ADVERTISEMENT

ಎಕರೆಗೆ ಕನಿಷ್ಠ ₹20 ಸಾವಿರ ಪರಿಹಾರ ನೀಡಿ

ಬೆಳೆಹಾನಿಯಿಂದ ಕಷ್ಟದಲ್ಲಿರುವ ರೈತರು; ವೀರಣ್ಣ ಮಜ್ಜಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:49 IST
Last Updated 25 ನವೆಂಬರ್ 2021, 2:49 IST

ಗದಗ: ‘ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಹೆಕ್ಟೇರ್‌ ಬದಲಾಗಿ ಪ್ರತಿ ಎಕರೆಗೆ ಕನಿಷ್ಠ ₹20 ಸಾವಿರ ಪರಿಹಾರ ನೀಡಬೇಕು’ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ಉತ್ತರ ಪ್ರಾಂತ್ಯದ ರಾಜ್ಯ ಕಾರ್ಯಕಾರಣಿ ಸದಸ್ಯ ವೀರಣ್ಣ ಮಜ್ಜಗಿ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೃಷಿ ಇಲಾಖೆ ಅಧಿಕಾರಿಗಳು, ಸಚಿವರು ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಸಮೀಕ್ಷೆ ಮಾಡದೇ ರೈತರ ಹೊಲಗಳಿಗೆ ಭೇಟಿ ನೀಡಿ, ನಿಜವಾಗಿ ಎಷ್ಟು ಹಾನಿಯಾಗಿದೆ ಎಂಬುದನ್ನು ನಮೂದಿಸಬೇಕು ಎಂದು ಹೇಳಿದರು.

‘ಎರಡು ದಶಕಗಳ ಅವಧಿಯಲ್ಲಿ ಕೃಷಿಯಿಂದ ನಷ್ಟ ಅನುಭವಿಸಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಇದೇ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ರೈತರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಬೆಳೆಸಾಲ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬ, ರೈತರಿಗೆ ಕಂದಾಯ ಅಧಿಕಾರಿಗಳು ಮಾಡುತ್ತಿರುವ ಅನ್ಯಾಯ ಸರಿಪಡಿಸುವಂತೆಯೂ’ ಅವರು ಒತ್ತಾಯಿಸಿದರು.

ADVERTISEMENT

ಭಾರತೀಯ ಕಿಸಾನ್ ಸಂಘದ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಟಾಕಪ್ಪ ಸಾತಪುತೆ ಮಾತನಾಡಿ, ‘ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಕಡಲೆ ಬೆಳೆಗೆ ಬೇಕಾಗುವ ಮಿಲಾಥೀನ್ ಪೌಡರ್ ಪೂರೈಕೆ ಇಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಅನುದಾನ ಬಂದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದು ಅದಕ್ಕಾಗಿ ಸರ್ಕಾರ ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿಕರ ನೆರವಿಗೆ ಬರಬೇಕು’ ಎಂದು ಆಗ್ರಹಿಸಿದರು.

ಶಿವಪುತ್ರಪ್ಪ ನೆಲಗುಡ್ಡದ, ಬಸನಗೌಡ ಪಾಟೀಲ, ಚೆನ್ನಬಸನಗೌಡ ಪಾಟೀಲ, ಮುತ್ತಪ್ಪ ಚಿನ್ನಪ್ಪಗೌಡ್ರ ಹಾಜರಿದ್ದರು.

‘ರೈತರ ಸ್ವರಾಜ್ ಯಾತ್ರೆ ಮಾಡಲಿ’

‘ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು. ರೈತರ ಸ್ವರಾಜ್ ಯಾತ್ರೆ ಮಾಡಲಿ’ ಎಂದು ವೀರಣ್ಣ ಮಜ್ಜಗಿ ಆಗ್ರಹಿಸಿದರು.

‘ಮಳೆಯಿಂದಾಗಿ ರಾಜ್ಯದೆಲ್ಲೆಡೆ ಅಪಾರ ಬೆಳೆ ಹಾನಿಯಾಗಿದ್ದು ರೈತರು ಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಬಿಜೆಪಿ ಸರ್ಕಾರ ಜನಸ್ವರಾಜ್‌ ಸಮಾವೇಶ ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಈ ಸಮಾವೇಶ ಮಾಡುತ್ತಿದ್ದೀರಿ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.