ADVERTISEMENT

ಕೆ.ಬಿ.ತಳಗೇರಿ ಶ್ರೇಷ್ಠ ವಾಗ್ಮಿ: ಡಾ. ಶರಣು

ಜಿಲ್ಲಾ ಕಸಾಪದಿಂದ ನುಡಿನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:40 IST
Last Updated 22 ಸೆಪ್ಟೆಂಬರ್ 2020, 15:40 IST
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಕೆ.ಬಿ.ತಳಗೇರಿ ನುಡಿ-ನಮನ ಕಾರ್ಯಕ್ರಮ ನಡೆಯಿತು
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಕೆ.ಬಿ.ತಳಗೇರಿ ನುಡಿ-ನಮನ ಕಾರ್ಯಕ್ರಮ ನಡೆಯಿತು   

ಗದಗ: ‘ಪ್ರಾಂಶುಪಾಲರಾಗಿ, ಸಾಹಿತಿಗಳಾಗಿ, ಶಿಕ್ಷಣತಜ್ಞರಾಗಿ ಕೆ.ಬಿ.ತಳಗೇರಿ ಅವರು ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಅಗಲುವಿಕೆಯಿಂದ ಗದಗ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ’ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣು ಗೋಗೇರಿ ಹೇಳಿದರು.

ಅವರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪ್ರಾಚಾರ್ಯ ಕೆ.ಬಿ.ತಳಗೇರಿ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೆ.ಬಿ.ತಳಗೇರಿಯವರು ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದವರು. ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಾಚಾರ್ಯರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಲಕ್ಷಾಂತರ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದರು. ಮೊದಲು ವಿಜ್ಞಾನ ವಿಷಯದಲ್ಲಿ ಶಿಕ್ಷಕರಾಗಿ ನಂತರ ಕನ್ನಡ ಹಾಗೂ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿ ಶ್ರೇಷ್ಠ ವಾಗ್ಮಿಗಳಾಗಿದ್ದರು. ಎಸ್ಸೆಸ್ಸೆಲ್ಸಿ ಬೋರ್ಡ್‌ನ ಸದಸ್ಯರಾಗಿ, ಕುರಿ ಮತ್ತು ಉಣ್ಣೆ ನಿಗಮದ ನಿರ್ದೇಶಕರಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ ಮಾತನಾಡಿ, ‘ಕೆ.ಬಿ.ತಳಗೇರಿ ಅವರು ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ನಿರ್ದೇಶಕರಾಗಿ, ಸಿಂಡಿಕೇಟ್‌ ಸದಸ್ಯರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಹಲವಾರು ಮಹತ್ತರ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ನೇರ ನಡೆ-ನುಡಿಗೆ ಹೆಸರಾಗಿದ್ದ ಕೆ.ಬಿ.ತಳಗೇರಿ ಅವರ ಅಗಲುವಿಕೆ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಒಬ್ಬ ಶ್ರೇಷ್ಠ ಸಾಹಿತಿ ಹಾಗೂ ಶಿಕ್ಷಣ ತಜ್ಞರನ್ನು ಕಳೆದುಕೊಂಡಂತಾಗಿದೆ. ಅವರು ಮೂರು ಉತ್ತಮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ’ ಎಂದು ಹೇಳಿದರು.

ನುಡಿ-ನಮನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮನೋಹರ ಮೆಹರವಾಡೆ, ಎ.ಒ.ಪಾಟೀಲ, ಗೌರವ ಕಾರ್ಯದರ್ಶಿ ಅಶೋಕ ಹಾದಿ, ಸಂತೋಷ ಕುರಿ, ಆನಂದ ಕಲ್ಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.