ADVERTISEMENT

ಗದಗ | ಧರೆಯ ಒಡಲು ತುಂಬಿತು: ನೀರ ಬವಣೆ ನೀಗಿತು

ಜಿಲ್ಲಾಡಳಿತದಿಂದ ಜಲ ಸಂರಕ್ಷಣೆ ಕಾಮಗಾರಿಗೆ ಆದ್ಯತೆ; ಅಂತರ್ಜಲ ವೃದ್ಧಿ

ಜೋಮನ್ ವರ್ಗಿಸ್
Published 6 ಜೂನ್ 2020, 3:05 IST
Last Updated 6 ಜೂನ್ 2020, 3:05 IST
ಇತ್ತೀಚೆಗೆ ಸುರಿದ ಮಳೆಯಿಂದ ಗದಗ ಹೊರವಲಯದಲ್ಲಿ  ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸಿರುವ ಚೆಕ್‌ಡ್ಯಾಂನಲ್ಲಿ ನೀರು ಸಂಗ್ರಹವಾಗಿರುವುದು
ಇತ್ತೀಚೆಗೆ ಸುರಿದ ಮಳೆಯಿಂದ ಗದಗ ಹೊರವಲಯದಲ್ಲಿ  ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸಿರುವ ಚೆಕ್‌ಡ್ಯಾಂನಲ್ಲಿ ನೀರು ಸಂಗ್ರಹವಾಗಿರುವುದು   

ಗದಗ: ರಾಜ್ಯ ಸರ್ಕಾರವು ಗುರುತಿಸಿರುವ ತೀವ್ರ ಅಂತರ್ಜಲ ಕುಸಿತ ವಲಯದಲ್ಲಿದ್ದ ಗದಗ ಜಿಲ್ಲೆಯು, ಕಳೆದೊಂದು ವರ್ಷದಲ್ಲಿ ಅಂತರ್ಜಲ ಪುನಶ್ಚೇತನ ಮತ್ತು ಮಳೆ ನೀರು ಸಂಗ್ರಹಣೆಗೆ ಮಹತ್ವ ನೀಡಿದ್ದರ ಫಲವಾಗಿ, ಈಗ ಜಲ ಸ್ವಾವಲಂಬನೆ ಸಾಧಿಸುವತ್ತ ದಾಪುಗಾಲು ಇರಿಸಿದೆ.

ಬರ ಮತ್ತು ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಯನ್ನು ವರ್ಷದ ಹಿಂದೆ ಕೇಂದ್ರ ಸರ್ಕಾರವು ಜಲಶಕ್ತಿ ಅಭಿಯಾನ ಯೋಜನೆಯಡಿ ಆಯ್ಕೆ ಮಾಡಿಕೊಂಡಿತು. ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯೀಕರಣ, ಅಂತರ್ಜಲ ಪುನಶ್ಚೇತನ ಮತ್ತು ಮಳೆ ನೀರು ಸಂಗ್ರಹಣೆಗೆ ಈ ಯೋಜನೆಯಡಿ ಮಹತ್ವ ನೀಡಲಾಯಿತು.

ಇದರ ಫಲವಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಪ್ರಮುಖ ಹಳ್ಳಗಳಿಗೆ ಚೆಕ್‌ಡ್ಯಾಂಗಳು ನಿರ್ಮಾಣವಾದವು. ಮಳೆ ನೀರನ್ನು ಭೂಮಿಗೆ ಮರುಪೂರಣ ಮಾಡಲು, ಹಳ್ಳದಂಚಿನಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲಾಯಿತು. ಇದರ ಜತೆಗೆ ನೂರಾರು ಕೃಷಿ ಹೊಂಡಗಳು ನಿರ್ಮಾಣವಾದವು. ಕಳೆದ ಮುಂಗಾರಿನ ಆರಂಭದಲ್ಲಿ ಕೈಗೊಂಡ ಈ ಕ್ರಮಗಳಿಂದ ಈ ಬಾರಿ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಎಲ್ಲೂ ನೀರಿನ ಕೊರತೆ ಎದುರಾಗಲಿಲ್ಲ.

ADVERTISEMENT

ಚೆಕ್‌ಡ್ಯಾಂ ಮತ್ತು ಇಂಗುಗುಂಡಿ ನಿರ್ಮಾಣದಿಂದ ಹಳ್ಳದಂಚಿನ ಕೃಷಿ ಜಮೀನುಗಳ ಕೊಳವೆಬಾವಿಗಳಲ್ಲಿ ವರ್ಷಪೂರ್ತಿ ಸಮೃದ್ಧ ನೀರಿನ ಇಳುವರಿ ಲಭಿಸಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ವಿಶ್ವವಿದ್ಯಾಲಯಗಳ ಸಹಕಾರದಲ್ಲಿ ಜಲಶಕ್ತಿ ಯೋಜನೆ ಜಾರಿಯಾಗಿದ್ದು, ಜಿಲ್ಲೆಯ ಸಾವಿರಾರರು ರೈತರಿಗೆ ನೀರ ನೆಮ್ಮದಿ ಲಭಿಸಿದೆ.

ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ಶೇ 55ರಷ್ಟು ಮಳೆಯಾಗುತ್ತಿದ್ದು, ಇದರಲ್ಲಿ ಶೇ 15ರಷ್ಟು ಮಾತ್ರ ಬಳಕೆಯಾಗುತ್ತಿತ್ತು. ಬಾಕಿ ನೀರನ್ನು ಭೂಮಿಗೆ ಮರುಪೂರಣ ಮಾಡಲು ಈ ಯೋಜನೆಯಿಂದ ಸಾಧ್ಯವಾಗಿದೆ. ಇದರಿಂದ ಕಳೆದ 6 ವರ್ಷಗಳಲ್ಲಿ ಸರಾಸರಿ 8 ಅಡಿಗಳಷ್ಟು ಕೆಳಕ್ಕಿಳಿದಿದ್ದ ಜಿಲ್ಲೆಯ ಅಂತರ್ಜಲ ಮಟ್ಟವು ಈಗ ಮತ್ತೆ ಏರಿಕೆ ಕಂಡಿದೆ. 2013ರಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು 42 ಅಡಿ ಆಳದಲ್ಲಿತ್ತು. 2019ರಲ್ಲಿ ಇದು 50.13 ಅಡಿ ಆಳಕ್ಕೆ ಕುಸಿದಿತ್ತು.

ಜಲ ಶಕ್ತಿ ಅಭಿಯಾನದ ಜತೆಗೆ, ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯು ನದಿ ಪುನಶ್ಚೇತನ ಯೋಜನೆಯ ಭಾಗವಾಗಿ ಗದಗ ತಾಲ್ಲೂಕಿನ ಅಸುಂಡಿ ಗ್ರಾಮದ ಈಚಲ ಹಳ್ಳದಲ್ಲಿ ಅಂತರ್ಜಲ ಮರುಪೂರಣ ಇಂಗು ಗುಂಡಿಗಳನ್ನು ನಿರ್ಮಿಸಿತು. ಕಳೆದ ಮುಂಗಾರಿನಲ್ಲಿ ಸುರಿದ ಮಳೆ ನೀರು ಈ ಗುಂಡಿಗಳ ಮೂಲಕ ಮತ್ತೆ ಧರೆಯೊಳಗೆ ಇಳಿಯಿತು. ಪರಿಣಾಮ ಈಗ ಬೇಸಿಗೆಯಲ್ಲಿ ನೀರಿನ ತತ್ವಾರ ಕಡಿಮೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.