ADVERTISEMENT

ಶಿಕ್ಷಕರ ಕೊರತೆ: ಮಕ್ಕಳಿಂದ ಪ್ರತಿಭಟನೆ

ರಣತೂರ, ಬಾಲೆಹೊಸೂರಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 12:22 IST
Last Updated 6 ಜೂನ್ 2018, 12:22 IST

ಲಕ್ಷ್ಮೇಶ್ವರ: ಸಮೀಪದ ಬಾಲೆಹೊಸೂರು ಗ್ರಾಮದ ಗುರು ದಿಂಗಾಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶಿಕ್ಷಕರ ಕೊರತೆ ಉಂಟಾಗಿದ್ದು ಇದರಿಂದ ನಮ್ಮ ಅಭ್ಯಾಸಕ್ಕೆ ತೀವ್ರ ತೊಂದರೆ ಆಗಿದೆ. ಕಾರಣ ಅಗತ್ಯ ಇರುವಷ್ಟು ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ವಿದ್ಯಾರ್ಥಿಗಳು ಶಾಲೆ ಎದುರು ಪ್ರತಿಭಟನೆ ನಡೆಸಿದರು.

ಈ ವರ್ಷ 220ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಹಿಂದಿ ಶಿಕ್ಷಕರು ಇಲ್ಲ. ಹೀಗಾಗಿ 2018ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 85 ಮಕ್ಕಳಲ್ಲಿ ಕೇವಲ 25 ಮಕ್ಕಳು ಪಾಸಾಗಿದ್ದಾರೆ. ‘2014–15ನೇ ಸಾಲಿನಲ್ಲಿ ನಮ್ಮೂರಿನ ಶಾಲೆಯ ಫಲಿತಾಂಶ ಉತ್ತಮವಾಗಿತ್ತು. ಆಗ ಓರ್ವ ವಿದ್ಯಾರ್ಥಿ ಶೇ 90 ಅಂಕ ಗಳಿಸಿದ್ದ. ಆದರೆ 3–4 ವರ್ಷಗಳಿಂದ ಶಿಕ್ಷಕರ ಕೊರತೆ ಆಗಿದೆ. ಅಲ್ಲದೆ, ಗದಗದಿಂದ ಬರುವ ಶಿಕ್ಷಕರೊಬ್ಬರು ಸರಿಯಾಗಿ ಕರ್ತವ್ಯಕ್ಕೆ ಬರುವುದಿಲ್ಲ. ಅವರನ್ನು ಈ ಶಾಲೆಯಿಂದ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ರಾಜು ಬೆಂಚಳ್ಳಿ, ಉಪಾಧ್ಯಕ್ಷ ವಿನಾಯಕ ಶಿರೋಳ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಮಿಳ್ಳಿ, ಆಕ್ರೋಶ ವ್ಯಕ್ತಪಡಿಸಿದರು.

‘ವಿಷಯವಾರು ಖಾಯಂ ಆಗಿ ಶಿಕ್ಷಕರನ್ನು ನೇಮಿಸಬೇಕು. 2017–18ನೇ ಸಾಲಿನಲ್ಲಿ ಶಿಕ್ಷಕರ ಕೊರತೆಯಿಂದ ಶೇ 60ರಷ್ಟು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಕಾರಣ ಆದಷ್ಟು ಬೇಗ ಶಿಕ್ಷಕರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ’ ಎಂದು ಮಂಜುನಾಥ ಸೀತಮ್ಮನವರ, ಗ್ರಾಮ ಪಂಚಾಯ್ತಿ ಸದಸ್ಯ ಪರಸಪ್ಪ ಒಂಟಿ, ನಾಗರಾಜ ಅಣ್ಣಿಗೇರಿ, ಮಾರುತಿ ಕೊಳಲ ಎಚ್ಚರಿಸಿದರು.

ADVERTISEMENT

‘ನಮ್ಮ ಸಾಲ್ಯಾಗ ಶೌಚಾಲಯ ಇಲ್ರೀ. ಹಿಂಗಾಗಿ ವಿದ್ಯಾರ್ಥಿನಿಯರಿಗೆ ಭಾಳ ತೊಂದ್ರೀ ಆಗೇತಿ’ ಎಂದು ವಿದ್ಯಾರ್ಥಿನಿ ಗಂಗಮ್ಮ ಹೊಸೂರು ಮನವಿ ಮಾಡಿದರೆ ‘ಕಂಪ್ಯೂಟರ್‌ ಇದ್ರೂ ಒಂದು ದಿನಾ ಕಲಿಸಿಲ್ರೀ’ ಎಂದು ವಿದ್ಯಾರ್ಥಿ ಬಸವರಾಜ ಅಳಲು ತೋಡಿಕೊಂಡರು.

ಅಧಿಕಾರಿ ತರಾಟೆಗೆ: ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಭೇಟಿ ನೀಡಿದ ನಿಯೋಜಿತ ಮುಖ್ಯಶಿಕ್ಷಕ ಹಾಗೂ ಶಿಕ್ಷಣ ಸಮನ್ವಯಾಧಿಕಾರಿ ಆಯ್‌.ಸಿ.ಮಡಿವಾಳರ ಶಾಲೆಗೆ ಬರುತ್ತಿದ್ದಂತೆ ನೆರೆದಿದ್ದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು.

‘ನೀವು ಶಿಕ್ಷಕರಾಗಿ ಕೆಲಸ ಮಾಡಿರಿ. ಇಲ್ಲವೆ ಬೇರೆಯವರನ್ನು ಮುಖ್ಯಶಿಕ್ಷರನ್ನಾಗಿ ಕಳುಹಿಸಿ ಕೊಡಿ’ ಎಂದು ಪಟ್ಟು ಹಿಡಿದರು. ಆಗ ಮಡಿವಾಳರ ‘ಒಂದು ವಾರದಲ್ಲಿ ಕೊರತೆ ಇರುವ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ಶೇಖರ ಒಂಟಿ, ದ್ಯಾವನಗೌಡ ಅತ್ತಿಗೇರಿ, ಎಸ್‌.ಎಚ್‌. ಮುದಿಯಮ್ಮನವರ, ನಾಗಪ್ಪ ಬೆಳಗಟ್ಟಿ ಪಿ.ಎಲ್‌. ಉದ್ದಣ್ಣವರ, ಡಿ.ಎನ್‌. ಗೂಳಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.