ADVERTISEMENT

ಕಾಲಮಿತಿಯೊಳಗೆ ನೋಂದಣಿಗೆ ಕ್ರಮವಹಿಸಿ

ಜಿಲ್ಲಾ ಮಟ್ಟದ ಜನನ, ಮರಣ ಸಮನ್ವಯ ಸಮಿತಿ ಸಭೆ– ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 4:51 IST
Last Updated 23 ಸೆಪ್ಟೆಂಬರ್ 2022, 4:51 IST
ಗದಗ ಜಿಲ್ಲಾ ಮಟ್ಟದ ಜನನ, ಮರಣ ಸಮನ್ವಯ ಸಮಿತಿ ಸಭೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು
ಗದಗ ಜಿಲ್ಲಾ ಮಟ್ಟದ ಜನನ, ಮರಣ ಸಮನ್ವಯ ಸಮಿತಿ ಸಭೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು   

ಗದಗ: ‘ಜನನ, ಮರಣ ನೋಂದಣಿ ಪ್ರಮಾಣಪತ್ರ ಜನರ ವೈಯಕ್ತಿಕ ಅನುಕೂಲ ಹಾಗೂ ವಿವಿಧ ಯೋಜನೆಗಳ ಲಾಭ ಪಡೆಯಲು ಪ್ರಮುಖವಾದ ದಾಖಲೆಯಾಗಿದೆ. ಆದ್ದರಿಂದ ಎಲ್ಲ ನೋಂದಣಾಧಿಕಾರಿಗಳು ಜನನ-ಮರಣ ನೋಂದಣಿಯನ್ನು ಕಾಲಮಿತಿಯೊಳಗೆ ಸಂಬಂಧಿಸಿದ ತಂತ್ರಾಂಶದಲ್ಲಿ ದಾಖಲಿಸಲು ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜನನ, ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಣಿ ಕಾರ್ಯದಲ್ಲಿ ನ್ಯೂನತೆಗಳು ಕಂಡುಬಂದರೆ ಕೂಡಲೇ ಅವುಗಳನ್ನು ಸರಿಪಡಿಸಿ, ಕಾಲಮಿತಿಯೊಳಗೆ ನೋಂದಣಿ
ಯಾಗುವಂತೆ ನಿಗಾವಹಿಸಬೇಕು. ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರರು ಈ ಕುರಿತು ಸಭೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಿದರು.

ADVERTISEMENT

ಜನನ-ಮರಣ ನೋಂದಣಿ ಪ್ರಮಾಣಪತ್ರ ವಿತರಣೆಯಿಂದ ಸಂಗ್ರಹವಾಗುವ ಶುಲ್ಕವನ್ನು ನಿಗದಿತ ಸಮಯದಲ್ಲಿ ಸರ್ಕಾರಕ್ಕೆ ಜಮೆ ಮಾಡಬೇಕು. ಜತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೊರಡಿಸಲಾಗುವ ಆದೇಶಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದರು.

‘ಜನನ-ಮರಣ ಪ್ರಮಾಣಪತ್ರಗಳು ಅತಿ ಮುಖ್ಯ ದಾಖಲೆಗಳಾಗಿದ್ದು ಇವುಗಳ ಕುರಿತು ಮಾಹಿತಿಯನ್ನು ನೋಂದಣಿ ಮಾಡುವ ಮುನ್ನ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಲು ನಿಗಾವಹಿಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಎ.ಕಂಬಾಳಿಮಠ ಮಾತನಾಡಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 365, ಪಟ್ಟಣ ಪ್ರದೇಶಗಳಲ್ಲಿ 19 ಸೇರಿದಂತೆ ಒಟ್ಟು 384 ನೋಂದಣಿ, ಉಪನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನವರಿ 2022ರಿಂದ ಇಲ್ಲಿಯವರೆಗೆ ಕಾಲಮಿತಿಯೊಳಗೆ ಶೇ 99.44ರಷ್ಟು ಜನನ ನೋಂದಣಿ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಎಡಿಸಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಸೇರಿದಂತೆ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.