ಗದಗ: ‘ಅಪಾಯಕಾರಿ ನ್ಯೂಮೋನಿಯಾ ಬ್ಯಾಕ್ಟೀರಿಯಾದಿಂದ ಪುಟ್ಟ ಮಕ್ಕಳನ್ನು ರಕ್ಷಿಸಲು ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆಯನ್ನು (ಪಿಸಿವಿ) ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್. ಪೋಷಕರಲ್ಲಿ ಮನವಿ ಮಾಡಿದರು.
ಜಿಲ್ಲೆಯಾದ್ಯಂತ ಇರುವ ಒಂದು ವರ್ಷದೊಳಗಿನ ಮಕ್ಕಳಿಗೆ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಭಾರತ, ಪಾಕಿಸ್ತಾನ, ಚೀನಾ, ನೈಜೀರಿಯಾ, ಇಥಿಯೋಪಿಯಾ ಸೇರಿದಂತೆ ಹಲವು ದೇಶಗಳಲ್ಲಿ ಮಕ್ಕಳು ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ಪ್ರತಿ 1 ಸಾವಿರಕ್ಕೆ 71 ಮಕ್ಕಳು ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಎಂಟು ಲಕ್ಷಕ್ಕೂ ಅಧಿಕ ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದು, ಅದರಲ್ಲಿ ಶೇ 15ರಷ್ಟು ಮಕ್ಕಳು ಮೃತಪಡುತ್ತಿವೆ’ ಎಂದು ಅವರು ಹೇಳಿದರು.
‘ನ್ಯೂಮೋನಿಯಾದಿಂದ ಸಂಭವಿಸುವ ಸಾವು ತಡೆಗಟ್ಟುವ ಸಲುವಾಗಿಯೇ 2019ರಲ್ಲಿ ‘ಎಲ್ಲರಿಗೂ ಆರೋಗ್ಯಪೂರ್ಣ ಶ್ವಾಸಕೋಶ’ (ಹೆಲ್ತಿ ಲಂಗ್ಸ್ ಫಾರ್ ಆಲ್) ಕಾರ್ಯಕ್ರಮ ಘೋಷಿಸಲಾಗಿದ್ದು, ಈಗ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ನ್ಯೂಮೋನಿಯಾದಿಂದ ಕಾಪಾಡಬೇಕು’ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜಗದೀಶ ನುಚ್ಚಿನ ಮಾತನಾಡಿ, ‘ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆಯ ಮೊದಲ ಡೋಸ್ ಅನ್ನು ಒಂದೂವರೆ ತಿಂಗಳು, ಎರಡನೇ ಡೋಸನ್ನು ಮೂರೂವರೆ ತಿಂಗಳು, ಮೂರನೇ ಡೋಸನ್ನು 9 ತಿಂಗಳಿಗೆ ನೀಡಲಾಗುವುದು. ಈ ಲಸಿಕೆ ಅಭಿಯಾನ ರಾಜ್ಯದೆಲ್ಲೆಡೆ ನ.10ರಿಂದ ಪ್ರಾರಂಭಗೊಂಡಿದೆ. ಗದಗ ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ 1,050 ಮಕ್ಕಳು ಜನಿಸುತ್ತವೆ. ಎಲ್ಲ ನವಜಾತ ಶಿಶುಗಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಬೇಕು’ ಎಂದು ಅವರು ತಾಯಂದಿರಿಗೆ ಜಾಗೃತಿ ಮೂಡಿಸಿದರು.
‘ಪಿಸಿವಿ ಲಸಿಕೆಯ ಡೋಸ್ ಅನ್ನು ಮಧ್ಯದಲ್ಲಿ ಕೊಡಲು ಬರುವುದಿಲ್ಲ. ಅಂದರೆ, ಈಗ ಮೂರೂವರೆ ತಿಂಗಳಿರುವ ಮಗುವಿಗೆ ಈ ಲಸಿಕೆ ಹಾಕಲು ಸಾಧ್ಯವಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಪಿಸಿವಿ ಲಸಿಕೆಯ ಮೊದಲ ಡೋಸ್ ಅನ್ನು ಒಂದೂವರೆ ತಿಂಗಳಿಗೆ ನೀಡಲಾಗುವುದು. ಜಿಲ್ಲೆಯಲ್ಲಿ ಈಗ ಒಂದೂವರೆ ತಿಂಗಳಿನ 1,400 ಮಕ್ಕಳಿದ್ದು, ಅವರಿಗೆ ಲಸಿಕೆ ಹಾಕಿಸಲು ಕ್ರಮವಹಿಸಲಾಗುವುದು’ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಲಸಿಕೆ ಹಾಕುವುದರಿಂದ ನ್ಯೂಮೋಕೋಕಲ್ ನ್ಯೂಮೋನಿಯಾದಿಂದ ಮಕ್ಕಳನ್ನು ರಕ್ಷಿಸಬಹುಸು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ
ಡಾ. ಬಿ.ಎಂ. ಗೊಜನೂರ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.