ADVERTISEMENT

ಆನೆ ಕಾರಿಡಾರ್ ನಿರ್ಮಾಣ: ರೈತರಿಗೆ ಒಕ್ಕಲೆಬ್ಬಿಸುವ ಆತಂಕ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 5:15 IST
Last Updated 11 ಅಕ್ಟೋಬರ್ 2011, 5:15 IST

ಸಕಲೇಶಪುರ: ತಾಲ್ಲೂಕಿನ ಐಗೂರು ಹಾಗೂ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆನೆ ಕಾರಿಡಾರ್‌ಗಾಗಿ ಸರ್ಕಾರ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುತ್ತಾರೆ ಎಂಬ ಒಂದು ಸುದ್ದಿ, ಬೃಹತ್ ಹೋರಾಟ ವೊಂದನ್ನು ಹುಟ್ಟುಹಾಕುವ ಕಡೆ ಹೆಜ್ಜೆ ಇಡುತ್ತಿದೆ.

ಆನೆ ಧಾಮ ಮಾಡುವುದೇನೋ ಸರಿ, ಆದರೆ `ಆನೆ ಕಾರಿಡಾರ್~ ಮಾಡುವುದು ಹೇಗೆ. ಪಶ್ಚಿಮ ಘಟ್ಟದಲ್ಲಿ ನೂರಾರು ವರ್ಷಗಳಿಂ ದಲೂ ಆನೆಗಳಿಗೆ ಹೇರಳವಾದ ಆಹಾರ, ನೀರು ದೊರೆಯುವ ಪ್ರದೇಶಗಳಲ್ಲಿ ಸಂಚಾರ ಮಾಡುವ ಅವುಗಳ ಮಾರ್ಗವನ್ನು `ಆನೆ ಕಾರಿಡಾರ್~ ಎನ್ನುತ್ತಾರೆ.

ಗ್ರಾಮಗಳಲ್ಲಿ ಜನರನ್ನು ಒಕ್ಕಲೆಬ್ಬಿಸಿ ಆನೆ ಕಾರಿಡಾರ್ ಮಾಡುತ್ತಾರೆ ಎಂಬುದು ಸುಳ್ಳು. ಆದರೆ ಬಿಸಿಲೆ ರಕ್ಷಿತ ಅರಣ್ಯವನ್ನು ವಿಸ್ತರಿಸಿ, ಅರಣ್ಯಕ್ಕೆ ಹೊಂದಿಕೊಂಡ ಕೆಲವು ಗ್ರಾಮಗಳ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಬೆಳವಣಿಗೆಯೊಂದಕ್ಕೆ ಮಾತ್ರ ಅರಣ್ಯ ಇಲಾಖೆ ಮುಂದಾಗಿರುವುದು ನಿಜ. ಕಾಡಾನೆಗಳು, ಹುಲಿ, ಕಡವೆ, ಸೇರಿದಂತೆ  ಪ್ರಾಣಿಗಳು ಕಾಡು ಬಿಟ್ಟು ಗ್ರಾಮಗಳಿಗೆ ನುಗ್ಗಿ ರೈತರ ಪ್ರಾಣ, ಬೆಳೆ ಹಾಗೂ ಆಸ್ತಿ ಹಾನಿ ಮಾಡುತ್ತಿವೆ. ಅವುಗಳನ್ನು ಸ್ಥಳಾಂತರ ಮಾಡಿ ಎಂದು ರೈತರು ಒತ್ತಾಯ ಮಾಡುತ್ತಿರುವುದಕ್ಕೆ ಅರಣ್ಯ ಇಲಾಖೆ ಪರಿಹಾರದ ಉಪಾಯವೇ ಅರಣ್ಯವನ್ನು ವಿಸ್ತರಣೆ ಮಾಡುವುದಾಗಿದೆ.

ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾದವ್ `ಪ್ರಜಾವಾಣಿ~ ಯೊಂದಿಗೆ ಮಾತನಾಡಿ, `ಬಿಸಿಲೆ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ  23 ಸಾವಿರ ಎಕರೆ ಕಂದಾಯ ಭೂಮಿ ಇರುವುದನ್ನು ಗುರುತಿಸಲಾಗಿದೆ. 1963ರ ಅರಣ್ಯ ಕಾಯ್ದೆ ಅನ್ವಯ ಸದರಿ ಭೂಮಿಯನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಿ, ಅರಣ್ಯ ಎಂದು ಘೋಷಣೆ ಮಾಡುವಂತೆ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಆ ಪ್ರದೇಶ ವ್ಯಾಪ್ತಿಯಲ್ಲಿ ಹಿಡುವಳಿ ಭೂಮಿ ಹೊಂದಿರುವ ಸುಮಾರು 380 ರೈತರು ಅರಣ್ಯ ವಿಸ್ತರಣೆ ಮಾಡಲು ಸೂಕ್ತ ಪರಿಹಾರ ನೀಡಿದರೆ ಭೂಮಿ ನೀಡಲು ಸಿದ್ಧರಿರುವುದಾಗಿ ಒಪ್ಪಿಗೆ ನೀಡಿರುವ ಪತ್ರಗಳನ್ನು ಇಲಾಖೆಗೆ ಸಲ್ಲಿಸಿದ್ದಾರೆ. ಇಲಾಖೆಯಿಂದ ಬಲವಂತವಾಗಿ ಭೂಸ್ವಾಧೀನ ಮಾಡುವ ಪ್ರಸ್ತಾವನೆ ಇಲ್ಲ~ ಎಂದರು.

ಗ್ರಾಮಸ್ಥರ ವಿರೋಧ: ಬಿಸಿಲೆ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ ಅರಣಿ, ಎತ್ತಳ್ಳ, ಬಿಸಿಲೆ, ಹುದುನೂರು, ಮ್ಯಾಗಡಹಳ್ಳಿ, ಹೊನ್ನಾಟ್ಲು, ಹಡ್ಲುಗದ್ದೆ, ಮಾವಿನೂರು, ನೆಟ್ಟಿಗಲ್ಲು, ಹಂಚಟ್ಟೆ, ಮಂಕನಹಳ್ಳಿ, ಬೋರ್‌ಮನೆ, ಕುರ್ಕಮನೆ, ಜಗಾಟ, ಕಾಗಿನಹರೆ, ಬಾಳೇಹಳ್ಳ, ಬಟ್ಟೆಕುಮರಿ, ಆನೆಗುಂಡಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕಂದಾಯ ಹಾಗೂ ಹ್ಯಾಮ್ಲೇಟ್ ಗ್ರಾಮಗಳ ವ್ಯಾಪ್ತಿಯನ್ನು ರಕ್ಷಿತ ಅರಣ್ಯಕ್ಕೆ ಸೇರಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಈ ಗ್ರಾಮಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಏಲಕ್ಕಿ, ಭತ್ತ, ಕಾಫಿ ಮುಂತಾದ ಬೆಳೆಗಳನ್ನು ಬೆಳೆದು ಬದುಕು ಸಾಗಿಸುತ್ತಿದ್ದಾರೆ. ರೈತರು ಸಾಗುವಳಿ ಮಾಡುತ್ತಿರುವ ಭೂಮಿಗೆ ಸರ್ಕಾರದಿಂದ ಹಕ್ಕುಪತ್ರ ದೊರೆತಿಲ್ಲ. ಇಲ್ಲಿನ ಬಹುತೇಕ ಮನೆಗಳು ಸಹ ಕಂದಾಯ ಭೂಮಿಯಾಗಿದೆ.

ಪಹಣಿಯಲ್ಲಿ 23 ಸಾವಿರ ಎಕರೆ ಪ್ರದೇಶ ಕಂದಾಯ ಇಲಾಖೆಗೆ ಸೇರಿರುವುದು ಕಂಡು ಬಂದರೂ ಅದರಲ್ಲಿ ಶೇ 40ಕ್ಕೂ ಹೆಚ್ಚು ಪ್ರದೇಶ ರೈತರ ಸಾಗುವಳಿಗೆ ಸೇರಿದ್ದಾಗಿದೆ.

 `ಗ್ರಾಮಗಳಿಗೆ ಭೇಟಿ ನೀಡಿ, ಸಾಗೂವಳಿ ಭೂಮಿಯ ಸಮೀಕ್ಷೆ ನಡೆಸಿ, ಗ್ರಾಮಸ್ಥರೊಂದಿಗೆ ಚರ್ಚೆ ಮಾಡದೇ ಒಮ್ಮೆಲೆ 23 ಸಾವಿರ ಎಕರೆ ಕಂದಾಯ ಭೂಮಿಯನ್ನು ಅರಣ್ಯ ಎಂದು ಘೋಷಣೆ ಮಾಡಿದರೆ ಪೂರ್ವಜರ ಕಾಲದಿಂದ ಬದುಕುತ್ತಿರುವ ನಾವು ಹೋಗುವುದು ಎಲ್ಲಿಗೆ~. ಹಕ್ಕು ಪತ್ರವಿಲ್ಲದೆ ಸಾಗುವಳಿ ಮಾಡುತ್ತಿರುವ ಭೂಮಿಗೆ ಸರ್ಕಾರ ಪರಿಹಾರ ನೀಡು ವುದಿಲ್ಲವಾದರೆ, ಸುಮಾರು 400ಕ್ಕೂ ಹೆಚ್ಚು ದಲಿತ, ಕೂಲಿ ಕಾರ್ಮಿಕ, ಬಡ ಕುಟುಂಬಗಳು ಬೀದಿ ಪಾಲಾಗಬೇಕಾಗುತ್ತದೆ. ಆದ್ದರಿಂದ ಅರಣ್ಯ ವಿಸ್ತರಣೆ ಮಾಡುವ ಪ್ರಸ್ತಾವನೆ ಕೈಬಿಟ್ಟು, ಅರಣ್ಯ ನಾಶ ಮಾಡಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಖಾಸಗಿ ಕಂಪೆನಿ ಗಳನ್ನು ಕಾಡಿನಿಂದ ಓಡಿಸಿ ಎಂದು ವಣ ಗೂರು ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜು, ಹೊನ್ನಾಟ್ಲು ಗ್ರಾಮದ ಪ್ರಕಾಶ್ ಇತರರು ಒತ್ತಾಯಿಸಿದ್ದರು.

ಒಟ್ಟಿನಲ್ಲಿ ಈ ಗ್ರಾಮಗಳ ಗ್ರಾಮಸ್ಥರಲ್ಲಿ ಸರ್ಕಾರ ತಮ್ಮನ್ನು ಒಕ್ಕಲೆಬ್ಬಿಸುತ್ತದೆ ಎಂಬ ಆತಂಕ ಮನೆ ಮಾಡಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಸಮರ್ಪಕ ಮಾಹಿತಿ ನೀಡುವುದು ಅಗತ್ಯವಾಗಿದೆ.
-ಜಾನೇಕೆರೆ.ಆರ್.ಪರಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.