ADVERTISEMENT

‘ಉನ್ನತ ಶಿಕ್ಷಣದೊಂದಿಗೆ ನೈತಿಕತೆ ಬೋಧಿಸಿ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:26 IST
Last Updated 7 ಡಿಸೆಂಬರ್ 2013, 8:26 IST

ಲಕ್ಷ್ಮೇಶ್ವರ: ‘ಇಂದಿನ ಸ್ಪರ್ಧಾತ್ಮಕ ಯುಗ­ದಲ್ಲಿ ತಾಂತ್ರಿಕ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಅದರೊಂದಿಗೆ ಯುವ ಜನತೆ­ಯಲ್ಲಿ ನೈತಿಕತೆ ಹೊಣೆಗಾರಿಕೆ ಬೆಳೆಸುವ ಶಿಕ್ಷಣವನ್ನು ಬೋಧಿಸಬೇಕು’ ಎಂದು ಮುಂಬೈನ ರಾಮಕೃಷ್ಣ ಮಿಷನ್‌ನ ಸರ್ವಲೋಕಾನಂದ ಸ್ವಾಮೀಜಿ ಹೇಳಿದರು.

ಅಗಡಿ ತಾಂತ್ರಿಕ ಮತ್ತು ಎಂಜಿನಿ­ಯರಿಂಗ್‌ ಮಹಾವಿದ್ಯಾಲ­ಯದಲ್ಲಿ ಶುಕ್ರವಾರ ಜರುಗಿದ 10ನೇ ವಾರ್ಷಿ­ಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಆಧ್ಯಾತ್ಮಿಕ ತಳಹದಿಯ ಮೇಲೆ ನಿರ್ಮಾಣವಾಗಿರುವ ಭಾರತಕ್ಕೆ ಜಗತ್ತಿನ ಯಾವ ರಾಷ್ಟ್ರವೂ ಸರಿ ಸಮಾನ ಆಗ­ಲಾರದು. ಇಂದಿನ ಯುವ ಜನತೆ ಈ ಸತ್ಯವನ್ನು ಸದಾ ನೆನಪಿನಲ್ಲಿ ಇಟ್ಟು­ಕೊಂಡು ತಾಯಿ ನಾಡಿನ ಋಣ ತೀರಿಸಲು ನಿಷ್ಠೆಯಿಂದ ದೇಶ ಸೇವೆ ಮಾಡಲು ಮುಂದಾಗಬೇಕು. ಗ್ರಾಮೀಣ ಪ್ರದೇಶವಾಗಿರುವ ಲಕ್ಷ್ಮೇಶ್ವರ­ದಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಿರುವ ಅಗಡಿ ಕುಟುಂಬದ ಸಾಧನೆ ನಿಜಕ್ಕೂ ಇತರರಿಗೆ ಮಾದರಿ ಆಗಿದೆ’ ಎಂದರು.

ಮುಂಬೈನ ಡಿಸಿಡಬ್ಲು ಸಾಫ್ಟ್‌ವೇರ್‌ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇ­ಶಕ ಮುದಿತ್‌ ಜೈನ್‌ ಮಾತ­ನಾಡಿ,  ‘ಮನುಷ್ಯನ ಬದುಕು ಸುಖದ ದಾರಿ ಅಲ್ಲ. ನಿರಂತರ ದುಡಿಮೆ ಹಾಗೂ  ಪರಿ­ಶ್ರಮ ಪಡುವವರಿಗೆ ಮಾತ್ರ ಈ ಜೀವನ ಸುಖ ನೀಡಬಲ್ಲದು. ಕೇವಲ ತಾಂತ್ರಿಕ ಶಿಕ್ಷಣ ಪಡೆಯುವುದೊಂದೇ ವಿದ್ಯಾರ್ಥಿ­ಗಳ ಗುರಿಯಾಗಿರದೆ ಅದರೊಂದಿಗೆ ಜನ ಸೇವೆ ಮಾಡುವ ಗುಣವನ್ನು ಬೆಳೆಸಿ­ಕೊಳ್ಳಬೇಕು ಎಂದರು. ಅಗಡಿ ಕಾಲೇಜಿ­ನಲ್ಲಿ ವಿದ್ಯೆ ಕಲಿತ ಮಕ್ಕಳಿಗೆ ನಮ್ಮ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಮಾಡಿಕೊಡಲಾಗುವುದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಹರ್ಷವರ್ಧನ ಅಗಡಿ ಮಾತನಾಡಿದರು. ಸಂಸ್ಥೆ ನಿರ್ದೇಶಕ ಡಾ.ಅರುಣ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಮಲಮ್ಮ ಅಗಡಿ, ಗೀತಾ ಅಗಡಿ, ಸೇರಿದಂತೆ ಮತ್ತಿತರರು ಹಾಜರಿದ್ದರು. ಡಾ.ಬಿ.ಎಂ. ಅಗಡಿ ಸ್ವಾಗತಿಸಿದರು.  ಪ್ರಾಚಾರ್ಯ ಡಾ.ಅಶೋಕ ಛಾಪ­ಗಾಂವ್‌ ವಾರ್ಷಿಕ ವರದಿ ಮಂಡಿಸಿದರು. ಅನುಶ್ರೀ ಕಿಣಿ ಹಾಗೂ ಭಾಗ್ಯಶ್ರೀ ಮಠದ  ನಿರೂಪಿಸಿದರು. ಪ್ರೊ.ಪ್ರಭಾಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.