ADVERTISEMENT

ರೈತರೆದೆಗೆ ಗುಂಡಿಟ್ಟ ಸರ್ಕಾರ ನಮ್ಮದಲ್ಲ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 6:03 IST
Last Updated 10 ಅಕ್ಟೋಬರ್ 2017, 6:03 IST

ಗಜೇಂದ್ರಗಡ: ಕಾಂಗ್ರೆಸ್ ಕೆಲ ವರ್ಗದವರನ್ನು ಮಾತ್ರ ಓಲೈಸಲು ಯೋಜನೆಗಳನ್ನು ರೂಪಿಸುತ್ತಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ. ಬಿತ್ತನೆ ಬೀಜ ಮತ್ತು ಗೊಬ್ಬರ ಕೇಳಿದ ರೈತರೆದೆಗೆ ಗುಂಡಿಟ್ಟ ಸರ್ಕಾರ ನಮ್ಮದಲ್ಲ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಕೊಡಗಾನೂರು ಗ್ರಾಮದಲ್ಲಿ ಸೋಮವಾರ ₹ 12 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಕೃಷಿ ಹೊಂಡಗಳ ನಿರ್ಮಾಣ, ಸಮರ್ಪಕ ಬೀಜ ಗೊಬ್ಬರ ವಿತರಣೆ, ಸಹಕಾರಿ ಬ್ಯಾಂಕುಗಳಲ್ಲಿದ್ದ ರೈತರ ₹ 50 ಸಾವಿರ ಸಾಲ ಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿ ತಮ್ಮ ಬದ್ದತೆ ತೋರಿದ್ದಾರೆ ಎಂದರು.

ಬಡವರಿಗಾಗಿ ಅನ್ನಭಾಗ್ಯ, ಶಾಲಾ ಮಕ್ಕಳಿಗಾಗಿ ಕ್ಷೀರ ಭಾಗ್ಯ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಗಳ ಲಾಭ ಎಲ್ಲ ವರ್ಗದ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ನನ್ನ ಕ್ಷೇತ್ರದಲ್ಲಿ ಪ್ರತಿ ಗ್ರಾಮಗಳ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಹಲವು ಜನಪರ ಯೋಜನೆಗಳನ್ನು ತಂದಿದ್ದೇನೆ. ನಾವೇ ಮಾಡಿದ್ದೇವೆ ಎನ್ನುವುದರ ಬದಲು, ವಿರೋಧ ಪಕ್ಷದವರು ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದರು.

ಗಜೇಂದ್ರಗಡ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ವೀರಣ್ಣ ಸೋನ್ನದ ಮಾತನಾಡಿ, ರೈತರ ಸಾಲ ಮನ್ನಾ ಮಾಡಲು ಹಿಂದೆ ಮುಂದೆ ನೋಡುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪೆನಿಗಳ ₹ 8 ಸಾವಿರ ಕೋಟಿ ಮನ್ನಾ ಮಾಡಿದೆ. ರೈತರು ಮತ್ತು ಕಾರ್ಮಿಕರು ಇವರಿಗೆ ಕಾಣುವುದಿಲ್ಲ ಎಂದು ಹೇಳಿದರು.

ದೇಶದೆಲ್ಲೆಡೆ ಪ್ರಗತಿಪರರ ಹತ್ಯೆ ನಡೆಯುತ್ತಿದ್ದರು ಮೋದಿ ಮಾತನಾಡುತ್ತಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಆರ್‌.ಎಸ್‌.ಎಸ್, ವಿಶ್ವ ಹಿಂದೂಪರಿಷತ್, ಭಜರಂಗದಳದಂತಹ ಹಲವು ಹಿಂದೂ ಸಂಘಟನೆಗಳ ಸೂತ್ರದ ಗೊಂಬೆಯಾಗಿದೆ ಎಂದು ಟೀಕಿಸಿದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಕೆಲ ಮಂತ್ರಿಗಳು ಜೈಲಿಗೆ ಹೋಗಿ ಬಂದಿದ್ದಾರೆ. ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿಯನ್ನು ತಂದು ರಾಜ್ಯ ಬಿಜೆಪಿಯ ಅಧ್ಯಕ್ಷನನ್ನಾಗಿ ಮಾಡಿರುವುದು ನೋಡಿದರೆ, ಬಿಜೆಪಿಯಲ್ಲಿ ಸಮರ್ಥ ನಾಯಕನ ಕೊರತೆಯಿಂದೆ ಎಂಬುದು ತಿಳಿಯುತ್ತದೆ ಎಂದು ವ್ಯಂಗ್ಯವಾಡಿದರು. ನಂತರ ವೀರಾಪೂರ ಗ್ರಾಮದಲ್ಲಿ ₹ 1.98 ಕೋಟಿ ಅನುದಾನದಲ್ಲಿ ಅಪ್ರೋಚ್ ರಸ್ತೆಗೆ ಭೂಮಿ ಪೂಜೆ ನಡೆಯಿತು.

ವೀರಣ್ಣ ಶೆಟ್ಟರ, ಶಿವರಾಜ ಘೋರ್ಪಡೆ, ಶಶಿಧರ ಹೂಗಾರ, ಅಂದಪ್ಪ ಬಿಚ್ಚುರ, ಶ್ರೀನಿವಾಸ್ ಬಾಕಳೆ, ಸುಜಾತಾ ಚುಂಚ, ಮಂಗಳಾ ದೇಶಮುಖ, ಶ್ರೀಕಾಂತ ಅವಧೂತ, ವಿ.ಬಿ ಹಪ್ಪಳದ, ರಾಮಚಂದ್ರ ಹುದ್ದಾರೆ, ಕೊಟ್ರೇಶ ಚಿಲಕಾ, ನಾಗಯ್ಯ ಹಿರೇಮಠ, ಹನಮಂತ ರಾಮಜಿ, ಕೊಟ್ರೇಶ ಹೂಗಾರ, ಚಂದ್ರಶೇಖರಯ್ಯ ಹಿರೇಮಠ ಹಾಗೂ ಶಣ್ಮುಖಪ್ಪ ಕರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.