ADVERTISEMENT

ಬ್ಯಾಂಕ್ ನೌಕರರ ಮುಷ್ಕರ: ವಹಿವಾಟು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:14 IST
Last Updated 19 ಡಿಸೆಂಬರ್ 2013, 6:14 IST

ಗದಗ: ಅಖಿಲ ಭಾರತ ಬ್ಯಾಂಕ ನೌಕರರ ಒಕ್ಕೂಟ ಬೇಡಿಕೆ ಈಡೇರಿಕೆಗೆ  ಆಗ್ರಹಿಸಿ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ನೀಡಿದ ಕರೆಯ ಹಿನ್ನೆಲೆಯಲ್ಲಿ  ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟ  ಬುಧವಾರ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ  ನಡೆಸಿತು.

ತ್ವರಿತ ವೇತನ ಪರಿಷ್ಕರಣೆ ಹಾಗೂ ಅನಪೇಕ್ಷಿತ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ತಡೆಗೆ ಆಗ್ರಹಿಸಿ ಬೇಡಿಕೆ ಇಟ್ಟಿರುವ ನೌಕರರು ತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಎಲ್ಲ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಬುಧವಾರ ನಗರದಲ್ಲಿ ಬ್ಯಾಂಕ್ ವಹಿವಾಟು ಸ್ಥಗಿತಗೊಂಡು ಸಾರ್ವಜನಿಕರು ಪರಾದಡಬೇಕಾಯಿತು. ಎಟಿಎಂ ಕೇಂದ್ರಗಳ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು  ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಎ.ಎಸ್.ಕುಲಕರ್ಣಿ,  ಖಜಾಂಚಿ ವ್ಹಿ.ಎಚ್. ಬಡಿಗಣ್ಣವರ, ಪಿ.ಎಸ್. ಗಾಯಕವಾಡ, ಮಾಗುಂಡ, ಐ.ಐ. ಶೇಖ್, ಸಿ.ಎಸ್. ಹಿರೇಮಠ, ಅಶೋಕ ವಡವಡಗಿ, ವಿ,ಬಿ. ಇನಾಮತಿ  ಪಾಲ್ಗೊಂಡಿದ್ದರು.

ಲಕ್ಷ್ಮೇಶ್ವರ ವರದಿ
ಲಕ್ಷ್ಮೇಶ್ವರ: ಬ್ಯಾಂಕು ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹಾರ ಸ್ಥಗಿತಗೊಂಡಿದ್ದರಿಂದ ಬಹಳಷ್ಟು ಗ್ರಾಹಕರು ಪರದಾಡಬೇಕಾಯಿತು.

ಯಾವಾಗಲೂ ಗ್ರಾಹಕರಿಂದ ಗಿಜಿಗುಡುತ್ತಿದ್ದ ಸ್ಟೇಟ್‌ ಬ್ಯಾಂಕ್‌ ಆವರಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಅದರಂತೆ ವೃದ್ಧಾಪ್ಯ ಸೇರಿದಂತೆ ಬೇರೆ ಬೇರೆ ಮಾಸಾಶನ ಪಡೆಯಲು ಆಗಮಿಸಿದ್ದ ಫಲಾನುಭವಿಗಳು ಬ್ಯಾಂಕು ಬಂದ್‌ ಆಗಿದ್ದರಿಂದ ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.