ADVERTISEMENT

ಮೂಲಸೌಕರ್ಯ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 6:51 IST
Last Updated 20 ಸೆಪ್ಟೆಂಬರ್ 2013, 6:51 IST

ಗಜೇಂದ್ರಗಡ: ಸಮರ್ಪಕ ಮೂಲ ಸೌಕರ್ಯ ಪೂರೈಸಲು ಆಗ್ರಹಿಸಿ ಸಿಪಿಐ (ಎಂ) ನೇತೃತ್ವದಲ್ಲಿ ಗಜೇಂದ್ರಗಡ ನಾಗ­ರಿ­ಕರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿ­ದರು.

ನಗರದ ರಾಜವಾಡೆಯಿಂದ ಆರಂಭ­ಗೊಂಡ ಪ್ರತಿಭಟನಾ ನಿರತ ಧರಣಿ ಮೆರವಣಿಗೆ ಹಿರೇಬಜಾರ, ದುರ್ಗಾ ವೃತ್ತ, ಶಿವಾಜಿ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ, ಕುಷ್ಟಗಿ ರಸ್ತೆ, ಭೋವಿ ಓಣಿ ಮೂಲಕ ಸಂಚರಿಸಿ ಸಾರ್ವಜನಿಕ ಗ್ರಂಥಾಲಯದ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು.

‘ವಸತಿ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ವಸತಿ, ನಿವೇಶನಗಳಿಲ್ಲ. ಹೀಗಾಗಿ ಸರ್ಕಾರ ಹೇಳುವ ಗುಡಿಸಲು ಮುಕ್ತ ರಾಜ್ಯ ಮಾತ್ರ ಇಲ್ಲಿ ಬರೀ ಕನಸು. ಅನರ್ಹ ಫಲಾನುಭವಿಗಳನ್ನು ವಸತಿ, ಆಶ್ರಯ ಯೋಜನೆ­ಗಳಡಿಯಲ್ಲಿ ಆಯ್ಕೆ ಮಾಡಿ ಸರ್ಕಾರಿ ಯೋಜನೆಗಳನ್ನು ದುರುಪ­ಯೋಗ ಮಾಡಿಕೊಳ್ಳಲಾಗಿದೆ. ಹೀಗಾಗಿ ನೈಜ ಫಲಾನುಭವಿಗಳಿಗೆ ತಾಲ್ಲೂಕಿನಲ್ಲಿ ಸಮರ್ಪಕ ಸೂರಿಲ್ಲ’ ಎಂದು ಸಿಪಿಐ (ಎಂ) ಜಿಲ್ಲಾ ಘಟಕದ ಮುಖಂಡ ಎಂ.ಎಸ್‌.ಹಡಪದ ಸರ್ಕಾರದ ವಿರುದ್ಧ ಹರಿ­ಹಾಯ್ದರು.

‘ಕಳೆದು ಐದು ತಿಂಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರು ತಾಲ್ಲೂ­ಕಿನ ಎರಡು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮ­ರ್ಪಕ ವಸತಿ, ನಿವೇಶನ ಯೋಜನೆ ಜಾರಿಗೊಳಿ­ಸುವುದಾಗಿ ಹೇಳಿ ನಿವೇಶನ ಹಾಗೂ ಆಶ್ರಯ ಯೋಜನೆಯಡಿ ಮನೆ­ಗಳನ್ನು ನಿರ್ಮಿಸಿಕೊಳ್ಳಲು  ಆಯ್ಕೆ­ಗೊಂಡ ಫಲಾನು­ಭವಿಗಳಿಗೆ ಕಾಮಗಾರಿ ಹಾಗೂ ಆದೇಶ ಮಂಜೂರಾತಿ ಹಕ್ಕು ಪತ್ರ­ಗಳನ್ನು ನೀಡಿದ್ದಾರೆ.

ಹೀಗಿದ್ದರೂ ಆಯಾ ಪುರಸಭೆಗಳು ವಸತಿ ಹಾಗೂ ನಿವೇಶನಕ್ಕಾಗಿ ಕಾಯ್ದಿರಿಸಲಾದ ಜಮೀನನ್ನು ಲೇಔಟ್‌ಗಳನ್ನಾಗಿ ಪರಿ­ವರ್ತಿಸಲು ಮುಂದಾಗಿಲ್ಲ. ಪರಿಣಾಮ ಬಡ­ವರು ಹಾಗೂ ಹಿಂದುಳಿದ ವರ್ಗದ ಶ್ರಮಿಕರು ದುಬಾರಿ ಮೊತ್ತದ ಬಾಡಿಗೆ ನೀಡಿ ಜೀವಿಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಮುಖಂಡ ಪೀರು ರಾಠೋಡ್‌ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ­ವಾಗಿದೆ. ಹೀಗಿದ್ದರೂ ಸ್ಥಳೀಯ ಆಡಳಿತ ಸಮಸ್ಯೆ ನಿವಾರಣೆಗೆ ಕನಿಷ್ಠ ಕ್ರಮ ಕೈಗೊಂಡಿಲ್ಲ’ ಎಂದರು.

‘ಅಲ್ಲದೆ, ನಗರದ ಬಡ ಹಾಗೂ ಹಿಂದುಳಿದ ನಾಗರಿಕರು ವಾಸಿಸುವ ಬಡಾವಣೆಗಳಿಗೆ ರಸ್ತೆ,  ಚರಂಡಿ, ಸಾರ್ವಜನಿಕ ನಲ್ಲಿ, ಬೀದಿ ವಿದ್ಯುತ್‌ ದ್ವೀಪಗಳಿಲ್ಲ. ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ’ ಎಂದು ಅವರು ದೂರಿದರು.

ನಗರದ ಬಡ ಹಾಗೂ ಹಿಂದುಳಿದ ಬಡಾವಣೆಗಳ ಸಾವಿರಾರು ನಾಗರಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.