ADVERTISEMENT

ಅಪ್ಪಣ್ಣಯ್ಯ ನಿಧನಕ್ಕೆ ಗಣ್ಯರ ಕಂಬನಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 8:25 IST
Last Updated 10 ಮಾರ್ಚ್ 2011, 8:25 IST

ಬೇಲೂರು: ಅನಾರೋಗ್ಯದಿಂದ ಮಂಗಳವಾರ ನಿಧನರಾದ ಎಚ್‌ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಚ್.ಬಿ. ಅಪ್ಪಣ್ಣಯ್ಯ ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಹೆಬ್ಬಾಳು ಗ್ರಾಮದ ಅವರ ಜಮೀನಿನಲ್ಲಿ ನೆರವೇರಿತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಅಪ್ಪಣ್ಣಯ್ಯ ಅವರ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಬೇಲೂರಿಗೆ ತರಲಾಗಿತ್ತು. ಬುಧವಾರ ಬೆಳಿಗ್ಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಪುರಸಭೆ ಆವರಣಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಅಪ್ಪಣ್ಣಯ್ಯ ಅವರ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿ ಸಂತಾಪ ಸಲ್ಲಿಸಲಾಯಿತು.

ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ಕೆ.ಜವರೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಜಿ.ಪಂ. ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಪುರಸಭಾಧ್ಯಕ್ಷ ಎಚ್.ಎಂ. ದಯಾನಂದ್, ಜಿ.ಪಂ. ಸದಸ್ಯರಾದ ಎಂ.ವಿ.ಹೇಮಾವತಿ, ಅಮಿತ್‌ಶೆಟ್ಟಿ, ಜಿ.ಟಿ.ಇಂದಿರಾ, ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷೆ ಬಿ.ಕೆ.ಚಂದ್ರಕಲಾ, ತಾ.ಪಂ. ಅಧ್ಯಕ್ಷೆ ಕಮಲ ಚನ್ನಪ್ಪ, ತಹಶೀಲ್ದಾರ್ ಪಿ.ಜಿ.ನಟರಾಜ್, ಎಂ.ಎಸ್. ಪರಮಶಿವಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ, ಬಿ.ಸಿ. ಮಂಜುನಾಥ್ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಹೆಬ್ಬಾಳು ಗ್ರಾಮದಲ್ಲಿ ವೀರಶೈವ ಸಂಪ್ರದಾಯದಂತೆ ಎಚ್.ಬಿ. ಅಪ್ಪಣ್ಣಯ್ಯ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಯಿತು. ಹಳೇಬೀಡು ವರದಿ: ಜೆಡಿಎಸ್ ಮುಖಂಡ ಹೆಬ್ಬಾಳು ಗ್ರಾಮದ ಎಚ್.ಬಿ.ಅಪ್ಪಣ್ಣಯ್ಯ ನಿಧನಕ್ಕೆ ಅನೇಕ ಗಣ್ಯರು ಬುಧವಾರ ಸಂತಾಪ ಸೂಚಿಸಿದ್ದಾರೆ. ಮಾತು ಕಟುವಾಗಿದ್ದರು, ಅಪ್ಪಣ್ಣಯ್ಯ ಮೃದು ಸ್ವಭಾವದ ವ್ಯಕ್ತಿ ಎಂದು ಜೆಡಿಎಸ್ ಮುಖಂಡ ಬಿ.ಟಿ.ರಾಜಶೇಖರ್ ತಿಳಿಸಿದರು. ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಮಾಜಿ ಮಂಡಲ ಪ್ರದಾನ್ ಎಚ್.ಎಸ್.ಶಿವಲಿಂಗಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಎಚ್.ಎಂ. ಮಂಜಪ್ಪ, ಮುಖಂಡರಾದ ಎಚ್.ಬಿ. ನಂಜುಂಡಪ್ಪ, ಎಚ್.ಎಂ. ಕುಮಾರ ಸ್ವಾಮಿ, ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.