ADVERTISEMENT

ನೈಜ ಕಾರ್ಮಿಕರಿಗೆ ದ್ರೋಹ: ಸಿಐಟಿಯು ಕಿಡಿ

ಕೊಳಚೆ ನಿರ್ಮೂಲನೆ ಮಂಡಳಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಹಣ ಪಾವತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 5:01 IST
Last Updated 23 ಸೆಪ್ಟೆಂಬರ್ 2022, 5:01 IST
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸದಸ್ಯರು ಗದಗ ಜಿಲ್ಲಾ ಕಾರ್ಮಿಕ ಅಧಿಕಾರಿ ಮೂಲಕ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸದಸ್ಯರು ಗದಗ ಜಿಲ್ಲಾ ಕಾರ್ಮಿಕ ಅಧಿಕಾರಿ ಮೂಲಕ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು   

ಗದಗ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕೊಳಚೆ ನಿರ್ಮೂಲನೆ ಮಂಡಳಿಗೆ ಪಾವತಿಸಲಾದ ₹76 ಕೋಟಿ ಹಣವನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಸಿಐಟಿಯು ಮುಖಂಡ ಮಾರುತಿ ಚಿಟಗಿ ನೇತೃತ್ವದಲ್ಲಿಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸದಸ್ಯರು ಜಿಲ್ಲಾ ಕಾರ್ಮಿಕ ಅಧಿಕಾರಿ ಮೂಲಕ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಮುಖಂಡ ಮಾರುತಿ ಚಿಟಗಿ, ‘ಸ್ಲಂ ಬೋರ್ಡ್‌ನ ವಸತಿ ನಿರ್ಮಾಣ ಕಾಮಗಾರಿಗೆ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ನೀಡಬಾರದು. ಆದರೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ದುರ್ಬಳಕೆ ಮಾಡಿ ಸ್ಲಂ ಬೋರ್ಡ್‌ ಫಲಾನುಭವಿಗಳಿಗೆ ನೀಡಿದ್ದಾರೆ. ಇದು ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮಾಡಿದ ದ್ರೋಹ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೊಳಚೆ ನಿರ್ಮೂಲನೆ ಮಂಡಳಿ ಸೇರಿದಂತೆ ಇತರೆ ವಸತಿ ಯೋಜನೆಗಳ ಫಲಾನುಭವಿಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಕಲ್ಯಾಣ ಮಂಡಳಿಗೆ ಫಲಾನುಭವಿಗಳನ್ನಾಗಿ ನೋಂದಾಯಿಸುವ ಕ್ರಮವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾಗಿ ಐದು ವರ್ಷಗಳನ್ನು ಪೂರೈಸಿದ ಸದಸ್ಯರಿಗೆ ಮಾತ್ರವೇ ಮನೆ ನಿರ್ಮಾಣಕ್ಕೆ ಸಾಲ, ಸಹಾಯಧನ, ಮುಂಗಡ ಹಣ ಪಾವತಿ ಕ್ರಮ ಜಾರಿಗೊಳಿಸಬೇಕು. ಮಂಡಳಿಯಿಂದ ಈಗ ಜಾರಿಯಲ್ಲಿರುವ ಸಿಜಿಎಚ್ ಆಧರಿತ ವೈದ್ಯಕೀಯ ಮರುಪಾವತಿ ಯೋಜನೆ ರದ್ದು ಮಾಡಿ, ಎಲ್ಲ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ 2021 ನಗದು ರಹಿತ ಸೇವೆಯನ್ನು ಜಾರಿಗೊಳಿಸಬೇಕು. ಎಸ್‌ಎಸ್‌ಪಿ ಬಾಕಿಯಿರುವ 60 ಸಾವಿರ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಪಡಿಸಿ ಹಣ ಸಂದಾಯ ಮಾಡಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಅಧ್ಯಕ್ಷ ಮುತ್ತಪ್ಪ ಚಲವಾದಿ, ಖಜಾಂಚಿ ಮೆಹಬೂಬ ಹವಾಲ್ದಾರ, ಉಪಾಧ್ಯಕ್ಷ ಪೀರು ರಾಠೋಡ, ಸಹಕಾರ್ಯದರ್ಶಿ ಫಕೀರೇಶ ಹುಳ್ಳಾಳ, ಜಿಲ್ಲಾ ಸದಸ್ಯರಾದ ಸುಶೀಲಾ ಚಲವಾದಿ, ಹುಸೇನಸಾಬ ತಮ್ರಳ್ಳಿ, ದೇವಪ್ಪ ಚಲವಾದಿ, ಬಸಯ್ಯ ಡಂಬಳಮಠ, ನೀಲಪ್ಪ ಮೆಣಸಗಿ, ವೀರಪ್ಪ ಬೂಸನೂರ, ವೀರೇಶ ರೇವಡಿ, ದೇವೇಂದ್ರಪ್ಪ ಕಮ್ಮಾರ, ಗರೀಬಸಾಬ ನಮಾಜಿ, ಶೋಭಾ ಕೊಟ್ರಶೆಟ್ರ, ಆರ್.ಎಂ.ಮುಲ್ಲಾ, ಶಿವಪ್ಪ ಅರವಟಗಿ, ಬೀರಪ್ಪ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.