ADVERTISEMENT

’ತೋಂಟದ ಶ್ರೀಗಳು ವೈಜ್ಞಾನಿಕ ಪ್ರಜ್ಞೆ ಹರಡಿದರು‘

ತೋಂಟದಾರ್ಯ ಜಾತ್ರಾ ಮಂಗಲೋತ್ಸವದಲ್ಲಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 13:15 IST
Last Updated 25 ಏಪ್ರಿಲ್ 2019, 13:15 IST
ಗದುಗಿನ ತೋಂಟದಾರ್ಯ ಜಾತ್ರಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಗತಿ ಪರ ರೈತ ಮಲ್ಲಣ್ಣ ನಾಗರಾಳ ಅವರನ್ನು ಸ‌ನ್ಮಾನಿಸಲಾಯಿತು. ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ, ಡಾ.ತೋಂಟದ ಸಿದ್ಧರಾಮ ಶ್ರೀ, ಶಿವಕುಮಾರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಡಾ.ಎಂ.ಬಿ. ನಿಂಬಣ್ಣವರ ಇದ್ದರು
ಗದುಗಿನ ತೋಂಟದಾರ್ಯ ಜಾತ್ರಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಗತಿ ಪರ ರೈತ ಮಲ್ಲಣ್ಣ ನಾಗರಾಳ ಅವರನ್ನು ಸ‌ನ್ಮಾನಿಸಲಾಯಿತು. ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ, ಡಾ.ತೋಂಟದ ಸಿದ್ಧರಾಮ ಶ್ರೀ, ಶಿವಕುಮಾರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಡಾ.ಎಂ.ಬಿ. ನಿಂಬಣ್ಣವರ ಇದ್ದರು   

ಗದಗ: ‘ಬಸವಾದಿ ಶರಣರ ತತ್ವಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಾ, ಮೂಢನಂಬಿಕೆ, ಅರ್ಥಹೀನ ಆಚರಣೆಗಳನ್ನು ಬದಿಗೊತ್ತಿ ಜನರಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿದ ಲಿಂಗೈಕ್ಯ ತೋಂಟದ ಶ್ರೀಗಳು ಮಠದ ಪೀಠ ಪರಂಪರೆಯ ಗೌರವ ಹೆಚ್ಚಿಸಿದರು’ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಹೇಳಿದರು.

ಇಲ್ಲಿನ ತೋಂಟದಾರ್ಯ ಜಾತ್ರಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮ ಸಮಾಜದ ಪ್ರತಿಪಾದಕರಾಗಿದ್ದ ತೋಂಟದ ಶ್ರೀಗಳು ಮಠದ ಮಹಾದ್ವಾರವನ್ನು ಎಲ್ಲ ವರ್ಗಗಳಿಗೆ ಮುಕ್ತವಾಗಿ ತೆರೆದಿಡುವ ಮೂಲಕ ಮಠವನ್ನು ಕೋಮು ಸೌಹಾರ್ದದ ಕೇಂದ್ರವಾಗಿಸಿದರು. ಅಡ್ಡಪಲ್ಲಕ್ಕಿಯಲ್ಲಿ ತಾವೂ ಕೂರದೇ ಬಸವಾದಿ ಶರಣರ, ಸಿದ್ಧಲಿಂಗೇಶ್ವರರ ವಚನದ ಕಟ್ಟುಗಳನ್ನು ಇಟ್ಟು ಮೆರೆಸುವಮೂಲಕ ಕಂದಾಚಾರ, ಡಾಂಭಿಕತೆಗಳಿಗೆ ಪೂರ್ಣ ವಿರಾಮ ನೀಡಿದರು. ಸಮಾಜದ ಎಲ್ಲ ವರ್ಗದ ಜನರನ್ನು ಬೆಸೆಯುವ ಭಾವೈಕ್ಯತೆಯ ಕೊಂಡಿಯಾಗಿದ್ದ ಶ್ರೀಗಳು ಭೌತಿಕವಾಗಿ ಮಾತ್ರ ನಮ್ಮಿಂದ ದೂರವಾಗಿದ್ದು, ಅವರ ತತ್ವಾದರ್ಶಗಳು ಡಾ.ಸಿದ್ಧರಾಮ ಶ್ರೀಗಳ ಮೂಲಕ ನಿರಂತರ ಪ್ರಕಟವಾಗುತ್ತವೆ’ ಎಂದರು.

ADVERTISEMENT

‘ತೋಂಟದ ಶ್ರೀಗಳು ಕೃಷಿಯ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಇಂದು ಕೃಷಿಯಲ್ಲಿ ಜನರು ಆಸಕ್ತಿ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವೈಜ್ಞಾನಿಕವಾಗಿ ಕೃಷಿ ಮಾಡಿ ಉತ್ತಮ ಲಾಭ ಕಂಡುಕೊಳ್ಳಲು ಸಾಧ್ಯವಿದೆ. ಮಳೆಕೊಯ್ಲು, ಕೃಷಿ ಹೊಂಡಗಳಂತಹ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿದ ನೂರಾರು ನಿದರ್ಶನಗಳು ನಮ್ಮ ಮುಂದಿವೆ. ಆದ್ದರಿಂದ ಜನರು ಈ ಬಗ್ಗೆ ಜಾಗೃತರಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ರೈತ ಮಲ್ಲಣ್ಣ ನಾಗರಾಳ ಹೇಳಿದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿಪ್ರಶಸ್ತಿ ಪುರಸ್ಕೃತ ನಾಡೋಜ ಬೆಳಗಲ್ ವೀರಣ್ಣ ಅವರನ್ನು ಸನ್ಮಾನಿಸಲಾಯಿತು. ‘ಪ್ರತಿಭೆಯುಳ್ಳವನು ಯಾವುದೇ ವರ್ಗದವನಾಗಿರಲಿ ಅವನನ್ನು ಗುರುತಿಸಿ ಪ್ರೋತ್ಸಾಹಿಸುವುದು ತೋಂಟದ ಶ್ರೀಗಳ ಶ್ರೇಷ್ಠತೆಯಾಗಿತ್ತು. ಶ್ರೀಗಳು ಹಾಗೂ ಎಂ.ಎಂ. ಕಲಬುರ್ಗಿ ಅವರು 200ಕ್ಕೂ ಹೆಚ್ಚು ತೊಗಲುಗೊಂಬೆ ಕಾರ್ಯಕ್ರಮಗಳನ್ನು ಆಯೋಜಿಸಿ, ಈ ಕಲೆಗೆ ಪ್ರೋತ್ಸಾಹ ನೀಡಿದರು. ಮಠವನ್ನು ಪವಾಡ ಸದೃಶ ರೀತಿಯಲ್ಲಿ ಅಭಿವೃದ್ಧಿಗೊಳಿಸಿದ ಶ್ರೀಗಳು ಎಷ್ಟೋ ಕುಟುಂಬಗಳ ಪಾಲಿಗೆ ಆಧಾರ ಸ್ತಂಭವಾಗಿದ್ದಾರೆ. ನನಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲು ಅವರ ಕೃಪಾಶೀರ್ವಾದ ಕಾರಣ’ ಎಂದು ಅವರು ಹೇಳಿದರು.

‘ಬಸವಣ್ಣ ಮತ್ತು ಮಾರ್ಟಿನ್ ಲೂಥರ್ ಚಿಂತನೆಗಳ ಒಂದು ತೌಲನಿಕ ಅಧ್ಯಯನ’ ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ತುಬಚಿಯ ಸಾವಳಗೀಶ್ವರ ದೇವರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಆರು ಚಿನ್ನದ ಪದಕಗಳನ್ನು ಪಡೆದ ಬೀಳೂರಿನ ಮಹೇಶ್ವರ ದೇವರು ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಬಿಳಿಗಿರಿ ರಂಗನಾಥ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಂಘದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಹಾಗೂ ಡಾ.ತೋಂಟದ ಸಿದ್ಧರಾಮ ಶ್ರೀ ಮಾತನಾಡಿದರು.

ಜಾತ್ರಾ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ನಿಂಬಣ್ಣವರ, ಪ್ರೊ.ಬಾಹುಬಲಿ ಜೈನರ್, ವಿವೇಕಾನಂದಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.