ADVERTISEMENT

ಆಲೂಗೆಡ್ಡೆ ಬೆಳೆ ಹಾನಿಗೆ ಪರಿಹಾರ

ಸಿ.ಎಂ ಜತೆ ಚರ್ಚೆ: ವರದಿ ಸಲ್ಲಿಸಲು ರೇವಣ್ಣ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 8:19 IST
Last Updated 16 ಜೂನ್ 2018, 8:19 IST

ಹಾಸನ: ‘ಮೂರು ವರ್ಷಗಳಿಂದ ಮಳೆ ಇಲ್ಲದೆ ಸಂಕಷ್ಟದಲ್ಲಿದ್ದ ರೈತರು ಈ ಬಾರಿ ಹೆಚ್ಚು ಮಳೆಯಿಂದ ಬೆಳೆ ಹಾನಿಯಿಂದ ನಷ್ಟ ಹೊಂದಿದ್ದಾರೆ. ಬೆಳೆ ಹಾನಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೊತೆ ಮಾತನಾಡಿದ್ದೇನೆ’ ಎಂದು ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವರ್ಷದ ಮುಂಗಾರು ಜಿಲ್ಲೆಯಲ್ಲಿ ಸಾಕಷ್ಟು ನಷ್ಟ ಉಂಟು ಮಾಡಿದೆ. ಜಿಲ್ಲೆಯಲ್ಲಿ 8000 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಆಲೂಗೆಡ್ಡೆ ಬೆಳೆ ನಾಶವಾಗಿದೆ ಎಂದು ತಿಳಿಸಿದರು.

‘ಅಲ್ಲದೆ ಹೊಗೆಸೊಪ್ಪು, ನೆಲಗಡಲೆ, ಸೇರಿದಂತೆ ಇತರೆ ತರಕಾರಿ ಬೆಳೆಗಳು ನಾಶವಾಗಿದ್ದು, ಬೆಳೆ ನಾಶವಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವರದಿ ನೀಡುವಂತೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮಳೆಯಿಂದಾಗಿ ಉಂಟಾಗಿರುವ ಹಾನಿಗೆ ಕೂಡಲೇ ಪರಿಹಾರ ನೀಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ಮನೆ ಬಿದ್ದರೆ ಅಥವಾ ಮೃತ ಪಟ್ಟರೆ ಅಂತಹ ಕುಟುಂಬಗಳಿಗೆ 24 ಗಂಟೆ ಒಳಗೆ ಪರಿಹಾರ ನೀಡಬೇಕು. ಯಾವುದೇ ಆದೇಶಕ್ಕೆ ಕಾಯದ ರಸ್ತೆಗಳ ಗುಂಡಿ ಮುಚ್ಚಬೇಕು ಮತ್ತು ರಸ್ತೆಗೆ ಮರಗಳು ಬಿದ್ದರೆ ಕೂಡಲೇ ತೆರವು ಮಾಡುವಂತೆ ಎಂಜಿನಿಯರ್ ಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ತೀವ್ರ ಮಳೆಯಿಂದ ರಾಜ್ಯಾದ್ಯಂತ ಭಾರಿ ನಷ್ಟವುಂಟಾಗಿದ್ದು, ರಾಜ್ಯ ಪ್ರವಾಸ ಮಾಡಿ ಮಾಹಿತಿ ಪಡೆಯುತ್ತೇನೆ. ಜೂನ್ 17ರಂದು ಹುಬ್ಬಳ್ಳಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದು, ನಂತರ ಬೆಳಗಾವಿ, ಉಡುಪಿ, ಮಂಗಳೂರು, ಕೊಡಗು ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಹೊಸದಾಗಿ ತೋಟಗಾರಿಕೆ ಕಾಲೇಜು ಹಾಗೂ ಸೋಮನಹಳ್ಳಿ ಕಾವಲು ಬಳಿ ಆಲೂಗೆಡ್ಡೆ ಸಂಶೋಧನಾ ಕೇಂದ್ರ ತೆರೆಯುವ ಚಿಂತನೆ ಇದ್ದು, ತೋಟಗಾರಿಕೆ ಇಲಾಖೆ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.’ ಎಂದು ತಿಳಿಸಿದರು.

‘ಬೇರೆ ಯಾವುದೇ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಲು ಹೋಗಿಲ್ಲ. ಕೆಲವರು ನನ್ನ ವಿರುದ್ಧ ಕುತಂತ್ರ ನಡೆಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳಲ್ಲಿ ಜನರು ನಮ್ಮ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದಾರೆ. ಇತರ ಇಲಾಖೆಗಳಲ್ಲಿ ಮೂಗು ತೂರಿಸುವ ಬುದ್ಧಿ ನನಗಿಲ್ಲ. ಜಿಲ್ಲೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದರು.

‘ಜಿಲ್ಲೆಯ ನೀರಾವರಿ ಇಲಾಖೆಗೆ ಇಬ್ಬರು ಎಂಜಿನಿಯರ್ ಗಳನ್ನು ಸಿ.ಎಂ ಅವರೇ ಹಾಕಿದ್ದಾರೆ. ವದಂತಿಗಳಿಗೆ ಪ್ರತಿಕ್ರಿಯೆ ನೀಡುತ್ತಾ ಹೋದರೆ ನಾನು ಪೊಳ್ಳೆದ್ದು ಹೋಗುತ್ತೇನೆ. ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಇಲಾಖೆಗೆ ಮುಖ್ಯಮಂತ್ರಿಗೆ ಹೇಳಿ ಹಾಕಿಸಿಕೊಳ್ಳಲಿ. ನನ್ನ ಜಿಲ್ಲೆಗೆ ಸಂಬಂಧಿಸಿದಂತೆ ಕೆಲಸ ಮಾಡಿಕೊಳ್ಳುವ ಅಧಿಕಾರ ನನಗಿದೆ’ ಎಂದು ತಿರುಗೇಟು ನೀಡಿದರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಕೆ.ಎಸ್‌.ಲಿಂಗೇಶ್ ಇದ್ದರು.

ವಿಮಾನ ನಿಲ್ದಾಣ ಹೆಚ್ಚುವರಿ ಭೂಮಿ

‘ಹಾಸನದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಸಂಸದ ಎಚ್.ಡಿ.ದೇವೇಗೌಡರು ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ. ಅಗತ್ಯ ಭೂಮಿ ನೀಡಿದರೆ ನಿಲ್ದಾಣ ಮಾಡಿಕೊಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಪತ್ರ ಬರೆದಿದ್ದಾರೆ. ನಗರ ಹೊರವಲಯದಲ್ಲಿ 500 ಎಕರೆ ಭೂಮಿ ಈ ಕಾಮಗಾರಿಗೆ ಮೀಸಲಿಟ್ಟಿದ್ದು, ಇನ್ನು 200 ಎಕರೆ ಹೆಚ್ಚುವರಿಯಾಗಿ ಕೇಳಿದ್ದಾರೆ. ಶೀಘ್ರದಲ್ಲೇ ಈ ಕಾಮಗಾರಿಗೆ ಚಾಲನೆ ದೊರೆಯಲಿದೆ. 12 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು’ ಎಂದು ರೇವಣ್ಣ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆ ನಾಶವಾಗಿರುವ ಕುರಿತು ಸಮೀಕ್ಷೆಯನ್ನು ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ
- ಎಚ್‌.ಡಿ.ರೇವಣ್ಣ, ಸಚಿವ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.