ADVERTISEMENT

ಅತ್ಯಾಚಾರಿಗಳಿಗೆ 20 ವರ್ಷ ಜೈಲು

ಪೋಕ್ಸೊ ಪ್ರಕರಣ: ಸಂತ್ರಸ್ತೆಗೆ ₹5 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 4:58 IST
Last Updated 23 ಸೆಪ್ಟೆಂಬರ್ 2022, 4:58 IST

ಗದಗ: ಮಹಿಳೆಯೊಬ್ಬರು ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆತಂದು ಅಕ್ರಮ ಬಂಧನದಲ್ಲಿಟ್ಟು, ಆಕೆಯ ಇಬ್ಬರು ಮಕ್ಕಳು ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 20 ವರ್ಷಗಳ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ನರಗುಂದ ಪಟ್ಟಣದ ಮೋದಿನಸಾಬ ತೆಗ್ಗಿನಮನಿ, ಮುಕ್ತುಂಸಾಬ ತೆಗ್ಗಿನಮನಿ ಶಿಕ್ಷೆಗೆ ಒಳಗಾದದವರು. ಸಂತ್ರಸ್ತ ಬಾಲಕಿಯ ತಂದೆ ಹಾಗೂ ಮಲತಾಯಿ ಬಾಲಕಿಯನ್ನು ಧಾರವಾಡದಲ್ಲಿ ಕೆಲಸಕ್ಕಿಟ್ಟು, ಮಂಗಳೂರಿಗೆ ದುಡಿಯಲು ಹೋಗಿದ್ದರು. ಬಳಿಕ, ಬಾಲಕಿ ಧಾರವಾಡದಿಂದ ಊರಿಗೆ ವಾಪಸಾಗಿ ಮನೆಯಲ್ಲಿ ಒಬ್ಬಳೇ ಉಳಿದಿದ್ದಳು.

ಈ ಸಂದರ್ಭದಲ್ಲಿ ಆರೋಪಿಗಳ ತಾಯಿ ಸಂತ್ರಸ್ತ ಬಾಲಕಿಗೆ ‘ನೀನು ನನ್ನ ಸಂಬಂಧಿ’ ಎಂದು ನಂಬಿಸಿ ಮನೆಗೆ ಕರೆತಂದಿದ್ದಳು. ಈ ವೇಳೆ ಆಕೆ ಇಬ್ಬರು ಮಕ್ಕಳೂ ನಿತ್ಯ ಅತ್ಯಾಚಾರ ಎಸಗಿ, ಗರ್ಭವತಿಯನ್ನಾಗಿಸಿದ ಆರೋಪದ ಮೇಲೆ ನರಗುಂದ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಸಂತ್ರಸ್ತ ಬಾಲಕಿ 2016ರ ಮೇ ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ರಮಾಕಾಂತ ಎಚ್‌.ವೈ. ತನಿಖೆ ನಡೆಸಿ 2016ರ ಆಗಸ್ಟ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಕಾರಣ ನ್ಯಾಯಾಲಯ ಇಬ್ಬರಿಗೂ 20 ವರ್ಷ ಜೈಲು ಮತ್ತು ದಂಡ ವಿಧಿಸಿದೆ.

ಸಂತ್ರಸ್ತ ಬಾಲಕಿಗೆ ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ ಪುನರ್ವಸತಿಗಾಗಿ ₹5 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಅಮರೇಶ ಹಿರೇಮಠ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.