ADVERTISEMENT

ವೀಳ್ಯದೆಲೆ: ಬೆಳದವರಿಗಿಲ್ಲ ಬೆಲೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 6:15 IST
Last Updated 17 ಏಪ್ರಿಲ್ 2011, 6:15 IST

ಗಜೇಂದ್ರಗಡ: ಪಾನ್‌ಬೀಡಾ ಅಂಗಡಿಗಳಲ್ಲಿ ಒಂದು ರೂಪಾಯಿಗೆ ಒಂದೇ ವೀಳ್ಯದೆಲೆ ಕೊಡುತ್ತಿದ್ದಾರೆ. ಕೆಲವು ವ್ಯಾಪಾರಸ್ಥರಂತೂ ಬಿಡಿಯಾಗಿ ಎಲೆ ಕೊಡುವುದೇ ಇಲ್ಲ. ಪಾನ್ ಕಟ್ಟಿಸಿದರೆ ಮಾತ್ರ ವೀಳ್ಯದೆಲೆಯ ರುಚಿ ಸವಿಯಲು ಸಾಧ್ಯ. ಹೀಗಾಗಿ ಬೀಡಾ ಅಂಗಡಿಗಳಲ್ಲಿ ವೀಳ್ಯದೆಲೆಯ ಬೆಲೆ ಗಗನಕ್ಕೇರಿದೆ.

ಹಾಗಾದರೆ ಎಲೆ ಬೆಳೆದ ರೈತರಿಗೆ ಬಂಪರ್ ಬೆಲೆ ಸಿಗುತ್ತಿದೆ ಎಂದು ಅಂದುಕೊಂಡಿದ್ದರೆ ಗ್ರಹಿಕೆ ತಪ್ಪಾಗುತ್ತದೆ. ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ಬೆಲೆ ಪಾತಾಳಕ್ಕೆ ಕುಸಿದು ಬೆಳೆಗಾರರು ಆತಂಕಗೊಂಡಿದ್ದಾರೆ.

ಕಳೆದ ಒಂದು ತಿಂಗಳಿಂದ ವೀಳ್ಯದೆಲೆಯ ಬೆಲೆಯು ತೀವ್ರವಾಗಿ ಕುಸಿತಗೊಂಡು ಬೆಳೆಗಾರರ ನಿದ್ದೆಗೆಡೆಸಿದೆ. ಎಲೆ ಕಟಾವು ಮಾಡಿ ಬಂಡಲ್ ಕಟ್ಟಿಕೊಂಡು ಮಾರುಕಟ್ಟೆಗೆ ತಂದರೆ ಅಲ್ಲಿ ಸಿಗುವ ಬೆಲೆ ಮಾಡಿದ ಖರ್ಚಿಗೆ ಸಮನಾಗಿ ಒಂದು ರೂಪಾಯಿ ಕೂಡ ಉಳಿಯುತ್ತಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ.

ADVERTISEMENT

ಏಪ್ರಿಲ್, ಮೇ ತಿಂಗಳು ಮದುವೆ ಸೀಜನ್. ಈ ಸಂದರ್ಭದಲ್ಲಿ ವೀಳ್ಯದೆಲೆಗೆ ಎಲ್ಲಿಲ್ಲದ ಬೇಡಿಕೆ. ದುಪ್ಪಟ್ಟು ಬೆಲೆ ಸಿಕ್ಕು ಬೆಳೆಗಾರರು ದುಡ್ಡಿನ ಮುಖ ನೋಡುವ ಸಮಯ. ಆದರೆ ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಮತ್ತು ಖರೀದಿದಾರರು ರಚಿಸಿಕೊಂಡಿರುವ ಜಾಲದಲ್ಲಿ ರೈತರು ಸಿಕ್ಕು ನರಳುತ್ತಿದ್ದಾರೆ. ಅವರು ಘೋಷಿಸುವ ಅಡ್ಡಾದಿಡ್ಡಿ ಬೆಲೆಗೆ ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ನಳನಳಿಸುವ ವೀಳ್ಯದೆಲೆಯನ್ನು ಕೊಟ್ಟು ಅವರು ಕೊಡುವ ಪುಡಿಗಾಸು ಪಡೆದು ಬಾಡಿದ ಮೊಗದೊಂದಿಗೆ ಮನೆಯ ದಾರಿ ಹಿಡಿಯುವಂತಾಗಿದೆ.

ಒಂದೇರಡು ತಿಂಗಳ ಹಿಂದೆ ಒಂದು ಬಂಡಲ್ (ಆರು ಸಾವಿರ ಎಲೆ) ಕರಿ ವೀಳ್ಯದೆಲೆ ರೂ. 2000 ದಿಂದ 2,500 ರೂಪಾಯಿ ಹಾಗೂ ಬಿಳಿ ಎಲೆ ರೂ.1200ರಿಂದ1600ರೂಪಾಯಗಳ ವರೆಗೆ ಮಾರಾಟವಾಗುತ್ತಿತ್ತು.  ಸದ್ಯ ಕರಿ ಎಲೆ ರೂ. 300ರಿಂದ 700  ಮತ್ತು ಬಿಳಿ ಎಲೆ ರೂ. 200ರಿಂದ 500 ಮಾತ್ರ ಮಾರಾಟವಾಗುತ್ತಿದೆ. ಈ ಏಕಾಏಕಿ ಬೆಳೆ ಇಳಿಕೆಯ ಮರ್ಮ ತಿಳಿಯದೇ ರೈತರು ಕಂಗಾಲಾಗಿದ್ದಾರೆ.

ಪಟ್ಟಣದಲ್ಲಿ ವಾರದಲ್ಲಿ ಮೂರು ಸಲ ವೀಳ್ಯದೆಲೆ ಸವಾಲು ನಡೆಯುತ್ತಿದೆ. ರೋಣ ತಾಲ್ಲೂಕು ಸೇರಿದಂತೆ ಕುಷ್ಟಗಿ ತಾಲ್ಲೂಕಿನ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ರೈತರಿಗೆ ಎಲೆ ಮಾರಾಟಕ್ಕೆ ಗಜೇಂದ್ರಗಡವೇ ಪ್ರಮುಖ ಪಟ್ಟಣವಾಗಿದೆ.

ಪ್ರತಿ ಸವಾಲಿಗೂ 300 ರಿಂದ 400 ಬಂಡಲ್ ಬರುತ್ತಿದ್ದು, ವಾರಕ್ಕೆ ಸರಾಸರಿ ಒಂದು ಸಾವಿರ ಬಂಡಲ್ ವೀಳ್ಯದೆಲೆ ಬರುತ್ತವೆ. ಗದಗ, ಕೊಪ್ಪಳ ಜಿಲ್ಲೆಗಳಿಂದ ಹತ್ತಾರು ಜನ ಖರೀದಿದಾರರು ಬರುತ್ತಾರೆ. ಹೀಗಿದ್ದೂ ಒಮ್ಮೇಲೆ ಬೆಲೆ ಇಳಿಕೆಗೆ ಕಾರಣ ತಿಳಿಯದೇ ಬೆಳೆಗಾರರು ದಿಕ್ಕು ತೋಚದಾಗಿದ್ದಾರೆ.

‘ಒಂದು ಬಂಡಲ್ ಎಲೆ ಕಟಾವು ಮಾಡಲು 150 ರೂಪಾಯಿ ಕೂಲಿ ಹಾಗೂ ಒಂದು ಸಾವಿರ ಗಿಡಗಳ ಬಳ್ಳಿ ಕಟ್ಟಲು ನಾಲ್ಕು ಸಾವಿರ ಕೂಲಿ ಕೊಡಬೇಕು. ಇಲ್ಲಿ ಬಂಡಲ್‌ಗೆ 20 ರೂಪಾಯಿ ದಲಾಲಿ ಇದೆ. ಹೋಗಿ ಬರುವ ಖರ್ಚು ಸೇರಿಸಿದರೆ ಸದ್ಯದ ಬೆಲೆಯಿಂದ ನಷ್ಟವಾಗುತ್ತಿದೆ.

ಜೊತೆಗೆ ಎಲೆಬಳ್ಳಿಗೆ ಕಾಡಗಿ ರೋಗವು ಕಾಣಿಸಿಕೊಂಡಿದ್ದು, ಗಿಡಗಳು ನಾಶವಾಗುತ್ತಿವೆ.’ ಎಂದು ವೀಳ್ಯದೆಲೆ ಮಾರಾಟ ಮಾಡಲು ಬಂದಿದ್ದ ಯರಗೇರಿ ಗ್ರಾಮದ ಧರ್ಮಣ್ಣ ಗಡಾದ, ಗುಡದೂರಿನ ಯಮನಪ್ಪ ಹಲಬಿ ಕಣ್ಣೀರು ಹಾಕುತ್ತಾರೆ.

‘ಇದೀಗ ಎಲ್ಲ ಕಡೆಗೂ ಮದುವೆ, ಜಾತ್ರೆ, ಉತ್ಸವಗಳು ನಡೆಯುತ್ತಿವೆ. ಹೀಗಾಗಿ ವೀಳ್ಯದೆಲೆಗೆ ಒಳ್ಳೆಯ ಬೇಡಿಕೆ ಇದೆ. ಹೀಗಿದ್ದೂ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ್ದು, ಸಂಶಯ ಮೂಡುವಂತೆ ಆಗಿದೆ. ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ತಿಳಿಯದಾಗಿದೆ’ ಎನ್ನುತ್ತಾರೆ ಶರಣಪ್ಪ ಹಿರೇಡೋಣಿ, ಹನಮಂತಪ್ಪ ಹಿರೇಡೋಣಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.