ಗಜೇಂದ್ರಗಡ: ಗಣಪತಿ ಬರಲು ಕ್ಷಣ ಗಣನೆಯೇ ಆರಂಭವಾಗಿದೆ. ತಯಾರ ಕರಿಗೆ ಬಿಡುವಿಲ್ಲದ ಕೆಲಸ. ಜನತೆ ಮುಂಗಡವಾಗಿಯೇ ಕಾಯ್ದಿರಿಸಿದ್ದಾರೆ.ಅಮಾವಾಸ್ಯೆ ಮುಗಿದ ಐದನೇ ದಿನಕ್ಕೆ (ಶುಕ್ರವಾರ) ಗಣಪತಿ ಪ್ರತಿಷ್ಠಾಪಿಸಲಾಗುವುದು.
ಈ ಸಾರಿ ಪಿ.ಒ.ಪಿ ಗಣಪತಿ ನಿಷೇಧಿಸಿ ಜಿಲ್ಲಾ ಪರಿಸರ ಅಧಿಕಾರಿಗಳು ಕಟ್ಟು ನಿಟ್ಟಿನ ನಿಗಾ ವಹಿಸಿದ್ದಾರೆ. ಕಾರಣ ಕೆರೆ ಯಿಂದ ತಂದ ಮಣ್ಣಿನಲ್ಲಿ ಗಣಪತಿಗೆ ರೂಪಕೊಡಲು ಕಲಾವಿದರು ಈಗ್ಗೆ ಒಂದೆರಡು ತಿಂಗಳುಗಳ ಹಿಂದೆ ಮಣ್ಣೆತ್ತಿನ ಕಾರ್ಯ ಆರಂಭಿಸಿದ್ದಾರೆ. ಮೊದಲೆ ಮಾಡಿಟ್ಟ ಅಚ್ಚುಗಳಲ್ಲಿ ಮಣ್ಣನ್ನು ಹದವಾಗಿ ತಿದ್ದಿ ತೀಡಿ ಒಂದು ರೂಪಕೊಡಲು ಅವರು ಪಟ್ಟ ಪಾಡು ಅಸದಳ.
ಇಲ್ಲಿನ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಹನುಮಂತರಾವ್ ಗಾಯಕವಾಡ ಅವರಿಗೆ ಕೈತುಂಬ ಕೆಲಸ. ‘ಈ ಸಲ ಸೀಜನ್ ಇಲ್ಲ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಅವರಲ್ಲಿ ದುಡ್ಡಿಲ್ಲ, ಇಂತಾದರಾಗ ಗಣಪತಿ ಕೊಳ್ಳುವವರು ಚೌಕಾಶಿ ಮಾಡುವುದು ಸಹಜ. ಆದರೆ ಇವುಗಳನ್ನು ಮಾಡುವ ಕಲಾವಿದರಿಗೆ ಇದರಿಂದ ತೊಂದರೆ’ ಎನ್ನುತ್ತಾರೆ.
ತಮ್ಮ ಮಕ್ಕಳೊಂದಿಗೆ ಕುಷ್ಟಗಿ ರಸ್ತೆಗೆ ಹೊಂದಿರುವ ‘ಭವಾನಿ ಕಲಾನಿಧಿ’ಯಲ್ಲಿ ಈಗ ಬಹಳಷ್ಟು ಗಣಪತಿ ತಯಾ ರಿಸಿದ್ದಾರೆ. ಕೈಬೆರಳು ಕಳೆದುಕೊಂಡರೂ ಅವರ ಕೈಯಲ್ಲಿ ಕಲೆ ಅರಳಿ ಅದ್ಭುತವಾಗಿ ರೂಪಪಡೆದುಕೊಳ್ಳುವ ಬಗೆಯನ್ನು ನೋಡಿದಾಗ ಸೋಜಿಗ ಎನಿಸುತ್ತದೆ.
ತಮ್ಮ ಮಕ್ಕಳಾದ ಯಮನೂರಪ್ಪ, ಗಣೇಶ, ಮೌನೇಶ, ಸತೀಶ ಮತ್ತು ಶಂಕರರೊಂದಿಗೆ ಗಣಪತಿ ತಯಾರಿಸು ವಲ್ಲಿ ಅವರು ದಣಿವರಿಯದ ಕೆಲಸದಲ್ಲಿ ತೊಡಗಿದ್ದಾರೆ. ಸಣ್ಣ ಗಣಪತಿ ₹ 100 ರಿಂದ ₹ 150, ದೊಡ್ಡ ಗಣಪತಿ ₹ 250 ರಿಂದ ₹ 500 ಗಳವರೆಗೆ ಮಾರಾಟ ಮಾಡುವ ಇರಾದೆಯನ್ನು ಹೊಂದಿದ್ದಾರೆ.ಅವರ ಮಗ ಯಮನೂರಪ್ಪ ‘ಸೊಲ್ಲಾಪುರದಿಂದ ಬಣ್ಣವನ್ನು ತರಿಸಲಾಗಿದ್ದು. ಅದು ಪರಿಸರಕ್ಕೆ ಪೂರಕವಾದ ನೀರ ಬಣ್ಣ’ ವೆನ್ನುತ್ತಾರೆ.
ಪಟ್ಟಣದಲ್ಲಿ ಸುಮಾರು 4–5 ಮನೆತನಗಳು ಗಣಪತಿಯ ತಯಾ ರಿಸುತ್ತವೆ. ಅವರೂ ಕೂಡಾ ಹಗಲು ರಾತ್ರಿ ಎನ್ನದೇ ಗಣಪತಿಗೆ ರೂಪ ಕೊಡಲು ದುಡಿಯುತ್ತಿದ್ದಾರೆ. ಏಕೆಂದರೆ ಅದು ಅವರ ಬದುಕನ್ನು ರೂಪಿಸುತ್ತದೆ. ಈಗಾಗಲೇ ಪಟಾಕಿ ಅಂಗಡಿ ಅಲ್ಲಲ್ಲಿ ತೆರೆದುಕೊಳ್ಳುತ್ತಿವೆ. ಪಟ್ಟಣದಲ್ಲಿ ಗಣಪತಿ ಪ್ರತಿಷ್ಠಾಪನೆಗಾಗಿ ಮಂಟಪಗಳು ತಲೆ ಎತ್ತುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.