ADVERTISEMENT

ದಾಖಲೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ

ಬಿ.ಶ್ರೀರಾಮುಲು ಹಾಗೂ ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 4:40 IST
Last Updated 21 ಅಕ್ಟೋಬರ್ 2020, 4:40 IST
ರೈತರ ಜಮೀನುಗಳ ಉತಾರಗಳಲ್ಲಿ ನಮೂದಾಗಿರುವ ಸರ್ಕಾರಿ ದಾಖಲೆಗಳನ್ನು ತಗೆದುಹಾಕಬೇಕು ಎಂದು ಒತ್ತಾಯಿಸಿ ವೈ.ಎನ್.ಗೌಡರ ಅವರ ನೇತೃತ್ವದಲ್ಲಿ ಮುಂಡರಗಿ ರೈತರು ಶ್ರೀರಾಮುಲು ಹಾಗೂ ಶಿವಕುಮಾರ ಉದಾಸಿ ಅವರಿಗೆ ಮನವಿ ಸಲ್ಲಿಸಿದರು
ರೈತರ ಜಮೀನುಗಳ ಉತಾರಗಳಲ್ಲಿ ನಮೂದಾಗಿರುವ ಸರ್ಕಾರಿ ದಾಖಲೆಗಳನ್ನು ತಗೆದುಹಾಕಬೇಕು ಎಂದು ಒತ್ತಾಯಿಸಿ ವೈ.ಎನ್.ಗೌಡರ ಅವರ ನೇತೃತ್ವದಲ್ಲಿ ಮುಂಡರಗಿ ರೈತರು ಶ್ರೀರಾಮುಲು ಹಾಗೂ ಶಿವಕುಮಾರ ಉದಾಸಿ ಅವರಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ಉಪವಿಭಾಗಾಧಿಕಾರಿ ಅವರು ತಾಲ್ಲೂಕಿನ ಶೀರನಹಳ್ಳಿ ಗ್ರಾಮದ ಹಲವಾರು ರೈತರ ಸ್ವಂತ ಮಾಲೀಕತ್ವದ ಜಮೀನುಗಳ ಪಹಣಿಗಳಲ್ಲಿ (ಉತಾರ) ಅವೈಜ್ಞಾನಿಕವಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭೂಸ್ವಾಧೀನ ಜಮೀನು ಎಂದು ನಮೂದಿಸಿದ್ದು, ತಕ್ಷಣ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಅವರು ಸಚಿವ ಬಿ.ಶ್ರೀರಾಮುಲು ಹಾಗೂ ಸಂಸದ ಶಿವಕುಮಾರ ಉದಾಸಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

2015 ನೇ ಸಾಲಿನಲ್ಲಿ ಗದಗ ಉಪವಿಭಾಗಾಧಿಕಾರಿ ಅವರು ಶೀರನಹಳ್ಳಿ ಗ್ರಾಮದ ರೈತರ ಗಮನಕ್ಕೂ ಬಾರದಂತೆ ಅವೈಜ್ಞಾನಿಕವಾಗಿ ಟಿ.ಬಿ.ಡ್ಯಾಂ ಎಂದು ನಮೂದಿಸಿದ್ದಾರೆ. ಈಚೆಗೆ ಪಹಣಿ ಪಡೆದ ಹಲವಾರು ರೈತರು ತಮ್ಮ ಜಮೀನು ಭೂಸ್ವಾಧೀನಗೊಂಡಿರುವುದನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. ರೈತರಿಗೆ ಯಾವುದೇ ಸೂಚನೆ ಮತ್ತು ನೋಟಿಸ್ ನೀಡದೆ ಪಹಣಿಯಲ್ಲಿ ಟಿ.ಬಿ.ಡ್ಯಾಂ ಹೆಸರನ್ನು ನೊಂದಾಯಿಸಲಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಯೋಜನಾ ಮಂಡಳಿಗೂ ಸಹಿತ ಯಾವುದೇ ಸೂಚನೆ ನೀಡದೆ ಖಾತೆಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗಿದೆ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಗೌಡರ ಆರೋಪಿಸಿದರು.

ಜಮೀನಿನ ಪಹಣಿಗಳಲ್ಲಿ ಸರ್ಕಾರದ ಹೆಸರು ನಮೂದಾಗಿರುವುದರಿಂದ ರೈತರಿಗೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಮೊದಲಾದವುಗಳು ದೊರೆಯುತ್ತಿಲ್ಲ. ರೈತರು ತಮ್ಮ ಜಮೀನನ್ನು ಪರಬಾರೆ ಮಾಡಲು ಅಥವಾ ಮಾರಾಟ ಮಾಡಲು ಬಾರದಂತಾಗಿದೆ ಎಂದು ದೂರಿದರು.

ADVERTISEMENT

ರೈತರ ಮನವಿ ಸ್ವೀಕರಿಸಿದ ಸಂಸದ ಶಿವಕುಮಾರ ಉದಾಸಿ ಹಾಗೂ ಸಚಿವ ಬಿ.ಶ್ರೀರಾಮುಲು ಅವರು ತಕ್ಷಣ ಜಿಲ್ಲಾಧಿಕಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಉಪವಿಭಾಗಾಧಿಕಾರಿ ಮತ್ತು ಮುಂಡರಗಿ ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಬೇಕು ಮತ್ತು ಕಂದಾಯ ಅದಾಲತ್ ಏರ್ಪಡಿಸಿ ತಕ್ಷಣ ರೈತರ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಸೂಚಿಸಿದರು.

ಮುಖಂಡರಾದ ಕೆ.ವಿ.ಹಂಚಿನಾಳ, ರೈತರಾದ ನಿಂಗಜ್ಜ ಮಜ್ಜಿಗಿ, ಈರಪ್ಪ ಭಜಮ್ಮನವರ, ರಾಮಣ್ಣ ಬದಾಮಿ, ಕೋಟೆಪ್ಪ ಯತ್ನಟ್ಟಿ, ಮಲ್ಲೇಶ ಮೇಟಿ, ಹನುಮಂತ ಬುಡ್ಡಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.