ADVERTISEMENT

ಆಸ್ಪತ್ರೆ ಕಾಮಗಾರಿ ಸ್ಥಳದಲ್ಲಿ ಭಗ್ನಮೂರ್ತಿ: ಗೊಂದಲ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:51 IST
Last Updated 20 ಡಿಸೆಂಬರ್ 2012, 6:51 IST

ಹಾಸನ: ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ರಾತ್ರೋ ರಾತ್ರಿ ಭಗ್ನ ನಂದಿ ಮೂರ್ತಿಯನ್ನು ತಂದಿಟ್ಟು ಕೆಲವು ಕಿಡಿಗೇಡಿಗಳು ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ ಘಟನೆ ಬುಧವಾರ ಹಾಸನದ ಕೆ.ಆರ್.ಪುರಂನಲ್ಲಿ ನಡೆದಿದೆ.

ಇಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಗರದ ಖ್ಯಾತ ವೈದ್ಯರೊಬ್ಬರು ಆಸ್ಪತ್ರೆ ನಿರ್ಮಿಸುತ್ತಿದ್ದು, ಕೆಲವು ತಿಂಗಳಿಂದ ಅದರ ಕಾಮಗಾರಿ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ಅಲ್ಲಿ ಒಂದು ಭಗ್ನಗೊಂಡಿರುವ ನಂದಿಯ ಮೂರ್ತಿ ಕಾಣಿಸಿಕೊಂಡಿತ್ತು.

ಕಾಮಗಾರಿಯ ಜಾಗದಲ್ಲಿ ಕಬ್ಬಿಣ, ಮರಳು ಮತ್ತಿತರ ವಸ್ತುಗಳಿದ್ದು, ಇವುಗಳ ಮಧ್ಯದಲ್ಲಿ ಕಾರ್ಮಿಕರು ಆ ಮೂರ್ತಿಯನ್ನು ಗಮನಿಸಿರಲಿಲ್ಲ. ಆದರೆ ಬೆಳಿಗ್ಗೆ ಸ್ಥಳಕ್ಕೆ ಬಂದ ಶ್ರೀರಾಮಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೇಮಂತ್ ಹಾಗೂ ಇನ್ನೂ ಕೆಲವರು ಕಾರ್ಮಿಕರನ್ನು ಕರೆದು ದೇವರ ಮೂರ್ತಿಯನ್ನು ಇಲ್ಲೇಕೆ ಹಾಕಿದ್ದೀರಿ?

ಮೂರ್ತಿಗೆ ಅವಮಾನವಾಗಿದೆ ಎಂದಿದ್ದಲ್ಲದೆ, ಕಟ್ಟಡ ನಿರ್ಮಾಣಕ್ಕಾಗಿ ತೆಗೆದ ಗುಂಡಿಯಲ್ಲಿ ಮೂರ್ತಿ ಲಭಿಸಿದೆ, ಅಲ್ಲಿ ಹಿಂದೆ ದೇವಾಲಯ ಇದ್ದಿರುವ ಸಾಧ್ಯತೆ ಇದ್ದು, ಆ ಬಗ್ಗೆ ಉತ್ಖನನ ನಡೆಸಬೇಕು ಎಂದು ಒತ್ತಾಯಿಸಲು ಆರಂಭಿಸಿದರು. ಮಾತ್ರವಲ್ಲದೆ ಭಗ್ನ ಮೂರ್ತಿಗೆ ಮಾಲೆ ಹಾಕಿ ಅಲ್ಲಿಯೇ ಪೂಜೆಯನ್ನೂ ಮಾಡಿಬಿಟ್ಟರು.

ಇಷ್ಟೆಲ್ಲ ನಡೆಯುತ್ತಿದ್ದಂತೆ ವೈದ್ಯರು ಪೊಲೀಸರಿಗೆ ವಿಚಾರ ತಿಳಿಸಿದರು. ಪೊಲೀಸ್ ಅಧಿಕಾರಿಗಳ ಜತೆಯಲ್ಲಿ ತಹಶೀಲ್ದಾರ ಮಂಜುನಾಥ್ ಅವರೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.ಆದರೆ ಮೂರ್ತಿ ಯಾವ ದಿಕ್ಕಿನಿಂದಲೂ ನೆಲದ ಅಡಿಯಿಂದ ಲಭಿಸಿದಂತೆ ಗೋಚರಿಸುತ್ತಿರಲಿಲ್ಲ.

ಇದನ್ನು ಮನಗಂಡ ತಹಶೀಲ್ದಾರರು ಮೂರ್ತಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡರು. ಸ್ಥಳಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಗಳು ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.ಕೋಮು ಭಾವನೆಯನ್ನು ಕೆರಳಿಸಿ ಅಶಾಂತಿ ಉಂಟುಮಾಡಲು ಪ್ರಯತ್ನಿಸಿದ ಯುವಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಣಕ್ಕಾಗಿ ಬೇಡಿಕೆ: ಶಾಸಕ ಆರೋಪ
ಘಟನಾ ಸ್ಥಳಕ್ಕೆ ಬಂದಿದ್ದ ಶಾಸಕ ಎಚ್.ಎಸ್. ಪ್ರಕಾಶ್, `ಆಸ್ಪತ್ರೆ ಕಟ್ಟಿಸುತ್ತಿರುವ ವೈದ್ಯರನ್ನು ಬೆದರಿಸಿ ಹಣ ಪೀಕಿಸುವ ಉದ್ದೇಶದಿಂದ ಹಿಂದೂ ಸಂಘಟನೆಯ ಯುವಕನೊಬ್ಬ ಈ ಕೃತ್ಯ ನಡೆಸಿದ್ದಾನೆ. ಆ ಬಗ್ಗೆ ದಾಖಲೆ ಇದೆ' ಎಂದು ಆರೋಪಿಸಿದ್ದಾರೆ. ಘಟನೆ ಬಗ್ಗೆ ಪತ್ರಕರ್ತರ ಜತೆಗೆ ಮಾತನಾಡಿದ ಪ್ರಕಾಶ್, `15 ದಿನ ಹಿಂದೆ ವೈದ್ಯರಿಗೆ ಒಬ್ಬಾತ ಕರೆ ಮಾಡಿ 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆತ ಆಡಿರುವ ಮಾತುಗಳು ಮೊಬೈಲ್‌ನಲ್ಲಿ ದಾಖಲಾಗಿವೆ.

ಪ್ರಮುಖ ಹಿಂದೂ ಸಂಘಟನೆಯೊಂದರ ಜತೆಗೆ ಈ ಯುವಕ ಗುರುತಿಸಿಕೊಂಡಿದ್ದು, ತನ್ನ ಸ್ವಾರ್ಥಕ್ಕಾಗಿ ಜನರಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಅಶಾಂತಿ ಉಂಟುಮಾಡಲು ಪ್ರಯತ್ನಿಸಿದ್ದ. ಆತನ ವಿರುದ್ಧ ನಾವೇ ದೂರು ನೀಡುತ್ತೇವೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.