ADVERTISEMENT

ಅರಸಿಕಟ್ಟೆ: ಅಭಿವೃದ್ಧಿ ಬಲು ದೂರ

ಗ್ರಾಮ ಸಂಚಾರ

ಬಾಬು ಎಂ.ಆರ್
Published 25 ಸೆಪ್ಟೆಂಬರ್ 2013, 8:40 IST
Last Updated 25 ಸೆಪ್ಟೆಂಬರ್ 2013, 8:40 IST
ಅರಸೀಕಟ್ಟೆ ಗ್ರಾಮದಲ್ಲಿ ನಿರ್ಮಿಸಿರುವ ಕಿರು ನೀರು ಸರಬರಾಜು ಟ್ಯಾಂಕ್‌ಗೆ ನಲ್ಲಿ ಅಳವಡಿಸಿಲ್ಲ. ಸುತ್ತ ಮುತ್ತ ಕಸದ ರಾಶಿಯೇ ಇದೆ.
ಅರಸೀಕಟ್ಟೆ ಗ್ರಾಮದಲ್ಲಿ ನಿರ್ಮಿಸಿರುವ ಕಿರು ನೀರು ಸರಬರಾಜು ಟ್ಯಾಂಕ್‌ಗೆ ನಲ್ಲಿ ಅಳವಡಿಸಿಲ್ಲ. ಸುತ್ತ ಮುತ್ತ ಕಸದ ರಾಶಿಯೇ ಇದೆ.   

ರಾಮನಾಥಪುರ: ಸಮೀಪದ ಅರಸಿಕಟ್ಟೆ­ಗೆ ಬರುವವರು ಒಮ್ಮೆ ಇಲ್ಲಿನ ದೇವಸ್ಥಾನ­ಕ್ಕೆ ಭೇಟಿ ಕೊಟ್ಟು ಹೋಗು­ತ್ತಾರೆ. ಆದರೆ ಈ ಗ್ರಾಮದ ಸ್ಥಿತಿಯನ್ನು ನೋಡಿದರೆ ಭಕ್ತರೂ ಅಸಹ್ಯ ಪಡುವಂತಾಗಿದೆ.

ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯಿಂದ 5 ಕಿ.ಮೀ. ದೂರದ ಅರಸಿಕಟ್ಟೆ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತ­ವಾಗಿದೆ. ಇಂದಿಗೂ ಅನೇಕ ಕುಟುಂಬ­ಗಳು ಗುಡಿಸಲಿನಲ್ಲಿ ವಾಸಿಸುತ್ತಿವೆ. ಗ್ರಾಮ­ದ­ಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಸಾಂಕ್ರಾಮಿಕ ರೋಗ­ಗಳನ್ನು ಆಹ್ವಾನಿಸುತ್ತಿವೆ. ಕುಡಿಯುವ ನೀರು ಸರಬರಾಜಿಗೆ ಟ್ಯಾಂಕ್‌ ನಿರ್ಮಿಸಿ­ದ್ದಾರೆ. ಆದರೆ, ಇನ್ನೂ ನಲ್ಲಿ ಅಳವಡಿ­ಸಿಲ್ಲ. ಟ್ಯಾಂಕ್‌ ಸುತ್ತ ಕಸದ ರಾಶಿ ಬಿದ್ದಿದೆ.

ಇಲ್ಲಿನ ಸಮುದಾಯ ಭವನದ ಸುತ್ತಲೂ ಕಸದ ರಾಶಿ, ಮದ್ಯದ ಖಾಲಿ ಬಾಟಲುಗಳ ರಾಶಿ ಇದೆ. ಸುತ್ತ ಗಿಡಗಂಟಿಗಳು ಬೆಳೆದು ಒಬ್ಬಂಟಿಯಾಗಿ ಜನರು ಓಡಾಡಲು ಹೆದರುವ ಸ್ಥಿತಿ ಇದೆ. ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಊರಿನ ಅಂದ ಕೆಡಿ­ಸಲು ತಮ್ಮ ಕಾಣಿಕೆಯನ್ನೂ ನೀಡಿದ್ದಾರೆ.

ಊರಿನ ಜನರು ಬಸ್‌ ಹಿಡಿಯ­ಬೇಕಾದರೆ ಸುಮಾರು ಒಂದೂವರೆ ಕಿ.ಮೀ. ನಡೆದುಕೊಂಡು ಬರಬೇಕು. ಇಲ್ಲಿನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ಸೌಲಭ್ಯಗಳಿಲ್ಲ. ಭಕ್ತರು ಇಲ್ಲಿನ ಅಸಮರ್ಪಕ ಸೌಕರ್ಯ ನೋಡಿ ದೇಗುಲದ ಆಡಳಿತ ಮಂಡಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೋಗುತ್ತಾರೆ.

ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದರೂ ಇಲ್ಲಿಗೆ ಬಸ್‌ ಸೌಲಭ್ಯ ಇಲ್ಲ. ರಸ್ತೆ ವ್ಯವಸ್ಥೆಯೇ ಸರಿಯಾಗಿಲ್ಲ. ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ದೇಗುಲ ತಲುಪುವುದೇ ಪ್ರಯಾಸದ ಸಂಗತಿ. ಕಷ್ಟಪಟ್ಟು ಬಂದರೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲ.

ದೇವಾಲಯ ಕೆರೆಯ ಏರಿ ಮೇಲೆ ಇದೆ. ಎಡ ಭಾಗದಲ್ಲಿ 50 ಅಡಿ ಆಳದಲ್ಲಿ ಅಡಕೆ ತೋಟ, ಬಲ ಭಾಗದಲ್ಲಿ ಹಳೇಯ ಕೆರೆ ಇದೆ.  ಆದರೂ ಎರಡೂ ಕಡೆ ತಡೆಗೂಡೆ ಇಲ್ಲ. ತಡೆಗೋಡೆ ನಿರ್ಮಿಸ­ಬೇಕು ಎಂಬುದು ಭಕ್ತರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.