ADVERTISEMENT

ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:20 IST
Last Updated 23 ಏಪ್ರಿಲ್ 2013, 9:20 IST

ಗಜೇಂದ್ರಗಡ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈ ಹಿಂದಿನ ಚುನಾವಣೆಗಳಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲಿ, ಬಳಿಕ ಪ್ರಸ್ತುತ ಚುನಾವಣೆಯ ಪ್ರಣಾಳಿಕೆ ಬಿಡುಗಡೆಗೊಳಿಸಲಿ ಎಂದು ರೋಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಸವಾಲು ಹಾಕಿದರು.

ಗಜೇಂದ್ರಗಡ ನಗರದ ವಿವಿಧ ಬಡಾವಣೆಗಳಲ್ಲಿ ಮನೆ-ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳು ಅಧಿಕಾರ ನಡೆಸಿವೆ. ಆದರೆ, ಅಧಿಕಾರಕ್ಕೆ ಬರುವ ಮುನ್ನ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿನ ಕನಿಷ್ಠ ಅಂಶಗಳನ್ನು ಈಡೇರಿಸಿಲ್ಲ.

ಹೀಗಾಗಿ ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನಪರ ಕಾಳಜಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಪ್ರಸ್ತುತ ಚುನಾವಣೆ ಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತಿರಸ್ಕರಿಸುವುದು ಸೂಕ್ತ ಎಂದು ಕರೆ ನೀಡಿದರು.

ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಆಳ್ವಿಕೆಯನ್ನು ನೋಡಿ ಬೇಸತ್ತಿದ್ದಾರೆ. ಈ ಎರಡು ಪಕ್ಷಗಳು ಜನ ಹಿತವನ್ನು ಮರೆತು ಸ್ವಾರ್ಥ ಲಾಭಕ್ಕಾಗಿ ಮಿತಿ-ಮೀರಿದ ಭ್ರಷ್ಟಾ ಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯದ  ಸಂಪತ್ತನ್ನು ಲೂಟಿ ಮಾಡಿವೆ. ಹೀಗಾಗಿ ಬರೀ ಭ್ರಷ್ಟರನ್ನೇ ತುಂಬಿಸಿಕೊಂಡಿರುವ ರಾಷ್ಟ್ರೀಯ ಪಕ್ಷಗಳನ್ನು ಅಧಿಕಾರಕ್ಕೆ ತರುವ ಬದಲು ಜನಪರ ಕಾಳಜಿ  ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್‌ನ್ನು ಅಧಿಕಾರಕ್ಕೆ ತಂದು ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದು ಅವರು ಅಭಿಪ್ರಾಯಪ ಟ್ಟರು.

 ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರ ಸ್ವಾಮಿ ಅವರ ಇಪ್ಪತ್ತು ತಿಂಗಳ ಆಳ್ವಿಕೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆದಿದೆ. ಆದರೆ, ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜೆಡಿಎಸ್ ಸರ್ಕಾರದ ಸಾಧನೆಗಳನ್ನು ತನ್ನ ಸಾಧನೆಗಳೆಂದು ಬೊಬ್ಬೆ ಹಾಕುತ್ತಾ ಸ್ವಾರ್ಥ ಲಾಭಕ್ಕಾಗಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು. 

ರಾಜ್ಯದ ರೈತರ  ಪ್ರಗತಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಕೊಡುಗೆ ಶೂನ್ಯ ಎಂದು ಇದೇ ಸಂದರ್ಭದಲ್ಲಿ ದೂರಿದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರಿದರು.  ವಿಶ್ವಬ್ರಾಹ್ಮಣ, ಉಮೇಶ ಮಲ್ಲಾಪುರ, ಸಂಗಪ್ಪ ಯಲಬುಣಚಿ, ಮುಕ್ತುಮ್‌ಸಾಗರ ಮುಧೋಳ, ಉಮೇಶ ಹಿರೇಗೌಡರ, ಶರಣಪ್ಪ ಪೂಜಾರ ಹಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.