ADVERTISEMENT

ರಸ್ತೆ, ಚರಂಡಿ ನಿರ್ಮಿಸಿ ಪುಣ್ಯ ಕಟ್ಟಿಕೊಳ್ರಿ

ಸರಸ್ವತಿ ನಗರದ ನಿವಾಸಿಗಳ ಗೋಳು: ಹಾವುಗಳ ಆವಾಸ ತಾಣವಾದ ಚರಂಡಿ

ಬಸವರಾಜ ಹಲಕುರ್ಕಿ
Published 24 ಆಗಸ್ಟ್ 2021, 16:14 IST
Last Updated 24 ಆಗಸ್ಟ್ 2021, 16:14 IST
ನರಗುಂದದ ಸರಸ್ವತಿ ನಗರದ ರಸ್ತೆಗಳು ಕೆಸರಿನ ಹೊಂಡದಂತಾಗಿವೆ.
ನರಗುಂದದ ಸರಸ್ವತಿ ನಗರದ ರಸ್ತೆಗಳು ಕೆಸರಿನ ಹೊಂಡದಂತಾಗಿವೆ.   

ನರಗುಂದ: ‘ಇಪ್ಪತ್ತು ವರ್ಷಗಳಿಂದ ವಾಸ ಮಾಡಾಕತ್ತೇವಿ, ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ನಮ್ಮ ಗೋಳು ಕಳೋರಿಲ್ಲ. ಈಗಲಾದರೂ ರಸ್ತೆ, ಚರಂಡಿ ನಿರ್ಮಿಸಿ ಪುಣ್ಯ ಕಟ್ಟಿಕೊಳ್ರಿ’ ಎಂದು ಪಟ್ಟಣದ 22ನೇ ವಾರ್ಡ್‌ನ ಸರಸ್ವತಿ ನಗರದ ನಿವಾಸಿಗಳ ಗೋಳು ಕೇಳಿದರೆ ಬಡಾವಣೆಯ ದುಃಸ್ಥಿತಿ ಕಣ್ಣಮುಂದೆ ಹಾದುಹೋಗುತ್ತದೆ.

ಸರಸ್ವತಿ ನಗರ, ಅಧ್ಯಾಪಕ ನಗರ, ಅಂಬೇಡ್ಕರ್ ನಗರ, ಲಕ್ಷ್ಮೀ ನಗರಗಳು22ನೇ ವಾರ್ಡ್‌ನ ವ್ಯಾಪ್ತಿಗೆ ಒಳಪಡುತ್ತವೆ. ಸುಮಾರು 800 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಅಧ್ಯಾಪಕ ನಗರ, ಸರಸ್ವತಿ ನಗರಗಳಲ್ಲಿ ರಸ್ತೆ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಮಳೆ ಬಂತೆಂದರೆ ಪಾದ ಎಲ್ಲಿ ಊರಬೇಕು, ಯಾವ ಕಡೆ ಚಲಿಸಬೇಕು ಎಂಬ ಆಲೋಚನೆಗೆ ಜಾರುವ ಇಲ್ಲಿಯ ನಾಗರಿಕರು ನಿತ್ಯವೂ ಪುರಸಭೆ ಅಧಿಕಾರಿಗಳನ್ನು ಶಪಿಸುತ್ತಾರೆ.

ಜತೆಗೆ ಇಲ್ಲಿ ಸಮರ್ಪಕ ಚರಂಡಿಗಳಿಲ್ಲ. ಮಳೆ ನೀರು ಹರಿಯಲು ಸರಿಯಾದ ಮಾರ್ಗಗಳಿಲ್ಲ. ಇದರಿಂದಾಗಿ ಇರುವ ರಸ್ತೆಗಳೆಲ್ಲವೂ ಕೆಸರಿನ ಹೊಂಡದಂತಾಗುತ್ತವೆ. ಸರಸ್ವತಿ ನಗರದಲ್ಲಿ ಉದ್ಯಾನಕ್ಕೆ ಜಾಗ ಮೀಸಲಿಟ್ಟಿದ್ದರೂ ಅದನ್ನು ಅಭಿವೃದ್ಧಿ ಪಡಿಸುವಲ್ಲಿ ಪುರಸಭೆ ಮುಂದಾಗುತ್ತಿಲ್ಲ ಎಂದು ಇಲ್ಲಿಯ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ಈಚೆಗಷ್ಟೇ ಬಡವಾಣೆಯ ಕೆಲವು ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರೂ ಒಳ ರಸ್ತೆಗಳಿಲ್ಲ. ಇದರಿಂದಾಗಿ ಎಂದಿನಂತೆ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

ಅಧ್ಯಾಪಕ ನಗರದ ಕೊನೆಗೆ ಬೃಹತ್ ಚರಂಡಿ ಇದೆ. ಎಲ್ಲ ಬಡಾವಣೆಗಳ ಕೊಳಚೆ ನೀರು ಈ ಚರಂಡಿ ಮೂಲಕ ಹರಿದು ಹೋಗುತ್ತದೆ. ಆದರೆ ಈ ಚರಂಡಿಯಲ್ಲಿ ಹಾವುಗಳದ್ದೇ ಕಾರಬಾರಿದೆ. ಇದರಿಂದ ಇಲ್ಲಿ ಜನರು ಭಯದಲ್ಲಿ ವಾಸಿಸುವಂತಾಗಿದೆ. ಸಂಜೆಯಾದರೆ ಸಾಕು ಹಾವುಗಳು ಚರಂಡಿ ಬಿಟ್ಟು ರಸ್ತೆ ಮೇಲೆ ವಿಹರಿಸುತ್ತವೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಈ ಚರಂಡಿ ಸ್ವಚ್ಛಗೊಳಿಸಿ, ಮೇಲೆ ಕಾಂಕ್ರಿಟ್ ಹಾಕಿಸಿ ಹಾವುಗಳ ಭಯದಿಂದ ಮುಕ್ತಗೊಳಿಸಬೇಕು ಎಂದು ಅಧ್ಯಾಪಕ ನಗರದ ಜೆ.ಕೆ.ನರಗುಂದ ಹಾಗೂ ನಿವಾಸಿಗಳು ಆಗ್ರಹಿಸಿದ್ದಾರೆ.

ಖಾಲಿ ನಿವೇಶನಗಳು ಕಂಟಿಗಳ ತಾಣ

ಸರಸ್ವತಿ ನಗರ, ಅಧ್ಯಾಪಕ ನಗರದಲ್ಲಿ ಖಾಲಿ ನಿವೇಶನಗಳು ಹೆಚ್ಚಿದ್ದು, ಅವು ಕಂಟಿಗಳ ತಾಣವಾಗಿ, ಹುಳು ಹುಪ್ಪಡಿಗಳಿಗೆ ನೆಲೆಯಾಗಿವೆ. ಇದರಿಂದ ಸುತ್ತಲಿನ ಮನೆಗಳ ನಿವಾಸಿಗಳು ಭಯದಲ್ಲಿ ಬದುಕುವಂತಾಗಿದೆ. ಪುರಸಭೆ ಅಧಿಕಾರಿಗಳು ಕಂಟಿಗಳನ್ನು ತೆರವುಗೊಳಿಸಿ, ಪರಿಸರದ ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

25 ವರ್ಷದಿಂದ ಇಲ್ಲಿ ವಾಸ ಅದೇವಿ, ರಸ್ತೆ, ಚರಂಡಿ ನಿರ್ಮಿಸಿ ಎಂದು ಹಿಂದಿನ, ಇಂದಿನ ಸದಸ್ಯರಿಗೆ, ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಕೋಂತ ಅದೇವಿ. ಪ್ರಯೋಜನವಾಗಿಲ್ಲ.
ಲಲಿತಾ ದೊಡಮನಿ, ಸರಸ್ವತಿ ನಗರದ ನಿವಾಸಿ

ಈ ಹಿಂದೆ ಇಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ನಾನು ಸದಸ್ಯೆಯಾದ ಮೇಲೆ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಆದ್ಯತೆ ಮೇರೆಗೆ ರಸ್ತೆ, ಚರಂಡಿಗಳನ್ನು ನಿರ್ಮಿಸಿ ಸಮಸ್ಯೆ ಬಗೆಹರಿಸಲಾಗುವುದು
ರೇಣುಕಾ ಕಲ್ಲಾರಿ, 22ನೇ ವಾರ್ಡ್‌ ಸದಸ್ಯೆ, ನರಗುಂದ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.