ADVERTISEMENT

ಆಧುನಿಕತೆ ಭರಾಟೆ: ಸಂಕಷ್ಟದಲ್ಲಿ ಸುಣ್ಣಗಾರರು

ಮಾಡಾಳು ಶಿವಲಿಂಗಪ್ಪ
Published 4 ಆಗಸ್ಟ್ 2013, 6:29 IST
Last Updated 4 ಆಗಸ್ಟ್ 2013, 6:29 IST

ರಸೀಕೆರೆ: ಆಧುನಿಕತೆ ಹೊಡೆತಕ್ಕೆ ಗ್ರಾಮೀಣ ಗುಡಿ ಕೈಗಾರಿಕೆಗಳು, ಕುಲಕಸುಬುಗಳು ವಿನಾಶದಂಚಿಗೆ ತಲುಪುತ್ತಿವೆ. ಹಾಗೆ ಬದುಕು ಕಳೆದುಕೊಂಡವರ ಯಾದಿಯಲ್ಲಿ ಸುಣ್ಣಗಾರರು ಇದ್ದಾರೆ. ಇವರ ಬದುಕು ಬಿಸಿನೀರಿನಲ್ಲಿ ಕುದಿಯುವ ಸುಣ್ಣದ ಕಲ್ಲಿನಂತೆಯೇ ಬೆಂದು ಹೋಗಿದೆ.

ಅರಸೀಕೆರೆ ಸದಾ ಬರದ ತಾಲ್ಲೂಕು ಎನ್ನುವ ಹಣೆ ಪಟ್ಟಿ ಕಂಟ್ಟಿಕೊಂಡಿದ್ದರೂ ತನ್ನ ಒಡಲಲ್ಲಿ ಸಮೃದ್ದ ಖನಿಜ ಸಂಪನ್ಮೂಲಗಳನ್ನು ಅಡಕವಾಗಿಟ್ಟಿದೆ. ಕಲ್ಲು ಗಣಿಗಾರಿಕೆ, ಮ್ಯಾಂಗನೀಸ್, ಸುಣ್ಣದ ಕಲ್ಲು ಇತ್ಯಾದಿ ಖನಿಜಗಳು ಹೇರಳವಾಗಿ ದೊರೆಯುತ್ತಿವೆ. ಕೆಲವರು ಗಣಿಗಾರಿಕೆ ನಡೆಸಿ ಜೇಬು ತುಂಬಿಸಿಕೊಂಡಿದ್ದಾರೆ. ಸುಣ್ಣಗಾರರು ಮಾತ್ರ ಇನ್ನೂ ಬಡತನದಲ್ಲಿಯೇ ಜೀವನ ಸಾಗಿಸುತ್ತಿರುವುದು ವಿಪರ್ಯಾಸ.

ಹಳ್ಳ ಹಾಗೂ ಗುಡ್ಡಗಳಲ್ಲಿ ದೊರೆಯುವ ಸುಣ್ಣದ ಕಲ್ಲು ತಂದು ಗೂಡುಗಳಲ್ಲಿ ಸುಟ್ಟು ಮಾರಾಟ ಮಾಡುತ್ತಿರುವ ಕುಟುಂಬಗಳು ಬೀದಿಗೆ ಬಿದ್ದಿವೆ. ತಾಲ್ಲೂಕಿನಲ್ಲಿ ಹಾರನಹಳ್ಳಿ, ಬಾಗೇಶಪುರ, ಅಗ್ಗುಂದ, ಕಣಕಟ್ಟೆ ಮುಂತಾದ ಗ್ರಾಮಗಳಲ್ಲಿನ ಕುಟುಂಬಗಳು ಅನಾದಿ ಕಾಲದಿಂದಲೂ ಸುಣ್ಣದ ಕಲ್ಲು ಸುಡುವ ಕಾಯಕಮಾಡುತ್ತಾ ಬಂದಿವೆ. ಬದಲಾದ ಜೀವನಶೈಲಿಯಿಂದ ಸುಣ್ಣದ ಬೇಡಿಕೆ ಕಡಿಮೆಯಾಗಿದ್ದು, ಇದನ್ನೇ ನಂಬಿ ಕೊಂಡಿರುವ ಆನೇಕ ಕುಟುಂಬಗಳ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ.

ಸುಣ್ಣಗಾರರಿಗೆ ಸುಣ್ಣ ಸುಟ್ಟು ಮಾರಾಟ ಮಾಡುವುದನ್ನು ಬಿಟ್ಟರೆ ಬೇರೇನೂ ತಿಳಿದಿಲ್ಲ. ವ್ಯವಸಾಯ ಮಾಡಲು ಭೂಮಿ ಇಲ್ಲ. ಅನಿವಾರ್ಯ ವಾಗಿ ಈ ವೃತ್ತಿಯನ್ನೇ ನಂಬಿ ಜೀವನ ಸಾಗಿಸಬೇಕಾ ಗಿದೆ. ಈ ಕುಟುಂಬಗಳಿಗೂ ಆರ್ಥಿಕ ಸಹಾಯ ನೀಡಿದರೆ ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಸಹಾಯವಾಗುತ್ತದೆ. ಜತೆಗೆ ಗೃಹ ಕೈಗಾರಿಕೆಗಳಿಗೆ ಪುನಶ್ಚೇತನ ನೀಡಿದಂತಾಗುತ್ತದೆ.

ಹಾರನಹಳ್ಳಿ ಸುಣ್ಣ ಅಮೃತ: ಹಾರನಹಳ್ಳಿ ಸುಣ್ಣಕ್ಕೆ ಜಾನಪದ ಕತೆಯಲ್ಲೂ ಸ್ಥಾನ ಲಭಿಸಿದೆ. ಎಲೆ ಅಡಿಕೆಯಲ್ಲಿ ಹಾರನಹಳ್ಳಿ ಸುಣ್ಣ ಹಾಕಿಕೊಂಡರೆ ಬಾಯಿ ಕಂಪು ಜತೆಗೆ ಕೆಂಪು ಎಂದು ಹಿರಿಯರು ಹೇಳುತ್ತಾರೆ. ಒಂದು ಬಾರಿ ಸುಣ್ಣ ಕುದಿಸಿ ಮಡಿಕೆಯಲ್ಲಿ ಹಾಕಿದರೆ ದಿನ ಕಳೆದಂತೆ ರುಚಿ ಹೆಚ್ಚುತ್ತದೆ. ಎಲೆ ಅಡಿಕೆಯ ಜತೆ ಬಾಯಿಗೆ ಹಚ್ಚಿಕೊಂಡರೆ ಅಮೃತ ಸವಿದಂತೆ. ಈಗ ಪ್ಲಾಸ್ಟಿಕ್ ಟ್ಯೂಬ್‌ನಲ್ಲಿ ಲಭಿಸುವ ಸುಣ್ಣಕ್ಕೆ ಅಂಥ ರುಚಿಯಾಗಲಿ ಕಂಪಾಗಲಿ ಇಲ್ಲ ಎಂದು ನಂಜಪ್ಪ, ಶಂಕರಪ್ಪ ಮುಂತಾದವರು ನೆನಪಿಸಿಕೊಳ್ಳುತ್ತಾರೆ.

ಆಧುನಿಕ ಪ್ರಪಂಚದ ಯಾಂತ್ರಿಕ ಯುಗದ ತಳುಕು ಬಳುಕಿನ ಬಣ್ಣದ ಲೋಕದಲ್ಲಿ ಸುಣ್ಣಕ್ಕೆ ಬೇಡಿಕೆ ಇಲ್ಲದೆ ಸುಣ್ಣ ತಯಾರಕರ ಬದುಕು ಬಡವಾಗಿದೆ. ಹಬ್ಬ ಹರಿದಿನಗಳಲ್ಲಿ ಸುಣ್ಣಗಾರರು ಒಂದು ವಾರ ಮುಂಚಿತವಾಗಿ ಹಳ್ಳಿಗಳಿಗೆ ಬಂದು ಸುಣ್ಣ ಮಾರಾಟ ಮಾಡುತ್ತಿದ್ದರು. ಆದರೆ ಈಗ ಯಾರಿಗೂ ಸುಣ್ಣ ಬೇಕಾಗಿಲ್ಲ. ಈ ವೃತ್ತಿ ನೆಚ್ಚಿಕೊಂಡವರು ಈಗ ಒಪ್ಪತ್ತಿನ ಊಟಕ್ಕೂ ಯೋಚಿಸಬೇಕಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಕಷ್ಟ. ಮಕ್ಕಳನ್ನು ಸುಣ್ಣ ಸುಡುವ ಕಾಯಕದಲ್ಲಿ ತೊಡಗಿಸಿಕೊ ಳ್ಳುವ ದುಃಸ್ಥಿತಿ ಬಂದಿದೆ ಎಂಬುದು ಸುಣ್ಣಗಾರರ ಅಳಲು.

ಬಣ್ಣಗಳಿಗೆ ಮಾರು ಹೋದ ಮಂದಿ: ಗ್ರಾಮಾಂತರ ಪ್ರದೇಶಗಳಲ್ಲಿ ಯುಗಾದಿ, ಶಿವರಾತ್ರಿ, ದೀಪಾವಳಿ ಗೌರಿ ಹಬ್ಬ ಜಾತ್ರೆಗಳ ಸಂದರ್ಭದಲ್ಲಿ ಸುಣ್ಣಗಾರರಿಗೆ ಸುಗ್ಗಿಯಾಗಿತ್ತು. ಒಂದು ಹಳ್ಳಿಯಲ್ಲಿ ಜಾತ್ರೆ ಇದೆ ಎಂದರೆ ಇಡೀ ಹಳ್ಳಿಯೇ ಸುಣ್ಣ ಖರೀದಿಸುತ್ತಿತ್ತು. ಒಂದು ಜಾತ್ರೆಯಿಂದ ಬರುವ ಆದಾಯದಿಂದಲೇ ಅವರು ಒಳ್ಳೆಯ ಜೀವನ ಮಾಡಬಹುದಾಗಿತ್ತು. ಈಗಿನ ಸ್ಥಿತಿ ಬದಲಾಗಿದೆ. ಮಹಿಳೆಯರು ಹಬ್ಬ ಜಾತ್ರೆ ಸಂದರ್ಭದಲ್ಲಿ ಸುಣ್ಣ ತೆಗೆದುಕೊಂಡು ಬಿಸಿ ನೀರಿನಿಂದ ಕುದಿಸಿ ಮನೆಗಳಿಗೆ ಸುಣ್ಣ ಬಳಿದರೆ ಮಳೆ ಮತ್ತು ಬಿಸಿಲಿನ ಝಳಕ್ಕೂ ಜಗ್ಗದೆ ಮತ್ತೆ ಜಾತ್ರೆ ಬಂದರೂ ಸಹ ಗೋಡೆಗಳು ಹೊಳೆಯುವ ಕಾಲವೊಂದಿತ್ತು. ಈಗ ಸುಣ್ಣದ ಬಳಕೆ ಇತಿಹಾಸ ಪುಟಕ್ಕೆ ಸೇರುವ ಸ್ಥಿತಿಯಲ್ಲಿದೆ. ದೀರ್ಘ ಬಾಳಿಕೆಯ ವಿವಿಧ ಕಂಪನಿಗಳ ಬಣ್ಣಗಳು ಈಗ ಹಳ್ಳಿಗಳಿಗೂ ಪ್ರವೇಶ ಪಡೆದಿವೆ. ಈಗ ಈ ವೃತ್ತಿಯನ್ನೇ ನಂಬಿಕೊಂಡವರಿಗೆ ಪ್ರತ್ಯೇಕ ಯೋಜನೆ ರೂಪಿಸಿ ಅವರಿಗೆ ಪರ್ಯಾಯ ದಾರಿ ತೋರಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.