ADVERTISEMENT

‘ಅಲ್ಲಮಪ್ರಭು’ ಪುಸ್ತಕ ಲೋಕಾರ್ಪಣೆ: ವಚನಗಳ ಒಳಹೊಕ್ಕರೆ ಬೆಳಕಿನ ಪುಂಜ –ಚಂದ್ರಶೇಖರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 1:47 IST
Last Updated 26 ಡಿಸೆಂಬರ್ 2021, 1:47 IST
ಗದುಗಿನ ಪಂಚಾಕ್ಷರಿ ನಗರದಲ್ಲಿರುವ ಶ್ರೀ ಸಿದ್ಧಲಿಂಗ ಅರಿವಿನ ಮನೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶೇಖಣ್ಣ ಕವಳಿಕಾಯಿ ಪುಸ್ತಕ ಓದುವ ಮೂಲಕ ‘ಅಲ್ಲಮಪ್ರಭು’ ಪುಸ್ತಕದ ದ್ವಿತೀಯ ಮುದ್ರಣವನ್ನು ಲೋಕಾರ್ಪಣೆಗೊಳಿಸಿದರು
ಗದುಗಿನ ಪಂಚಾಕ್ಷರಿ ನಗರದಲ್ಲಿರುವ ಶ್ರೀ ಸಿದ್ಧಲಿಂಗ ಅರಿವಿನ ಮನೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶೇಖಣ್ಣ ಕವಳಿಕಾಯಿ ಪುಸ್ತಕ ಓದುವ ಮೂಲಕ ‘ಅಲ್ಲಮಪ್ರಭು’ ಪುಸ್ತಕದ ದ್ವಿತೀಯ ಮುದ್ರಣವನ್ನು ಲೋಕಾರ್ಪಣೆಗೊಳಿಸಿದರು   

ಗದಗ: ‘ಅಲ್ಲಮಪ್ರಭು ನಿತ್ಯ ಬೆಡಗು; ನಿತ್ಯ ಬೆರಗು. ಅವರ ವಚನಗಳು ಕಬ್ಬಿಣದ ಕಡಲೆ ಇದ್ದಂತೆ. ಅರ್ಥಮಾಡಿಕೊಳ್ಳಬೇಕಾದರೆ ಸ್ವಲ್ಪ ಕಷ್ಟ. ಆದರೆ, ಒಳಹೊಕ್ಕರೆ ಬೆಳಕಿನ ಪುಂಜ. ಸಕ್ಕರೆಯನ್ನು ವರ್ಣಿಸಬಹುದು. ಆದರೆ, ಸಿಹಿಯನ್ನು ವರ್ಣನೆ ಮಾಡಲು ಸಾಧ್ಯವಿಲ್ಲ. ಅಲ್ಲಮಪ್ರಭು ಅಧ್ಯಾತ್ಮದ ವಿಚಾರಗಳನ್ನು ಆ ನಿಟ್ಟಿನಲ್ಲೇ ಹೇಳಿದ್ದಾರೆ’ ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.

ಪಂಚಾಕ್ಷರಿ ನಗರದಲ್ಲಿರುವ ಶ್ರೀ ಸಿದ್ಧಲಿಂಗ ಅರಿವಿನ ಮನೆಯಲ್ಲಿ ಶನಿವಾರ ನಡೆದ ‘ಅಲ್ಲಮಪ್ರಭು’ ದ್ವಿತೀಯ ಮುದ್ರಣದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಜಗತ್ತಿನ ಎಲ್ಲ ತಾತ್ವಿಕರನ್ನು ಒಂದೆಡೆ ಸೇರಿಸಿ ಸಭೆ ನಡೆಸಿದರೆ ಅದರ ಅಧ್ಯಕ್ಷ ಸ್ಥಾನ ವಹಿಸುವ ತಾಕತ್ತು ಇರುವುದು ಅಲ್ಲಮಪ್ರಭುವಿಗೆ ಮಾತ್ರ. ಇಂತಹ ಸಾಧಕರ ಬಗ್ಗೆ ಒಂದು ಪುಸ್ತಕ ಬರೆದುಕೊಡುವಂತೆ ಗೆಳೆಯ ಶಾಂತವೀರ ಕೋರಿಕೊಂಡಾಗ ಅಳುಕಿನಿಂದಲೇ ಒಪ್ಪಿದೆ. ‘ಅಲ್ಲಮಪ್ರಭು’ ಪುಸ್ತಕ ರಚನೆ ನನ್ನಿಂದ ಆಗುತ್ತದೆ ಎಂಬ ಕಲ್ಪನೆ ಕೂಡ ಇರಲಿಲ್ಲ. ನಾನು ಪ್ರಯತ್ನಿಸಿದೆ. ಅಲ್ಲಮಪ್ರಭು ತಾನೇ ಕೂರಿಸಿ ಬರೆಯಿಸಿಬಿಟ್ಟರು’ ಎಂದು ಹೇಳಿದರು.

ADVERTISEMENT

‘ಓದುವ ಸಂಸ್ಕಾರ ಬೆಳೆಸುವುದು, ಓದುವ ಸಂಸ್ಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪುಸ್ತಕವನ್ನು ಓದುವ ಮೂಲಕವೇ ಲೋಕಾರ್ಪಣೆಗೊಳಿಸಲಾಗುತ್ತಿದೆ. ಇದು ಕೂಡ ಈ ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದು’ ಎಂದು ಅವರು ಹೇಳಿದರು.

ಶೇಖಣ್ಣ ಕವಳಿಕಾಯಿ ಅವರು ‘ಅಲ್ಲಮಪ್ರಭು’ ಪುಸ್ತಕವನ್ನು ಓದುವ ಮೂಲಕ ದ್ವಿತೀಯ ಮುದ್ರಣವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಆಸಕ್ತ ಓದುಗರು, ಸಾಹಿತಿಗಳು ಪುಸ್ತಕ ಓದಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೊಸತನದ ಮೆರುಗು ನೀಡಿದರು.

ಕ್ಷಮಾ ವಸ್ತ್ರದ, ಸಾಹಿತಿ ಬಸವರಾಜ ಸೂಳಿಭಾವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.