ADVERTISEMENT

ಪರೀಕ್ಷೆ ಆತಂಕ; ವಿದ್ಯಾರ್ಥಿನಿಗೆ ಎದೆನೋವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 12:22 IST
Last Updated 30 ಮಾರ್ಚ್ 2022, 12:22 IST

ಗದಗ: ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಗುರುಬಸವ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ಕಲ್ಲಾಪುರ ಸರ್ಕಾರಿ ‍ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಬುಧವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ತಕ್ಷಣವೇ ಶಿಕ್ಷಕರು ಆ ವಿದ್ಯಾರ್ಥಿನಿಯನ್ನು 108 ವಾಹನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ನರಗುಂದ ತಾಲ್ಲೂಕು ಆಸ್ಪತ್ರೆಗೆ ಕರೆ ತಂದು ಇಸಿಜಿ, ಬಿಪಿ ತಪಾಸಣೆ ಮಾಡಿಸಿದ್ದಾರೆ. ಎಲ್ಲ ಪರೀಕ್ಷಾ ವರದಿಗಳು ‘ನಾರ್ಮಲ್‌’ ಬಂದ ನಂತರ ಆಕೆಯನ್ನು ಮತ್ತೆ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಿಸಿದ್ದಾರೆ.

‘ಪರೀಕ್ಷಾ ಆತಂಕದಿಂದ ವಿದ್ಯಾರ್ಥಿನಿಗೆ ಎದೆ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದು, ಆಕೆ ಈಗ ಆರೋಗ್ಯವಾಗಿದ್ದಾಳೆ’ ಎಂದು ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.

ADVERTISEMENT

ಒಂದೂವರೆ ಗಂಟೆಯಲ್ಲಿ ಇಷ್ಟೆಲ್ಲ ಪ್ರಕ್ರಿಯೆಗಳನ್ನು ಮುಗಿಸಿ ವಿದ್ಯಾರ್ಥಿನಿಯಿಂದ ಮತ್ತೆ ಪರೀಕ್ಷೆ ಬರೆಯಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.