ADVERTISEMENT

ಎಚ್‌.ಕೆ.ಪಾಟೀಲಗೆ ಗೌರವ ಡಾಕ್ಟರೇಟ್‌; ದಳವಾಯಿಗೆ ಡಿ.ಲಿಟ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:38 IST
Last Updated 9 ಏಪ್ರಿಲ್ 2021, 19:38 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ    

ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಶನಿವಾರ (ಏ.10) ನಡೆಯಲಿದ್ದು, ಗದಗ ಶಾಸಕ ಎಚ್‌.ಕೆ.ಪಾಟೀಲ ಅವರಿಗೆ ಗೌರವ ಡಾಕ್ಟರೇಟ್‌ ಹಾಗೂ ಡಾ. ಅಶೋಕ ಮಹಾದೇವ ದಳವಾಯಿ ಅವರಿಗೆ ಡಿ.ಲಿಟ್‌ ಪದವಿ ನೀಡಿ ಗೌರವಿಸಲಾಗುವುದು ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾನೂನು, ಸಮಾಜ ಸೇವೆ ಹಾಗೂ ಸಾರ್ವಜನಿಕ ನೀತಿಯಲ್ಲಿ ಎಚ್‌.ಕೆ.ಪಾಟೀಲ ಅವರ ಸೇವೆ ಗುರುತಿಸಿ ಅವರಿಗೆ ಡಾಕ್ಟರ್‌ ಆಫ್‌ ಲಾ ಹಾಗೂ ಗ್ರಾಮೀಣ ಮತ್ತು ಬುಡಕಟ್ಟು ಜನಾಂಗಗಳ ಪುನರ್‌ ನಿರ್ಮಾಣದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಡಾ. ಅಶೋಕ ಮಹಾದೇವ ದಳವಾಯಿ ಅವರಿಗೆ ಡಿ.ಲಿಟ್‌ ಪದವಿ ನೀಡಲಾಗುತ್ತಿದೆ’ ಎಂದರು.

‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿಯ ಪ್ರಥಮ ಘಟಿಕೋತ್ಸವ ನಾಗಾವಿಯಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಸಹ ಕುಲಾಧಿಪತಿ ಕೆ.ಎಸ್‌.ಈಶ್ವರಪ್ಪ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಸಂಸ್ಥಾಪಕ ಡಾ. ಆರ್‌.ಬಾಲಸುಬ್ರಹ್ಮಣ್ಯಂ ಘಟಿಕೋತ್ಸವ ಭಾಷಣ ಮಾಡುವರು’ ಎಂದು ತಿಳಿಸಿದರು.

ADVERTISEMENT

‘2017-2019 ಮತ್ತು 2018-2020 ಬ್ಯಾಚ್‌ನ 250 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಪ್ರಥಮ ರ‍್ಯಾಂಕ್‌ ಪಡೆದ 12 ಮಂದಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಗುವುದು. ಕೋವಿಡ್‌–19 ಮಾರ್ಗಸೂಚಿಯಂತೆ ಘಟಿಕೋತ್ಸವ ನಡೆಯಲಿದ್ದು, ಘಟಿಕೋತ್ಸವದಲ್ಲಿ ಭಾಗವಹಿಸುವ ಅತಿಥಿಗಳು, ಗಣ್ಯರು, ವಿದ್ಯಾರ್ಥಿಗಳೆಲ್ಲರೂ ಖಾದಿ ಧರಿಸಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.