ADVERTISEMENT

ಅಜ್ಜೂರು: ಹಲವರಿಗೆ ಜ್ವರ– ಡೆಂಗಿ ಶಂಕೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 9:31 IST
Last Updated 14 ಜೂನ್ 2017, 9:31 IST
ಅರಕಲಗೂಡು ತಾಲ್ಲೂಕಿನ ಅಜ್ಜೂರು ಗ್ರಾಮದ ರಸ್ತೆಗಳಲ್ಲಿ ನೀರು ನಿಂತಿರುವುದು
ಅರಕಲಗೂಡು ತಾಲ್ಲೂಕಿನ ಅಜ್ಜೂರು ಗ್ರಾಮದ ರಸ್ತೆಗಳಲ್ಲಿ ನೀರು ನಿಂತಿರುವುದು   

ಅರಕಲಗೂಡು: ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ವಚ್ಛತೆಯ ಕೊರತೆಯಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ತಾಲ್ಲೂಕಿನ ಅಜ್ಜೂರು ಗ್ರಾಮದಲ್ಲಿ ಹಲವು ಮಂದಿ ಜ್ವರದಿಂದ ಬಳಲುತ್ತಿದ್ದು ಡೆಂಗಿ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಯಲಗತವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಸಾಕಷ್ಟು ಮಂದಿಗೆ ಜ್ವರ, ನೆಗಡಿ, ಶೀತ, ಮೈ- ಕೈ ನೋವು ಕಾಣಿಸಿಕೊಂಡಿದೆ. ಕಾಯಿಲೆಗೆ ತುತ್ತಾದ ಜನರು ಅರಕಲಗೂಡು, ಹೊಳೆನರಸೀಪುರ, ಬೆಳವಾಡಿ, ಹಾಸನದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಗ್ರಾಮದಲ್ಲಿ ಸ್ವಚ್ಛತೆಯ ಕೊರತೆ ಕಾಡುತ್ತಿದೆ. ಚರಂಡಿಗಳನ್ನು ಶುಚಿಗೊಳಿಸಲು ಕ್ರಮ ಕೈಗೊಂಡಿಲ್ಲ ಹೀಗಾಗಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿವೆ. ‘ಕೆಲ ದಿನಗಳ ಹಿಂದೆ ನಾನು ಜ್ವರದಿಂದ ಬಳಲಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾದೆ. ಈಗ ತಂದೆ ರಾಜೇಗೌಡ ಅವರು ಜ್ವರ ಬಾಧೆಗೆ ತುತ್ತಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಗ್ರಾಮದ ಯೋಗೇಶ್ ಹೇಳಿದರು.

ADVERTISEMENT

‘ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ, ಅಶುಚಿತ್ವ ತಾಂಡವವಾಡುತ್ತಿದ್ದು, ರೋಗ ಹರಡಲು ಕಾರಣವಾಗಿದೆ’ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು. ‘ಕುಡಿಯಲು ನೀರು ಸರಬರಾಜು ಮಾಡುವ ಕೊಳವೆಗೆ ನಲ್ಲಿ ಅಳವಡಿಸದೇ ಗುಂಡಿಯಲ್ಲೇ ನೀರು ಹಿಡಿದುಕೊಳ್ಳುತ್ತಿರುವುದರಿಂದ ನೀರಿಗೆ ಕೊಳಚೆ ನೀರು ಸೇರಿರುವ ಸಾಧ್ಯತೆ ಇದೆ. ಇದೂ ಕಾಯಿಲೆ ಹರಡಲು ಕಾರಣವಾಗಿದೆ.

ಗ್ರಾಮಕ್ಕೆ ಭೇಟಿ ನೀಡಿ ಜ್ವರದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ನೀಡಲಾಗಿದೆ. ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಜ್ವರಕ್ಕೆ ನಿಖರ ಕಾರಣ ತಿಳಿಯಲಿದೆ. ಸ್ವಚ್ಛತೆ ಕಾಪಾಡಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿ ಗ್ರಾಮ ಪಂಚಾಯಿತಿಗೆ ಪತ್ರ ಬರೆಯಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿಗೌಡ ತಿಳಿಸಿದರು.

* * 

ಗ್ರಾಮಸ್ಥರಿಗೆ ಕುಡಿಯಲು ಶುದ್ಧ ನೀರು ನೀಡಲಾಗುತ್ತದೆ. ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ಅರಿವು ಮೂಡಿಸಲಾಗುವುದು
ಪ್ರಸನ್ನ ಕುಮಾರ್
ಗ್ರಾ.ಪಂ. ಅಧ್ಯಕ್ಷ, ಯಲಗತವಳ್ಳಿ

* * 

ಅಜ್ಜೂರು ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿದ್ದ 12 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ರಕ್ತ ಮಾದರಿ ಕಳುಹಿಸಿದ್ದು ವರದಿ ಬಂದ ನಂತರ ಕಾಯಿಲೆ ಬಗ್ಗೆ ಗೊತ್ತಾಗಲಿದೆ
ಡಾ.ಮಧುಗೌಡ, ವೈದ್ಯ, ಬೆಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.