ಗಂಗಾಧರ ಶಿರೋಳ
ಗದಗ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಇಲ್ಲಿನ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರ ಮನೆ ಹಾಗೂ ಕಚೇರಿ ಸೇರಿದಂತೆ ಏಳು ಕಡೆಗಳಲ್ಲಿ ಏಕಕಾಲಕ್ಕೆ ಶನಿವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹3.49 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.
ದಾಳಿ ಸಂದರ್ಭದಲ್ಲಿ ₹25.50 ಲಕ್ಷ ಮೌಲ್ಯದ ನಾಲ್ಕು ನಿವೇಶನಗಳು, ಎರಡು ಸ್ವಂತ ಹೆಸರಿನಲ್ಲಿ ಹಾಗೂ ಐದು ಬೇನಾಮಿ ಹೆಸರಿನಲ್ಲಿ ನಿರ್ಮಿಸಿದ ₹2.30 ಕೋಟಿ ಮೌಲ್ಯದ ಒಟ್ಟು ಏಳು ಮನೆಗಳು, 3.39 ಎಕರೆ ಕೃಷಿ ಭೂಮಿ, ₹21.50 ಲಕ್ಷ ನಗದು, ₹23.83 ಲಕ್ಷದ 307 ಗ್ರಾಂ ಚಿನ್ನಾಭರಣ, ₹3.70 ಲಕ್ಷ ಮೌಲ್ಯದ ಬೆಳ್ಳಿ, ಒಂದು ಇನ್ನೋವಾ ಕಾರು, ಎರಡು ಬೈಕ್ ಸೇರಿದಂತೆ ಒಟ್ಟು ₹3.49 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಪತ್ತೆಯಾಗಿದೆ.
ವಶಪಡಿಸಿಕೊಂಡ ಆಸ್ತಿ ಮೌಲ್ಯ ನೌಕರನ ಆದಾಯಕ್ಕಿಂತ ಶೇ 186.92ರಷ್ಟು ಅಧಿಕ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತ ಎಸ್.ಪಿ ಹನುಮಂತರಾಯ ನೇತೃತ್ವದಲ್ಲಿ ರಾಯಚೂರು, ಕೊಪ್ಪಳ, ಹೊಸಪೇಟೆಯ ಲೋಕಾಯುಕ್ತ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಗದಗ ಲೋಕಾಯುಕ್ತ ಡಿವೈಎಸ್‌ಪಿ ವಿಜಯ್ ಬಿರಾದಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.