ADVERTISEMENT

ಬೀದಿ ನಾಯಿ ಹಾವಳಿ ತಪ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 9:30 IST
Last Updated 18 ಡಿಸೆಂಬರ್ 2012, 9:30 IST

ಮುಂಡರಗಿ: ಬೀದಿ ನಾಯಿಗಳ ಕಾಟ ನಿಯಂತ್ರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಗುರುವಾರ ಪಟ್ಟಣದ ಗಾಂಧೀ ಚೌಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಿ ನಂತರ ಪುರಸಭೆ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ವಿವಿಧ ಭಾಗಗಳಲ್ಲಿ ಬೀದಿ ನಾಯಿ, ಹಂದಿ ಹಾಗೂ ಮಂಗಗಳ ಕಾಟ ವಿಪರೀತವಾಗಿದ್ದು, ಸಾರ್ವಜನಿಕರು ಅವುಗಳ ಕಾಟದಿಂದ ತತ್ತರಿಸಿ ಹೋಗಿದ್ದಾರೆ. ಬೀದಿ ನಾಯಿ, ಹಂದಿ ಹಾಗೂ ಮಂಗಗಳ ಕಾಟದಿಂದಾಗಿ ಪಟ್ಟಣದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಅಡ್ಡಾಡದಂತಾಗಿದ್ದು, ಭಯದಲ್ಲಿಯೇ ಅಡ್ಡಾಡಬೇಕಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಂಗ ಹಾಗೂ ಹಂದಿಗಳು ಸಾರ್ವ ಜನಿಕರು ಮನೆಯ ಮುಂದೆ ಹಾಗೂ ಮನೆಯ ಮೇಲೆ ಹಾಕುವ ತರಕಾರಿ, ಹಣ್ಣು, ಕಾಳು ಕಡಿಗಳನ್ನು ಕ್ಷಣಾರ್ಧದಲ್ಲಿ ತಿಂದು ಹಾಕುತ್ತಿದ್ದು, ಪುರಸಭೆಯವರು ತಕ್ಷಣ ಬೀದಿ ನಾಯಿ ಮತ್ತು ಹಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಅಥವಾ ನಿಯಮಾನುಸಾರ ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಟ್ಟಣದ ಸುತ್ತ ಮುತ್ತ ಇರುವ ಕೃಷಿ ಜಮೀನನನ್ನು ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸಿ ಪಟ್ಟಣದ ಎಲ್ಲ ಭಾಗಗಳಲ್ಲಿ ಲೇಔಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಪುರಸಭೆಯು ಅವುಗಳಿಗೆ ಕಡಿವಾಣ ಹಾಕಬೇಕು. ಪಟ್ಟಣದ ಸುತ್ತ ಮುತ್ತ ಅನಧಿಕೃತವಾಗಿ ಲೇಔಟ್‌ಗಳನ್ನು ನಿರ್ಮಿಸಿರುವುದು ಕಂಡು ಬಂದಲ್ಲಿ ಅಂತಹ ಲೇಔಟ್‌ಗಳನ್ನು ರದ್ದುಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಂತರ ಪುರಸಭೆ ಮುಖ್ಯಾಧಿಕಾರಿ ಪಾಟೀಲ ಧರಣಿ ನಿರತರ ಬಳಿಗೆ ಆಗಮಿಸಿ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಧರಣಿ ಸತ್ಯಾಗ್ರಹ ವಾಪಸ್ ಪಡೆದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನವಲಗುಂದ, ಡಿ.ಎಸ್. ಪೂಜಾರ, ಡಿ.ಎಚ್.ಕಟ್ಟಿಮನಿ, ಬಸವ ರಾಜ ಹೂಗಾರ, ಅಂದಾನಗೌಡ ಕುಲ ಕರ್ಣಿ, ಸುಬಾನಸಾಬ ಸಾರಮೂರನ ಹಳ್ಳಿ, ಶರಣಪ್ಪ ತ್ಯಾಮಣ್ಣವರ, ಬಸವ ರಾಜ ವಡ್ಡಟ್ಟಿ, ಶಂಭಲಿಂಗಯ್ಯ ಯಳವತ್ತಿಮಠ, ಭರತ್ ಹೊನ್ನಳ್ಳಿ, ಮಹೇಶ ಪೂಜಾರ, ಚಂದ್ರಶೇಖರ ಪೂಜಾರ, ದೇವರಾಜ ಕಾಡಣ್ಣವರ, ಮಂಜು ಬಂಡಿವಡ್ಡರ, ನಜೀರ್ ಹೊನ್ನಳ್ಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.