ್ವಜನಿಕರು ತುಂಬಿಕೊಂಡು ಹೋಗುತ್ತಿರುವುದು
ಡಂಬಳ ಹೋಬಳಿಯ ಪೇಠಾಲೂರ ಗ್ರಾಮದ ಕೆರೆಯ ನೀರನ್ನು ಸಾರ್ವಜನಿಕರು ತುಂಬಿಕೊಂಡು ಹೋಗುತ್ತಿರುವುದು   

ಡಂಬಳ: ಪೇಠಾಲೂರ ಗ್ರಾಮಸ್ಥರು ನಿತ್ಯ ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪುತ್ತಿರಲಿಲ್ಲ. ಮಳೆಯ ಅನಿಶ್ಚಿತತೆಯಿಂದ ಮೆಳೆಗಾಲದಲ್ಲಿಯೇ ನೀರಿಗೆ ಹಾಹಾಕಾರ ಪಡುವ ಪರಿಸ್ಥಿತಿ ಇತ್ತು. ಆದರೆ ಈ ವರ್ಷ ಹಾಗಿಲ್ಲ; ಕಳೆದ ವರ್ಷ ಹಿಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಗ್ರಾಮದ ಕೆರೆ ತುಂಬಿದ್ದು ಬಿರುಬೇಸಿಗೆಯಲ್ಲೂ ಜನರು ಹಾಗೂ ಪ್ರಾಣಿಪಕ್ಷಿಗಳ ನೀರಿನ ದಾಹ ತಣಿಸುತ್ತಿದೆ.

‘ಪೇಠಾಲೂರ ಗ್ರಾಮದ ಜನರು ದಶಕದಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದು, ಹಲವು ರಾಜಕಾರಣಿಗಳು ಹಾಗೂ ಸರ್ಕಾರಗಳು ಬದಲಾದರೂ ಶಾಶ್ವತ ಪರಿಹಾರ ಮಾತ್ರ ದೊರೆತಿಲ್ಲ. ನೀರಿಗಾಗಿ ರಾತ್ರಿ ಜಾಗರಣೆ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈಗ ಕೆರೆ ಭರ್ತಿಯಾಗಿದೆ. ಒಂದು ವೇಳೆ ಕೆರೆ ಖಾಲಿ ಆದರೆ ನೀರಿನ ಸಮಸ್ಯೆ ಹೇಳತೀರದು’ ಎನ್ನುತ್ತಾರೆ ಗ್ರಾಮದ ಸುಮಂಗಲಾ ಹರಪನಹಳ್ಳಿ ಹಾಗೂ ಕುಮಾರಸ್ವಾಮಿ ಹಿರೇಮಠ.

ಕೆರೆ ನೀರು ರಕ್ಷಿಸಲು ಗ್ರಾಮದ ಕೆಲ ಕೂಲಿ ಕಾರ್ಮಿಕರು ಸ್ವಯಂ ಪ್ರೇರಣೆಯಿಂದ ಕೆರೆ ಹೂಳು ಎತ್ತುವ ಕೆಲಸ ಮಾಡುತ್ತಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ₹ 10 ಲಕ್ಷ ಅನುದಾನದಲ್ಲಿ ಕೆರೆಯನ್ನು ಪುನಶ್ಚೇತನ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಕೆರೆಯ ಸುತ್ತ ಕಲ್ಲನ್ನು ಹೊದಿಸುವುದು ಸೇರಿ ಕೆರೆಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
**
ಕೆರೆಯ ಮೇಲ್ಭಾಗದ ಸುತ್ತಲೂ ಕಲ್ಲು ಹೊದಿಸಿದರೆ ಅಧಿಕ ನೀರು ಸಂಗ್ರಹವಾಗುತ್ತದೆ ಮತ್ತು ಅಂತರ್ಜಲ ಹೆಚ್ಚಳವಾಗಲು ಸಹಕಾರಿಯಾಗುತ್ತದೆ
– ಶಿವಾನಂದ ಆಚಾರ್ಯ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ 

ADVERTISEMENT

ಲಕ್ಷ್ಮಣ ಎಚ್. ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.