ADVERTISEMENT

ಕುಸ್ತಿ ಕೋಲ್ಮಿಂಚು ಪ್ರೇಮಾ ಹುಚ್ಚಣ್ಣವರ

ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರ ‘ಉದ್ಯೋಗ ಭದ್ರತೆ’ ಕಲ್ಪಿಸಬೇಕು

ಸತೀಶ ಬೆಳ್ಳಕ್ಕಿ
Published 29 ಆಗಸ್ಟ್ 2021, 4:33 IST
Last Updated 29 ಆಗಸ್ಟ್ 2021, 4:33 IST
ಪ್ರೇಮಾ ಹುಚ್ಚಣ್ಣವರ
ಪ್ರೇಮಾ ಹುಚ್ಚಣ್ಣವರ   

ಗದಗ: ದೈಹಿಕ ಮತ್ತು ಮಾನಸಿಕ ಬಲಿಷ್ಠತೆ ಬೇಡುವ ಕುಸ್ತಿ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮ‌ಟ್ಟದಲ್ಲಿ ಛಾಪು ಮೂಡಿಸಿದ ಪ್ರತಿಭೆ ಪ್ರೇಮಾ ಹುಚ್ಚಣ್ಣವರ. ನೋಡಲು ಸೌಮ್ಯ ಸ್ವಭಾವದ ಯುವತಿಯಂತೆ ಕಾಣಿಸುವ ಪ್ರೇಮಾ ಕುಸ್ತಿ ಅಖಾಡಕ್ಕಿಳಿದರೆ ತನ್ನ ಬಲಿಷ್ಠ ಪಟ್ಟುಗಳ ಮೂಲಕ ಎದುರಾಳಿಗಳನ್ನು ಚಿತ್‌ ಮಾಡುವುದನ್ನು ನೋಡುವುದೇ ಒಂದು ಸೊಗಸು. ಅವರ ಪಟ್ಟುಗಳಿಗೆ ಅನೇಕ ಪದಕಗಳು, ಪ್ರಶಸ್ತಿಗಳು ಅರಸಿ ಬಂದಿವೆ.

ಗದಗ ತಾಲ್ಲೂಕಿನ ಅಸುಂಡಿ ಗ್ರಾಮದವರಾದ ಪ್ರೇಮಾ ಆಕಸ್ಮಿಕವಾಗಿ ಕುಸ್ತಿ ಕ್ರೀಡೆಗೆ ಆತುಕೊಂಡವರು. ಐದನೇ ತರಗತಿ
ಯಲ್ಲಿದ್ದಾಗ ಕ್ರೀಡಾಶಾಲೆ ಸೇರಿದ ಅವರು ಆರಂಭದಲ್ಲಿ ಹಾಕಿಪಟುವಾಗುವ ಕನಸು ಕಂಡಿದ್ದರು.

ಎತ್ತರ ಇಲ್ಲ ಎಂಬ ಕಾರಣಕ್ಕೆ ಹಾಕಿ ಕ್ರೀಡೆಗೆ ಆಯ್ಕೆ ಆಗಲಿಲ್ಲ. ಬಳಿಕ ಕುಸ್ತಿ ಕ್ರೀಡೆಯತ್ತ ಆಕರ್ಷಿತರಾದ ಅವರು ಕಠಿಣ ಅಭ್ಯಾಸ, ನಿರಂತರ ಶ್ರದ್ಧೆಯಿಂದ ಕುಸ್ತಿಯ ಪಟ್ಟುಗಳನ್ನು ಕಲಿತರು. ಪ್ರೇಮಾ ಅವರ ಯಶಸ್ಸಿನಲ್ಲಿ ಆಕೆಯ ತರಬೇತುದಾರ ಶರಣಗೌಡ ಬೇಲೇರಿ ಅವರ ಪಾತ್ರ ಪ್ರಮುಖವಾಗಿದೆ.

ADVERTISEMENT

‘ಗದಗ ಜಿಲ್ಲೆ ಕ್ರೀಡಾಪಟುಗಳ ತವರೂರಿನಂತಿದೆ. ಈ ನೆಲದಲ್ಲಿ ಹುಟ್ಟಿದ ಅನೇಕ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಕೀರ್ತಿಗಳಿಸಿದ್ದಾರೆ. ಹುಟ್ಟಿದ ಊರಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ್ದಾರೆ. ಟೊಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಕ್ರೀಡಾಪಟುಗಳು ಉತ್ತಮ ಸಾಧನೆ ಮೆರೆದಿದ್ದು, ನಮ್ಮೆಲ್ಲರಿಗೂ ಸ್ಫೂರ್ತಿ ತಂದಿದೆ. ಅವರ ಸಾಧನೆ ನಮ್ಮಂತಹ ನೂರಾರು ಕ್ರೀಡಾಪಟುಗಳ ಎದೆಯಲ್ಲಿ ಮತ್ತಷ್ಟು ಸಾಧನೆ ಮಾಡುವ ಹುಮ್ಮಸ್ಸು ಮೂಡಿಸಿದೆ’ ಎನ್ನುತ್ತಾರೆ ಪ್ರೇಮಾ ಹುಚ್ಚಣ್ಣವರ.

‘ಗದಗ ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಉತ್ತಮ ತರಬೇತುದಾರರೂ ಇದ್ದಾರೆ. ಆದರೆ, ಕ್ರೀಡಾಪಟುಗಳಿಗೆ ಪ್ರಾಯೋಜಕರ ಕೊರತೆ ಕಾಡುತ್ತಿದೆ. ಕುಸ್ತಿ ಕಠಿಣ ಕ್ರೀಡೆ. ಎದುರಾಳಿಗಳನ್ನು ನೆಲಕ್ಕೆ ಉರುಳಿಸಬೇಕಾದರೆ ರಟ್ಟೆಯಲ್ಲಿ ಬಲವಿರಬೇಕು. ಅದಕ್ಕೆ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ. ನಮ್ಮ ದೇಹಕ್ಕೆ ಕಸುವು ತುಂಬುವ ಡ್ರೈ ಫ್ರೂಟ್ಸ್‌, ಹಣ್ಣಿನ ರಸ ಇವುಗಳಿಗೆಂದೇ ಪ್ರತಿ ತಿಂಗಳು ಸಾಕಷ್ಟು ಹಣ ಖರ್ಚಾಗುತ್ತದೆ. ನಮ್ಮಂತಹ ಬಡ ಕ್ರೀಡಾಪಟುಗಳಿಗೆ ತಿಂಗಳಿಗೆ ₹10ರಿಂದ ₹15 ಸಾವಿರವನ್ನು ಇದಕ್ಕಾಗಿ ಹೊಂದಿಸುವುದು ಕಷ್ಟ. ಆದ್ದರಿಂದ, ಪೌಷ್ಟಿಕ ಆಹಾರ ದೊರಕಿಸಿಕೊಡಲು ಪ್ರಾಯೋಜಕರು ಸಿಕ್ಕರೆ ಇನ್ನೂ ಹೆಚ್ಚಿನ ಸಾಧನೆ ನಮ್ಮಿಂದ ಹೊರಹೊಮ್ಮುತ್ತದೆ’ ಎನ್ನುತ್ತಾರೆ ಪ್ರೇಮಾ.

‘ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಕ್ರೀಡೆಗೆ, ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಅಂತರರಾಷ್ಟ್ರೀಯ,ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ತತ್‌ಕ್ಷಣವೇ ಉದ್ಯೋಗ ಸಿಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಕ್ರೀಡಾ ಕೋಟಾದಲ್ಲಿ ಉದ್ಯೋಗ ಬಯಸಿ ಕಾದು ಕುಳಿತಿರುವ ಅಸಂಖ್ಯ ಕ್ರೀಡಾಪಟುಗಳು ಇದ್ದಾರೆ. ನಮ್ಮಂತಹ ಬಡ ಕ್ರೀಡಾ ಪಟುಗಳಿಗೆ ಇತ್ತ ಪ್ರಾಯೋಜಕರೂ ಸಿಗುತ್ತಿಲ್ಲ. ನಮ್ಮ ಖರ್ಚು ವೆಚ್ಚಗಳನ್ನು ನಾವೇ ನೋಡಿಕೊಂಡು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡೋಣ
ವೆಂದರೆ ಸರ್ಕಾರಿ ಉದ್ಯೋಗವೂ ಸಿಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಕುಸ್ತಿ ಕ್ರೀಡೆಯಲ್ಲಿ ಬಲಿಷ್ಠ ಹೆಜ್ಜೆಗುರುತುಗಳನ್ನು ಮೂಡಿಸುತ್ತಾ ಬಂದಿರುವ ಪ್ರೇಮಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಪ್ರಾಯೋಜಕರ ಜತೆಗೆ ಉದ್ಯೋಗ ಭದ್ರತೆ ಸಿಗಬೇಕು ಎಂಬ ಆಶಯ ವ್ಯಕ್ತಪಡಿಸುತ್ತಾರೆ. ಇದರಿಂದ ಕ್ರೀಡೆಗೆ ಅಗತ್ಯವಿರುವ ಕನಿಷ್ಠ ಸೌಲಭ್ಯಗಳನ್ನು ಕ್ರೀಡಾಪಟುವೇ ಪೂರೈಸಿಕೊಳ್ಳುವ ‘ಬಲ’ ಬರುತ್ತದೆ ಎಂಬುದು ಅವರ ನಂಬಿಕೆಯಾಗಿದೆ.

ಪ್ರೇಮಾ ಪಟ್ಟುಗಳಿಗೆ ಪದಕಗಳ ಸುರಿಮಳೆ

ಹತ್ತು ವರ್ಷಗಳಿಂದ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರೇಮಾ ಹುಚ್ಚಣ್ಣವರ ಕುಸ್ತಿ ಕ್ರೀಡೆಯಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ.

2012–13ರಲ್ಲಿ ಕಜಕಿಸ್ತಾನದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ, ಅಜೆರ್ಬೈಜಾನ್‌ನಲ್ಲಿ ನಡೆದ ವರ್ಲ್ಡ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 5 ಚಿನ್ನದ ಪದಕ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ 25 ಚಿನ್ನದ ಪದಕಗಳಿಗೆ ಇವರು ಕೊರಳು ಒಡ್ಡಿದ್ದಾರೆ. ಇವರ ಕ್ರೀಡಾ ಸಾಧನೆಗೆ ರಾಜ್ಯ ಸರ್ಕಾರದಿಂದ ನೀಡುವ ಏಕಲವ್ಯ, ಕೆಒಎ ಪ್ರಶಸ್ತಿ, ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.