ADVERTISEMENT

ಮೆಕ್ಕೆಜೋಳಕ್ಕೆ ಕಂಬಳಿ ಹುಳು ಕಾಟ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 10:44 IST
Last Updated 22 ಜೂನ್ 2013, 10:44 IST

ಗಜೇಂದ್ರಗಡ: ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆ ಎಂದೇ ಬಿಂಬಿತಗೊಂಡಿರುವ ಮೆಕ್ಕೆಜೋಳಕ್ಕೆ `ಕೆಂಪು ತಲೆ ಕಂಬಳಿ ಹುಳು' ಬಾಧೆ ವ್ಯಾಪಕವಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಿರಂತರ ಬರದಿಂದ ಜಂಘಾಬಲವನ್ನೇ ಕಳೆದುಕೊಂಡಿರುವ ರೈತ ಸಮೂಹ ಪ್ರಸಕ್ತ ವರ್ಷವೂ ಎದುರಾದ ಬರದ ಬವಣೆಯಿಂದ ಪಾರಾಗಲು ಅಳಿದುಳಿದ ಕೊಳವೆ ಬಾವಿಯ ಅಂತರ್ಜಲ ಹಾಗೂ ಆಗೊಮ್ಮೆ ಈಗೊಮ್ಮೆ ಉದುರುವ ಮಳೆಯನ್ನೇ ನೆಚ್ಚಿಕೊಂಡು `ಮೆಕ್ಕೆಜೋಳ' ಬಿತ್ತನೆಗೆ ಮುಂದಾದರು. ಕೃಷಿಕರು ಅಂದುಕೊಂಡಂತೆ ಬೆಳೆಯೂ ಸಹ ಉತ್ತಮ ರೀತಿಯಲ್ಲಿ ಬೆಳೆದು ನಿಂತಿತ್ತು. ಇದರಿಂದ ಬೆಳೆಗಾರ ಲಾಭದ ಕನಸು ಕಂಡಿದ್ದ. ಆದರೆ, 20 ರಿಂದ 25 ದಿನದ ಎಳೆ ಬೆಳೆಗೆ `ಕೆಂಪು ತಲೆ ಹುಳು' ಬಾಧೆ ವ್ಯಾಪಕವಾಗಿದೆ. ಬಾಧೆ ನಿಯಂತ್ರಣಕ್ಕೆ ಬೆಳೆಗಾರರು ಬಳಸಿದ ಎಲ್ಲ ಪ್ರಯೋಗಗಳು ನಿರುಪಯುಕ್ತಗೊಂಡ ಪರಿಣಾಮ ಮೆಕ್ಕೆಜೋಳ ಬೆಳೆದ ತಪ್ಪಿಗಾಗಿ ಕೃಷಿಕರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

30,200 ಹೆಕ್ಟೇರ್ ಮಸಾರಿ (ಜೌಗು ಮಿಶ್ರಿತ ಕೆಂಪು) ಪ್ರದೇಶ. 56,035 ಹೆಕ್ಟೇರ್ ಎರಿ (ಕಪ್ಪು ಮಣ್ಣಿನ) ಪ್ರದೇಶವಿದೆ. ಆದರೆ, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭದಲ್ಲಿ ವರುಣ ತೋರಿದ ಉತ್ಸಾಹ ನಂತರದ ದಿನಗಳಲ್ಲಿ ಕಣ್ಮರೆಯಾಯಿತು. ಪರಿಣಾಮ ಸಮರ್ಪಕ ಮಳೆ ಸುರಿಯಬಹುದು ಎಂಬ ಅನ್ನದಾತನ ನಿರೀಕ್ಷೆಗಳೆಲ್ಲ ಹುಸಿಗೊಂಡವು. ಆದರೆ, ಬಿತ್ತನೆ ಕಾರ್ಯದ ಆರಂಭದಲ್ಲಿ 152.53 ಮಿ.ಮೀ. ಮಳೆ ಪ್ರಮಾಣದಿಂದ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡಲು ಮಾತ್ರ ಸಾಧ್ಯವಾಯಿತು. ಆದರೆ, ಬಿತ್ತನೆ ಮಾಡಿದ ಬೀಜಗಳು ಸಸಿಗಳಾಗಿ ನಿಂತಿವೆ. ಸದ್ಯ ಸಸಿಗಳಿಗೆ ಜೀವಜಲದ ಚಿಂತೆ ಎದುರಾಗಿರುವುದು ಒಂದೆಡೆಯಾದರೆ, `ಕಂಬಳಿ ಹುಳು' ಬಾಧೆ ಮತ್ತೊಂದೆಡೆ.

ಸಾಮೂಹಿಕ ದಾಳಿ: ತಿಂಗಳ ಒಳಗಿನ ಎಳೆ ಬೆಳೆಯನ್ನು ಆಯ್ಕೆ ಮಾಡಿಕೊಳ್ಳುವ `ಕೆಂಪು ತಲೆ ಕಂಬಳಿ ಹುಳು' ಮೆಕ್ಕೆಜೋಳದ ಗಿಡವೊಂದನ್ನು ಆಯ್ಕೆ ಮಾಡಿಕೊಂಡು 8 ರಿಂದ 10 ಹುಳುಗಳ ತಂಡ ಸಾಮೂಹಿಕವಾಗಿ ದಾಳಿ ಇಡುತ್ತಿವೆ. ಗಿಡವನ್ನು ಪೂರ್ಣಪ್ರಮಾಣದಲ್ಲಿ ತಿಂದು ಹಾಕಿದ ಬಳಿಕ ಪಕ್ಕದಲ್ಲಿನ ಗಿಡವನ್ನು ಆಯ್ಕೆ ಮಾಡಿಕೊಳ್ಳುತ್ತವೆ. 

ನಿಯಂತ್ರಣಕ್ಕೆ ಬರುತ್ತಿಲ್ಲ: `ಕಳೆದ ಹದಿನೈದು ದಿನಗಳಿಂದ ಮೆಕ್ಕೆಜೋಳ ಬೆಳೆಗೆ ಲಗ್ಗೆ ಇಟ್ಟಿರುವ `ಕೆಂಪು ತಲೆ ಕಂಬಳಿ ಹುಳು' ಕೀಟ ಬಾಧೆ ನಿಯಂತ್ರಣಕ್ಕೆ ಬೆಳೆಗಾರರು ನಡೆಸಿದ ಪ್ರಯತ್ನಗಳು ವಿಫಲಗೊಂಡಿವೆ. ಕೀಟಬಾಧೆ ಕಾಣಿಸಿಕೊಂಡ ತಕ್ಷಣವೇ ಲೀಟರ್‌ಗೆ 230 ರೂಪಾಯಿ ಮೌಲ್ಯದ `ಚಂಡಿಕಾ' ರಾಸಾಯನಿಕವನ್ನು ಎರಡು ಬಾರಿ ಸಿಂಪಡಿಸಲಾಗಿದೆ. ಹೀಗಿದ್ದರೂ ಕೀಟಬಾಧೆ ಮಾತ್ರ ಹತೋಟಿಗೆ ಬರುತ್ತಿಲ್ಲ ಎಂದು' ಭೈರಾಪುರ ಗ್ರಾಮದ ರೈತರಾದ ಕಳಕಪ್ಪ ಹೊಸಮನಿ, ಹೇಮಣ್ಣ ಬಾದಿಮನಾಳ ಅವಲೊತ್ತುಕೊಂಡರು. ಕಳೆದ ಹಲವು ವರ್ಷಗಳಿಂದಲೂ ಮೆಕ್ಕೆಜೋಳ ಬೆಳೆಗಾರರ ನೆಮ್ಮದಿ ಕೆಡಿಸಿರುವ `ಕೆಂಪು ತಲೆ ಕಂಬಳಿ ಹುಳು' ಕೀಟಬಾಧೆ ಎರಿ (ಕಪ್ಪು ಮಣ್ಣಿನ) ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಮಸಾರಿ (ಕೆಂಪು ಮಿಶ್ರಿತ ಜವಗು) ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿಯೇ ಪ್ರಸಕ್ತ ವರ್ಷ 3,568 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ಮೆಕ್ಕೆಜೋಳ ಬೆಳೆಗೆ ಈ ಕೀಟಬಾಧೆ ವ್ಯಾಪಕವಾಗಿದೆ.

ಆತಂಕ ಬೇಡ: ಈ ಕಂಬಳಿ ಹುಳುಗಳು 30 ದಿನಗಳ ಆಯುಷ್ಯ ಹೊಂದಿವೆ. ಇಲಾಖೆ ನೀಡುವ ರಾಸಾಯನಿಕಗಳನ್ನು ಸಕಾಲಕ್ಕೆ ಸಿಂಪಡಿಸಿದರೆ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತದೆ.  ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್  ತಿಳಿಸಿದರು.

ಹತೋಟಿ ಕ್ರಮಗಳು
`ರೈತರು ಅನಾವಶ್ಯಕ ರಾಸಾಯನಿಕಗಳನ್ನು ಸಿಂಪಡಿಸದೆ ಇಲಾಖೆ ರಿಯಾಯಿತಿ ದರದಲ್ಲಿ ನೀಡುವ `ಫೇನವಾಲ್ ಡಸ್ಟ್' ಪೌಡರನ್ನು ಸಿಂಪಡಿಸಬೇಕು. ಎಕರೆಗೆ ಕನಿಷ್ಠ 10 ಕೆ.ಜಿಯಷ್ಟು ಬೆಳಗಿನ ಜಾವ ಇಲ್ಲವೆ ಸಂಜೆ ವೇಳೆ ಸಿಂಪಡಿಸಬೇಕು. ಆಗ ಮಾತ್ರ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತದೆ' ಎಂದು ಸಹಾಯಕ ಕೃಷಿ ಅಧಿಕಾರಿ ಗಳಾದ ವಿ.ಟಿ. ವಿರಕ್ತಮಠ, ಕೆ.ಹೆಚ್. ಗಂಗೂರ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.